×
Ad

‘ದಸರಾ ದರ್ಶಿನಿ’ಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ

Update: 2022-09-26 19:40 IST

ಮಂಗಳೂರು, ಸೆ.26: ದಸರಾ ಪ್ರಯುಕ್ತ ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ನಗರ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನದ ವಿಶೇಷ ಪ್ಯಾಕೇಜ್ ಪ್ರವಾಸ ಕಾರ್ಯಕ್ರಮಕ್ಕೆ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಸೋಮವಾರ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮಂಗಳೂರು ದಸರಾ ದರ್ಶನ ಯಾತ್ರೆಯ ಬಸ್ ಆರಂಭಿಸಿರುವುದು ಶ್ಲಾಘನೀಯ. ಹಿರಿಯ ಯಾತ್ರಿಕರು ಪೊಳಲಿ, ಕಟೀಲು, ಮಂಗಳಾದೇವಿ, ಬಪ್ಪನಾಡು ಹೀಗೆ ಎಲ್ಲಾ ದೇವಸ್ಥಾನಗಳಲ್ಲಿ ಮುಕ್ತವಾಗಿ ದರ್ಶನ ಮಾಡಬಹುದಾಗಿದೆ, ಅದಕ್ಕಾಗಿ ಇತರರನ್ನು ಅವಲಂಭಿಸುವಂತಿಲ್ಲ ಎಂದರು.

ಈ ಸಂದರ್ಭ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗಿಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ, ಡಿಟಿಒ ಮರಿಗೌಡ, ಎಟಿಒ ನಿರ್ಮಲಾ, ಡಿಪೋ ಮ್ಯಾನೇಜರ್ ಲವೀನಾ ಮತ್ತಿತರರು ಉಪಸ್ಥಿತರಿದ್ದರು.

ಸೆ.26ರಿಂದ ಅ.5ರವರೆಗೆ ಮಂಗಳೂರು (ಬಿಜೈ) ಬಸ್ ನಿಲ್ದಾಣದಿಂದ ಪ್ರತೀ ದಿನ ಬೆಳಗ್ಗೆ 8-9ಕ್ಕೆ ಹೊರಟು ಮಂಗಳಾದೇ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ ಹಾಗೂ ಬೀಚ್, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವಾ ಮಾರಿಯಮ್ಮ ದೇವಸ್ಥಾನ ಹಾಗೂ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ನವದುರ್ಗ ದರ್ಶನ ಮೂಲಕ ಮಂಗಳೂರು ಬಸ್ ನಿಲ್ದಾಣಕ್ಕೆ ವಾಪಸ್ ಆಗಲಿದೆ.

ದಿನನಿತ್ಯ ಮೂರು ಬಸ್‌ಗಳು ಚಲಿಸಲಿದ್ದು, ಈ ವಿಶೇಷ ಪ್ಯಾಕೇಜ್‌ಗೆ ಹಿರಿಯ ಪ್ರಯಾಣಿಕರ ದರ 300 ರೂ., ಮಕ್ಕಳಿಗೆ 200 ರೂ. ನಿಗದಿ ಮಾಡಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಇನ್ನೂ  2 ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News