ರೈತರ ಬೇಡಿಕೆಗೆ ಮಣಿದ ಹರ್ಯಾಣ ಸರಕಾರ: 21 ತಾಸುಗಳ ಹೆದ್ದಾರಿ ಬಂದ್ ಅಂತ್ಯ

Update: 2022-09-24 18:05 GMT
Photo : NDTV

ಹೊಸದಿಲ್ಲಿ, ಸೆ.24:  ಭತ್ತ ತ್ವರಿತ ಖರೀದಿಗೆ ಆಗ್ರಹಿಸಿ ಸುಮಾರು 21 ತಾಸುಗಳ ಕಾಲ ಹರ್ಯಾಣದ ಶಹಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸುತ್ತಿದ್ದ ಸಾವಿರಾರು ರೈತರು, ಅಂತಿಮವಾಗಿ ತಮ್ಮ ಬೇಡಿಕೆಗಳಿಗೆ ರಾಜ್ಯ ಸರಕಾರ ಮಣಿದ ಬಳಿಕ ರಸ್ತೆತಡೆಯನ್ನು ಹಿಂದೆಗೆದುಕೊಂಡಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಕುರುಕ್ಷೇತ್ರದ ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಗಿತ್ತು.

ಭಾರತೀಯ ಕಿಸಾನ್ ಯೂನಿಯನ್ (ಚೌದುನಿ) ನೇತೃತ್ವದಲ್ಲಿ ಶುಕ್ರವಾರ ನೂರಾರು ರೈತರು ದಿಲ್ಲಿ ಹಾಗೂ ಚಂಡೀಗಢವನ್ನು ಸಂಪರ್ಕಿಸುವ  ಹೆದ್ದಾರಿಯಲ್ಲಿ ‘ರಾಸ್ತಾ ರೋಖೋ’ ನಡೆಸಿದರು.

ಈ ಮಧ್ಯೆ ಹರ್ಯಾಣ ಸರಕಾರವು ಹೇಳಿಕೆಯೊಂದನ್ನು ನೀಡಿ, ಈ ಮೊದಲೇ ಘೋಷಿಸಿದಂತೆ ಅಕ್ಟೋಬರ್ 1ರಂದು ಅಧಿಕೃತ ಖರೀದಿ ದಾಖಲೆಪತ್ರಗಳನ್ನು ಪರಿಷ್ಕರಿಸಿದ ಬಳಿಕ ಧಾನ್ಯ ಮಾರುಕಟ್ಟೆಯಲ್ಲಿ ದಾಸ್ತಾನು ಮಾಡಲಾದ  ಎಲ್ಲಾ ಭತ್ತವನ್ನು ಗೋದಾಮುಗಳಿಂದ ಸಾಗಿಸಲಾಗುವುದು ಎಂದು ತಿಳಿಸಿದೆ.

ಭತ್ತದ ಬೆಳೆಯ ಅಧಿಕ ಫಸಲು ದೊರೆತಿರುವ ಐದು ರಾಜ್ಯಗಳಲ್ಲಿ ಅವುಗಳ ಖರೀದಿಯ ಮೇಲೆ ರಾಜ್ಯ ಸರಕಾರವು ಮಿತಿಯನ್ನು ವಿಧಿಸಿದ್ದು, ಪ್ರತಿ ಎಕರೆಗೆ 22ರಿಂದ 30 ಕ್ವಿಂಟಾಲ್‌ಗೆ ನಿಗದಿಪಡಿಸಿದೆ. ಉಳಿದ ಜಿಲ್ಲೆಗಳಲ್ಲಿ ಈ ಮಿತಿಯನ್ನು  ಪ್ರತಿ ಎಕರೆಗೆ 28 ಕ್ವಿಂಟಾಲ್‌ಗಳಿಗೆ ಹೆಚ್ಚಿಸಲಾಗಿದೆಯೆಂದು ಅದು ಹೇಳಿದೆ.

ಸರಕಾರವು ಭತ್ತದ ಖರೀದಿಯನ್ನು ಈ ಹಿಂದೆ ನಿಗದಿಪಡಿಸಿದ 22 ಕ್ವಿಂಟಾಲ್‌ಗಳ ಬದಲಿಗೆ 30ಕ್ವಿಂಟಾಲ್‌ಗೆ ಹೆಚ್ಚಿಸಿರುವುದರಿಂದ ಮುಷ್ಕರವನ್ನು ಹಿಂತೆಗೆಯಲು ನಿರ್ಧರಿಸಲಾಗಿದೆ ಎಂದು ಬಿಕೆಯು (ಚಾದುನಿ) ವರಿಷ್ಠ ಗುರುನಾಮ್ ಸಿಂಗ್‌ಚಾದುನಿ ತಿಳಿಸಿದ್ದಾರೆ.

