ಜಾರ್ಜ್ ಫೆರ್ನಾಂಡಿಸ್ ರಾಜಕೀಯ ಪಾಠ ಅಗತ್ಯ: ರಾಮಚಂದ್ರ ಗುಹಾ

Update: 2022-09-25 18:08 GMT

ಬೆಂಗಳೂರು, ಸೆ.25: ಕೇಂದ್ರ ಸರಕಾರದ ಮಾಜಿಕೈಗಾರಿಕಾ ಸಚಿವಜಾರ್ಜ್ ಫೆರ್ನಾಂಡಿಸ್ ಅವರ ರಾಜಕೀಯ ನಡೆಯ ಪಾಠ, ಈಗಿನ ಜನಪ್ರತಿನಿಧಿಗಳಿಗೆ ಅಗತ್ಯವಾಗಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ತಿಳಿಸಿದರು.

ರವಿವಾರ ನಗರದ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕೇಂದ್ರದ ಮಾಜಿ ಸಚಿವ, ದಿವಂಗತ ಜಾರ್ಜ್ ಫನಾರ್ಂಡಿಸ್ ಅವರ ಜೀವನ ಚರಿತ್ರೆ ಕುರಿತಾದ ‘ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫನಾರ್ಂಡಿಸ್’ ಪುಸ್ತಕವನ್ನು ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಜೀವನದುದ್ದಕ್ಕೂ ಸಮಾಜವಾದಿಯಾಗಿಯೇ ಇದ್ದ ಜಾರ್ಜ್ ಫನಾರ್ಂಡಿಸ್‍ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು. ಬರಿಗೈಲಿ ಮುಂಬೈಗೆ ಹೋಗಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ರಾಜಕೀಯವಾಗಿ ಬೆಳೆದವರು ಎಂದು ನುಡಿದರು.

1977ರಲ್ಲಿ ಬಿಹಾರದ ಮುಜಝರ್‍ಪುರ ಲೋಕಸಭಾ ಕ್ಷೇತ್ರದಿಂದ ದಾಖಲೆ ಅಂತರದ ಗೆಲುವು ಸಾಧಿಸಿದ್ದರು. ಆದರೆ, 2009ರಲ್ಲಿ ಅದೇ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಅವರೇ ಬೆಳೆಸಿದ ಶಿಷ್ಯ, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಒಪ್ಪಲಿಲ್ಲ. ರಾಜ್ಯಸಭೆಗೆ ಆರಿಸಿ ಕಳುಹಿಸುತ್ತೇವೆ ಎಂಬ ಜೆಡಿಯುನ ಕೊಡುಗೆಯನ್ನು ಆಕ್ರೋಶದಿಂದಲೇ ತಿರಸ್ಕರಿಸಿದ್ದರು.

‘ಸಮಾಜವಾದಿಗಳು ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸುವುದಿಲ್ಲ’ ಎಂದು ಹೇಳಿದ್ದರು.ಲೋಕಸಭೆ ಟಿಕೆಟ್ ನಿರಾಕರಿಸಿದ ನಿತೀಶ್ ನಿರ್ಧಾರದಿಂದ ವ್ಯಗ್ರಗೊಂಡ ಜಾರ್ಜ್, ಪಕ್ಷೇತರನಾಗಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ, ಠೇವಣಿ ಉಳಿಸಿಕೊಳ್ಳುವುದಕ್ಕೂ ಅವರಿಗೆ ಸಾಧ್ಯವಾಗಲಿಲ್ಲ. ಮರೆಗುಳಿ ಕಾಯಿಲೆಯಿಂದಾಗಿ ಸಾರ್ವಜನಿಕ ಬದುಕಿನಿಂದಲೂ ದೂರವಾಗಬೇಕಾಯಿತು ಎಂದು ವಿಶ್ಲೇಷಿಸಿದರು.

ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲಯ್ಯ ಮಾತನಾಡಿ, ಜಾರ್ಜ್ ಅವರ ಜೀವನ, ಸಂದೇಶ, ಹೋರಾಟದ ಹಾದಿ ಉತ್ತಮವಾಗಿದೆ. ಅವರು ನಮ್ಮ ನೆರೆಹೊರೆಯವರಾಗಿದ್ದು, ಹತ್ತಿರದಿಂದ ಅವರನ್ನು ಕಂಡಿದ್ದೇನೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News