ಕಾಂಗ್ರೆಸ್‌ಗೆ ಅಧಿಕಾರ ನೀಡಲು ಜನಕಾತರ: ಎಂ.ಬಿ.ಪಾಟೀಲ್

Update: 2022-09-26 15:56 GMT

ಮಂಗಳೂರು, ಸೆ.26: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ತೀವ್ರ ಬೇಸತ್ತಿದ್ದಾರೆ. ಚುನಾವಣೆ ಸಂದರ್ಭ ನೀಡಿದ ಎಲ್ಲಾ ಭರವಸೆಗಳು ಹುಸಿಯಾಗುತ್ತಿರುವ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ದೈನಂದಿನ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಾಗಾಗಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಅಧಿಕಾರ ನೀಡಲು ಕಾತರರಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೀಗ ಜನರು ಕಾಂಗ್ರೆಸ್ ಪರವಾಗಿದ್ದಾರೆ. ಹಾಗಾಗಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಮಹತ್ತರವಾದ ಜವಾಬ್ದಾರಿ ಇದೆ. ಈ ಹಿಂದಿನ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕಾಗಿದೆ. ಬಜೆಪಿ ಆಡಳಿತ ವೈಫಲ್ಯದ ಬಗ್ಗೆ ಕೆಪಿಸಿಸಿ ಪುಸ್ತಕ ಪ್ರಕಟಿಸಲಿದೆ. ಅದನ್ನು ಮನೆ ಮನಗೆ ಮುಟ್ಟಿಸಬೇಕಾಗಿದೆ ಎಂದು ಎ..ಬಿ.ಪಾಟೀಲ್ ಹೇಳಿದರು.

ಪುಲ್ವಾಮ ಮತ್ತು ಬಾಲಾಕೋಟ್ ದಾಳಿಗಳನ್ನು ಮುಂದಿಟ್ಟುಕೊಂಡು ಜನರ ಭಾವನೆ ಕೆರಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಯು ಜನರನ್ನು ನೆಮ್ಮದಿಯಿಂದ ಬದುಕಲು ಬಿಡುವ ಬದಲು ಜಾತಿ, ಧರ್ಮದ ಹೆಸರಿನಲ್ಲಿ ದೇಶದ ಜನರನ್ನು ವಿಭಜಿಸಿದೆ. ಸ್ವಾರ್ಥ ರಾಜಕಾರಣಕ್ಕಾಗಿ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ರಾಜ್ಯವನ್ನೂ ಹಾಳು ಮಾಡುತ್ತಿದೆ ಎಂದು ಎಂ.ಬಿ.ಪಾಟೀಲ್ ಆಪಾದಿಸಿದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ವರ್ಷಗ ಸುಭದ್ರ ಆಡಳಿತ ಒದಗಿಸಿದ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 168 ಭರವಸೆಗಳಲ್ಲಿ 159 ಭರವಸೆಗಳನ್ನು ಈಡೇರಿಸಿದೆ. ಹೆಚ್ಚುವರಿಯಾಗಿ 35 ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. 300 ಕ್ಕೂ ಅಧಿಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಅದರಲ್ಲಿ ಒಂದಂಕಿಯ ಭರವಸೆಗಳನ್ನೂ ಮಾತ್ರ ಈಡೇರಿಸಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಅಷ್ಟೂ ಸರಕಾರಗಳು ಒಟ್ಟು 2.40 ಲಕ್ಷ ಕೋಟಿ ರೂ. ಸಾಲ ಮಾಡಿದ್ದವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 1.20 ಲಕ್ಷ ಕೋಟಿ ರೂ. ಸಾಲ ಮಾಡಿತ್ತು. ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದ ಬಿಜೆಪಿಯು ಮೂರು ವರ್ಷಗಳಲ್ಲಿ 3.5 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈ ಹಣದಲ್ಲೂ ಬಿಜೆಪಿಯವರು ಶೇ. 40 ಲಂಚ ಪಡೆಯುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.

