ಮಂಗಳೂರು ತಾಲೂಕು ವ್ಯಾಪ್ತಿಯ ಶಾಲೆಗಳಿಗೆ 4 ದಿನ ಹೆಚ್ಚುವರಿ ದಸರಾ ರಜೆ: ಶಿಕ್ಷಣ ಇಲಾಖೆ

Update: 2022-09-23 16:23 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಸೆ.23: ದಸರಾ ಹಬ್ಬಕ್ಕೆ ಪೂರಕವಾಗಿ ಮಂಗಳೂರು ತಾಲೂಕಿನಲ್ಲಿ ಸೆ.28ರಿಂದ ಅನ್ವಯಗೊಂಡಂತೆ ಅಕ್ಟೋಬರ್ 1ರವರೆಗೆ ಹೆಚ್ಚುವರಿ ನಾಲ್ಕು ದಿನಗಳ ರಜೆಯನ್ನು ಘೋಷಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಶೈಕ್ಷಣಿಕ ಮಾರ್ಗಸೂಚಿಯಂತೆ ಅಕ್ಟೋಬರ್ 3ರಿಂದ ಅಕ್ಟೋಬರ್ 16ರವರೆಗೆ ರಜೆಯನ್ನು ನಿಗದಿಪಡಿಸಲಾಗಿದೆ. ಈ ಮಧ್ಯೆ ಸೆ.26ರಿಂದ ಆರಂಭಗೊಳ್ಳುವ ಮಂಗಳೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಸೆ.26ರಿಂದಲೇ ರಜೆ ನೀಡುವಂತೆ ಪೋಷಕರು, ಜನಪ್ರತಿನಿಧಿಗಳು ಸರಕಾರಕ್ಕೆ ಮನವಿ ಮಾಡಿದ್ದರು. ಅದಕ್ಕೆ ಶಿಕ್ಷಣ ಸಚಿವರು ಪೂರಕವಾಗಿ ಸ್ಪಂದಿಸಿದ್ದರೂ ಕೂಡ ಇದೀಗ ರಾಜ್ಯ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಅಂದರೆ ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ಹೆಚ್ಚುವರಿ ರಜೆಗಳನ್ನು ಘೋಷಿಸಿದೆ.

ಅಕ್ಟೋಬರ್ 2ರ ರವಿವಾರ ಕಡ್ಡಾಯವಾಗಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸುವಂತೆ ಕಡ್ಡಾಯವಾಗಿ ಸೂಚಿಸಿದೆ. ವಿದ್ಯಾರ್ಥಿಗಳಿಗೆ ನೀಡಲಾದ ಈ ನಾಲ್ಕು ಹೆಚ್ಚುವರಿ ರಜೆಗಳನ್ನು ನವೆಂಬರ್‌ ತಿಂಗಳಿನ ನಾಲ್ಕು ಶನಿವಾರ ಪೂರ್ಣ ದಿನದ ತರಗತಿ ಮತ್ತು ಎರಡು ರವಿವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ರಜೆಯನ್ನು ಸರಿದೂಗಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News