ಅ.2 : ಚುಸಾಪ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಂಭ್ರಮ
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಯೋಗದೊಂದಿಗೆ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವುಗಳ ನೇತೃತ್ವದಲ್ಲಿ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಇದರ ಸಹಕಾರದೊಂದಿಗೆ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನೋತ್ತರ ಸಂಭ್ರಮ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಅ.2ರಂದು ರವಿವಾರ ನಗರದ ಉರ್ವಸ್ಟೋರ್ ಬಳಿಯಿರುವ ತುಳುಭವನದ ಸಿರಿ ಚಾವಡಿಯ ವೇದಿಕೆಯಲ್ಲಿ ನಡೆಯಲಿದೆ.
9ನೇ ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರಾವಳಿ ಕಾಲೇಜು ಸಮೂಹದ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಉದ್ಘಾಟಿಸುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಹಿರಿಯ ನಾಟಕಕಾರ ಗಂಗಾಧರ ಕಿದಿಯೂರು ಅವರ 14 ತುಳು ನಾಟಕಗಳ ಸಂಪುಟ ‘ಮೆನ್ಕುನ ಸಿರಿ ಸಿಂಗಾರ’ವನ್ನು ಬಿಡುಗಡೆಗೊಳಿ ಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಉಡುಪಿ ಜಿಲ್ಲಾ ಚುಸಾಪ ಜಿಲ್ಲಾ ಗೌರವಾಧ್ಯಕ್ಷೆ ತಾರಾ ಆಚಾರ್ಯ ಮತ್ತಿತರರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೆ ಚುಟುಕು ಕವಿಗೋಷ್ಠಿ, ನೃತ್ಯ ಸಂಗಮ, 2021-22ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 600ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಹಾಗೂ ದ್ವಿತೀಯ ಪಿಯುಸಿಯಲ್ಲಿ 575ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.