ಯಾವುದೇ ಸರಕಾರಿ ಉದ್ಯೋಗ ಪಡೆಯುವುದಕ್ಕೂ ಲಂಚ ಕೊಡಬೇಕಾದ ಸ್ಥಿತಿ ರಾಜ್ಯದಲ್ಲಿದೆ. ಮುಖ್ಯಮಂತ್ರಿ ಹುದ್ದೆಯನ್ನೂ ಬಿಜೆಪಿ  ಬಿಟ್ಟಿಲ್ಲ. ಅದಕ್ಕೂ 2500 ಕೋ.ರೂ.ನಿಗದಿಪಡಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಆ್ಯಂಡ್ ಕಂಪನಿಯು ಲಂಚದ ಪ್ರಮಾಣವನ್ನು ಶೇ.80ಕ್ಕೆ ಹೆಚ್ಚಿಸಿದರೂ ಆಶ್ಚರ್ಯವಿಲ್ಲ ಎಂದು ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಗಂಗಾಧರ ಗೌಡ, ಜೆ.ಆರ್.ಲೋಬೊ, ಶಕುಂತಳಾ  ಶೆಟ್ಟಿ, ಮೊಯ್ದಿನ್ ಬಾವ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಇನಾಯತ್ ಅಲಿ ಮುಲ್ಕಿ, ಕೃಪಾ ಆಳ್ವ, ಎಐಸಿಸಿ ಸದಸ್ಯೆ ಕವಿತಾ ಸನಿಲ್, ಮುಖಂಡರಾದ ಡಾ. ರಘು ಸುಳ್ಯ, ಸುರೇಶ್ ಬಳ್ಳಾಲ್, ರಾಜಶೇಖರ್ ಕೋಟ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕ್ಕಿಂ ಡಿಸೋಜ, ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಇತರ ಮುಂಚೂಣಿ ಘಟಕಗಳ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ನಾರಾಯಣ ನಾಯ್ಕ್, ಲಾರೆನ್ಸ್ ಡಿಸೋಜ, ಸುಭಾಷ್ ಕೊಲ್ನಾಡು, ಡಾ.ಶೇಖರ್ ಪೂಜಾರಿ, ಸುದರ್ಶನ್ ಜೈನ್, ಬಿ.ಎಂ.ಅಬ್ಬಾಸ್ ಅಲಿ, ಮೋಹನ್ ಗೌಡ, ಸಚಿನ್ ರಾಜ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಶಾಸಕ ಐವನ್ ಡಿಸೋಜ ವಂದಿಸಿದರು.

ಮುಂದಿನದು ನನಗೆ ಕೊನೆಯ ಚುನಾವಣೆ: ರಮಾನಾಥ ರೈ

ನನಗೀಗ 75 ವರ್ಷ ವಯಸ್ಸಾಗಿದೆ. ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯು ನನ್ನ ಬದುಕಿನ ಕೊನೆಯ ಚುನಾವಣೆಯಾಗಿದೆ ಎಂದು ಮಾಜಿ ಸಚಿವ, ಪಕ್ಷದ ಹಿರಿಯ ನಾಯಕ ಬಿ. ರಮಾನಾಥ ರೈ ಹೇಳಿದರು.

ಜಿಲ್ಲೆಯಲ್ಲಿ ಪಕ್ಷಕ್ಕೆ ಈಗಲೂ ಭದ್ರ ನೆಲೆ ಇದೆ. ದೇಶದಲ್ಲಿ ಕಾಂಗ್ರೆಸ್ ಸೋತಿದ್ದಾಗ ಇಂದಿರಾ ಗಾಂಧಿ ಅವರನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಮರುಜೀವ ನೀಡಿದ್ದ ಜಿಲ್ಲೆ ನಮ್ಮದು. ಈ ಇತಿಹಾಸ ಮರುಕಳಿಸಲಿದೆ ಎಂದು ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ವಿಧಾನ ಸಭಾ ಚುನಾವಣೆ ಪಕ್ಷದ ಅಳಿವು ಉಳಿವಿನ ಪ್ರಶ್ನೆ ಎಂದು ಸವಾಲಾಗಿ ಸ್ವೀಕರಿಸಿ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು. ಬಸವಣ್ಣ ಹಾಗೂ ನಾರಾಯಣ ಗುರುಗಳ ಸಂದೇಶಗಳೇ ನಮ್ಮ ಪಕ್ಷದ ತತ್ವವಾಗಿದೆ.  ಕಾಂಗ್ರೆಸ್ ಗೆದ್ದರೆ ಸಾಮರಸ್ಯ ಬಲಗೊಳ್ಳುತ್ತದೆ ಎಂದು ರಮಾನಾಥ ರೈ ಅಭಿಪ್ರಾಯಪಟ್ಟರು.

