×
Ad

ಬೆಂಗಳೂರು: ಗಮನ ಸೆಳೆದ ಸರ್ವಧರ್ಮೀಯರ ಮಸೀದಿ ದರ್ಶನ..!

Update: 2022-09-26 21:56 IST

ಬೆಂಗಳೂರು, ಸೆ. 26: ಜಮಾಅತೆ ಇಸ್ಲಾಮಿ ಹಿಂದ್ ಜಯನಗರ ಘಟಕ ಇಲ್ಲಿನ ಬನ್ನೇರುಘಟ್ಟ ಮುಖ್ಯ ರಸ್ತೆಯ ಬಿಲಾಲ್ ಮಸೀದಿಯಲ್ಲಿ ಆಯೋಜಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಸೀದಿಗೆ ಭೇಟಿ ನೀಡಿದ ಸರ್ವಧರ್ಮೀಯ ಮಹಿಳೆಯರು ಹಾಗು ಪುರುಷರು ಮಸೀದಿಯೊಳಗೆ ಬಂದು ಅಲ್ಲಿನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ನಮಾಝ್ (ಪ್ರಾರ್ಥನೆ)ಗೆ ಕರೆಯುವ ಅಝಾನ್, ಪ್ರಾರ್ಥನೆಗೆ ಮುನ್ನ ನೆರೆವೇರಿಸುವ ವಝೂ (ಕೈ, ಕಾಲು, ಮುಖ ಸ್ವಚ್ಛಗೊಳಿಸುವ ಪ್ರಕ್ರಿಯೆ), ನಮಾಝ್ ಮಾಡುವ ಸಭಾಂಗಣ, ಖುತ್ಬಾ (ಪ್ರವಚನ) ನೀಡುವ ಸ್ಥಳ, ಗ್ರಂಥಾಲಯ, ಮಸೀದಿಯಲ್ಲಿ ಮಾಡುವ ಪ್ರಾರ್ಥನೆ, ಪ್ರವಚನಗಳ ಅರ್ಥ ಸಹಿತ  ಎಲ್ಲ ಮಾಹಿತಿ ಪಡೆದರು. ಮಸೀದಿ, ಮದ್ರಸ, ಕುರ್ ಆನ್ ಇತ್ಯಾದಿಗಳ ಬಗ್ಗೆ ತಮಗಿದ್ದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. 

ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯ ಕರೆಯಂತೆ ಇಡೀ ದೇಶದಲ್ಲಿ ಮಸ್ಜಿದ್ ದರ್ಶನ ನಡೆಯುತ್ತಿದೆ ಎಂದು ಆಯೋಜಕರು ಮಾಹಿತಿ ನೀಡಿ ಇಸ್ಲಾಮ್ ಧರ್ಮದ ಮೂಲ ತತ್ವಗಳ ಕುರಿತ ಮಾಹಿತಿ  ಪುಸ್ತಕಗಳನ್ನು ದರ್ಶನಕ್ಕೆ ಬಂದವರಿಗೆ ನೀಡಲಾಯಿತು.

ಮಸೀದಿಗೆ ಭೇಟಿ ನೀಡಿದ್ದ  ಹಿರಿಯ ಸಾಹಿತಿ ಡಾ.ಕೆ.ಮರಳುಸಿದ್ದಪ್ಪ, ನನ್ನ ಬಹುದಿನಗಳ ಆಸೆ ಈಡೇರಿದೆ. ಹಿಂದುತ್ವ, ಹಿಂದೂ ಧರ್ಮ ಎನ್ನುವುದರಲ್ಲೇ ನೂರೆಂಟು ಜಾತಿಗಳಿವೆ. ಬೇರೆ-ಬೇರೆ ಧರ್ಮ ಜಾತಿಗಳ ನಡುವೆ ಶಾಂತಿ, ಸಮಾನತೆಯ ಸಾರವನ್ನು ಅಗತ್ಯವಾಗಿ ಹರಡಬೇಕಿದೆ ಎಂದು ನುಡಿದರು.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಮಾತನಾಡಿ, ಮಸೀದಿ ಕುರಿತು ಇರುವ ಗೊಂದಲ ಮತ್ತು ಆರೋಪಗಳ ಕುರಿತ ವಾಸ್ತವವನ್ನು ತಿಳಿಸಿ ಪರಸ್ಪರರ ನಡುವೆ ಕತ್ತಲಾಗುತ್ತಿರುವ ಸಂಶಯದ ಗೋಡೆ ಕೆಡವಿ ವಿಶ್ವಾಸದ ಸೇತುವೆ ನಿರ್ಮಿಸುವ ಉದ್ದೇಶದಿಂದ    ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News