ಮುಷ್ಕರದಿಂದಾಗಿ ಕಾನೂನು ಮತ್ತು ಶಿಸ್ತು ಕುಸಿಯುವ ಸಾಧ್ಯತೆಯನ್ನು ಗ್ರಹಿಸಲು ವಿಫಲವಾಗಿರುವುದಕ್ಕಾಗಿ  ಹೈಕೋರ್ಟ್ ತನ್ನನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಹರ್ಯಾಣ ಸರಕಾರ  ರೈತರ ಬೇಡಿಕೆಗಳಿಗೆ ಮಣಿದಿದೆ. ಹೆದ್ದಾರಿಯನ್ನು ಅಡೆತಡೆಯಿಲ್ಲದಂತೆ ವಾಹನ ಸಂಚಾರಕ್ಕೆ ಮುಕ್ತವಾಗಿಡಬೇಕು, ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವುಂಟಾಗಬಾರದು ಎಂದು  ಹರ್ಯಾಣ ಹೈಕೋರ್ಟ್ ನ್ಯಾಯಾಲಯಕ್ಕೆ ತಿಳಿಸಿತ್ತು.

“ರೈತರ ಹೆದ್ದಾರಿ ತಡೆಗೆ ಸಂಬಂಧಿಸಿ ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ವಿಚಾರಣೆ ನಡೆಸಿದ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್, ಯಾವುದೇ ಅಹಿತಕರ ಪರಿಸ್ಥಿತಿ ಸೃಷ್ಟಿಯಾಗುವುದನ್ನು ತಡೆಯಲು ಜಿಲ್ಲಾಡಳಿತವು ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದೆ. ಕಾನೂನು ಮತ್ತು ಶಿಸ್ತು ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಪ್ಪಿಸಲು, ಅತ್ಯಂತ ಎಚ್ಚರಿಕೆಯ ನಡೆಯನ್ನು ಇಡುವಂತೆ ಹೈಕೋರ್ಟ್ ಹರ್ಯಾಣ ಸರಕಾರಕ್ಕೆ ತಾಕೀತು ಮಾಡಿತ್ತು.

ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಬಳಿಕ, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಪುನರಾಂಭಗೊಂಡಿದೆ ಎಂದು ಕುರುಕ್ಷೇತ್ರ ಪೊಲೀಸ್ ಅಧೀಕ್ಷಕ ಸುರೀಂದರ್ ಸಿಂಗ್ ಭೊರಿಯಾ ತಿಳಿಸಿದ್ದಾರೆ.

ತೇವಾಂಶ ಹಾಗೂ ಮಳೆಯಿಂದಾಗಿ ಗೋದಾಮುಗಳಲ್ಲಿ ದಾಸ್ತಾನಿಡಲಾದ ಭತ್ತಕ್ಕೆ ಹಾನಿಯಾಗುವ ಸಾಧ್ಯತೆ ಬಗ್ಗೆ ರೈತರು ಕಳವಳಗೊಂಡಿದ್ದರು. ತಾವು ಬೆಳೆದ ಧಾನ್ಯಗಳ ದಾಸ್ತಾನಿ ಸಮರ್ಪಕವಾದ ಗೋದಾಮುಗಳ ಲಭ್ಯವಿಲ್ಲದಿರುವುದರಿಂದ ಸರಕಾರವು ಭತ್ತ ಖರೀದಿಯ ದಿನಾಂಕವನ್ನು ತ್ವರಿತಗೊಳಿಸಬೇಕೆಂದು ಆಗ್ರಹಿಸಿ ಅವರ ಶುಕ್ರವಾರದಿಂದ ಧರಣಿ ನಡೆಸುತ್ತಿದ್ದಾರೆ.

ತೇವಾಂಶದಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ಅಂಬಾಲ, ಕೈಥಾಲ್ ಮತ್ತಿತರ ಜಿಲ್ಲೆಗ ಧಾನ್ಯ ಮಾರುಕಟ್ಟೆಗಳಲ್ಲಿ ಸಾವಿರಾರು ಕ್ವಿಂಟಾಲ್ ಭತ್ತವು ಹಾನಿಗೀಡಾಗಿದೆಯೆಂದು ಧರಣಿ ನಿರತ ರೈತರು ತಿಳಿಸಿದ್ದರು. ಹರ್ಯಾ ಣ ಸರಕಾರವು ಅಕ್ಟೋಬರ್ 1ರಿಂದ ಭತ್ತವನು ಖರೀದಿಸಲು ಅಧಿಕೃತವಾಗಿ ನಿರ್ಧರಿಸಿತ್ತು. ಆದರೆ ಅನೇಕ ರೈತರು ತ್ವರಿತವಾಗಿ ಭಿತ್ತನೆಗಳನ್ನು ಮಾಡಿದ್ದರಿಂದಾಗಿ ಹಾಗೂ ಬೇಗನೆ ಫಸಲು ನೀಡುವ ತಳಿಗಳನ್ನು ಬಳಸಿದ್ದರಿಂದ ತ್ವರಿತವಾಗಿ ಫಸಲು ಬರಲು ಕಾರಣವಾಯಿತೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News