ಬಹುತ್ವ ಸಂಸ್ಕೃತಿಯ ದೇಶದಲ್ಲಿರುವ ಏಕೈಕ ಜಾತ್ಯತೀತ ಪಕ್ಷ ನಮ್ಮದು. ಜಿಲ್ಲೆಯಲ್ಲಿ ಧರ್ಮಾಧಾರಿತವಾಗಿ ನಡೆದ ಹಿಂದೂ ಹಾಗೂ ಮುಸ್ಲಿಮರ ಕೊಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಆರೋಪಿ ಇಲ್ಲ ಎಂದು ಗರ್ವದಿಂದ ಹೇಳಿಕೊಳ್ಳುತ್ತೇನೆ ಎಂದು ರೈ ಹೇಳಿದರು.

ಹತ್ಯೆಯಲ್ಲೂ ಲಾಭ ಪಡೆಯಲು ಬಿಜೆಪಿ ಯತ್ನ: ಸೊರಕೆ

ಬಿಜೆಪಿಗರು ಪ್ರತಿ 10 ಮನೆಗೆ ಒಬ್ಬರು ಪೇಜ್ ಪ್ರಮುಖ್ ಕಾರ್ಯಕರ್ತರನ್ನು ನೇಮಿಸಿದ್ದಾರೆ. ಹಾಗಾಗಿ ನಾವು ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟಿದರೆ ಸಾಲದು. ಕುಟುಂಬ ಸಮ್ಮಿಲನದಂತಹ ಕಾರ್ಯಕ್ರಮದ ಮೂಲಕ ತಳಮಟ್ಟವನ್ನು ತಲುಪಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಲಹೆ ನೀಡಿದರು.

ಧರ್ಮಾಧಾರಿತ ಹತ್ಯೆಗಳಿಂದ ಪ್ರಯೋಜನವಾಗುತ್ತದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದರು. ಆದರೆ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಸಂಸದ ನಳಿನ್ ಕುಮಾರ್‌ರನ್ನು ಅವರ ಪಕ್ಷದ ಕಾರ್ಯಕರ್ತರೇ ಅಟ್ಟಾಡಿಸಿದ್ದ ದೃಶ್ಯವನ್ನು ನೊಡಿದ್ದೇವೆ. ಸುನಿಲ್ ಕುಮಾರ್ ಮೇಜಿನ ಕೆಳಗೆ ಅವಿತಿದ್ದನ್ನು ನೋಡಿದ್ದೇವೆ. ಕಲ್ಲಡ್ಕ ಪ್ರಭಾಕರ ಭಟ್ಟರ ಕಾಲರನ್ನು ಅವರ ಬೆಂಬಲಿಗರೇ ಹಿಡಿದಿದ್ದನ್ನು ನೋಡಿದ್ದೇವೆ. ಪಕ್ಷಕ್ಕಾಗಿರುವ ಈ ಹಾನಿಯನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯನ್ನು ಬಿಜೆಪಿ ನಾಯಕರು ಕರೆಸಿದರು. ಅದಾನಿಗೆ ಮಾರಾಟವಾಗಿರುವ ಮಂಗಳೂರು ಬಂದರಿನಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಜನರು ಸೇರುವುದಿಲ್ಲ ಎಂದು ಖಚಿತವಾದಾಗ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು, ಫಲಾನುಭವಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಫರ್ಮಾನು ಹೊರಡಿಸಿದರು. ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಕಲಾವಿದರಿಂದಲೂ ಹೇಳಿಸಿದರು. ಆದರೂ ಜನ ಬರಲಿಲ್ಲ. ಆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರ ಭಾಷಣ ಎಷ್ಟು ನೀರಸವಾಗಿತ್ತು ಎಂದರೆ, ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಅವರು ಕಾರ್ಯಕ್ರಮದಲ್ಲಿ ನಿದ್ದೆ ಹೋದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎಂದು ಸೊರಕೆ ತಿಳಿಸಿದರು.

ಪ್ರಧಾನಿ ಭಾಗವಹಿಸಿದ್ದ ಆ ಸರಕಾರಿ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯನ್ನು ಹಾಡಿಲ್ಲ. ಮಂಗಳೂರು ಬಂದರಿನ ನಿರ್ಮಾತೃ ಶ್ರೀನಿವಾಸ ಮಲ್ಯ ಅವರ ಹೆಸರನ್ನೂ ಸ್ಮರಿಸದೆ ಅವಮಾನ ಮಾಡಿದ್ದಾರೆ ಎಂದು ಸೊರಕೆ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News