ರೂಢಿಯ ಪರಿಕಲ್ಪನೆ

Update: 2022-09-27 04:54 GMT

ಮೊನ್ನೆ ನಮ್ಮ ನೆರೆಮನೆಯಲ್ಲಿ ಒಂದು ಮದುವೆಯ ನಿಶ್ಚಯದ ಪ್ರಾಸ್ತಾವಿಕ ಮಾತನಾಡುವುದಕ್ಕೆ ಕುಳಿತಿದ್ದೆವು. ವರದಕ್ಷಿಣೆ ವರೋಪಚಾರದ ಮಾತುಕತೆಗಳ ಅಲೆದಾಟ ಆರಂಭವಾಗಿತ್ತು. ಅಷ್ಟರಲ್ಲಿ ಬಳಿಯಲ್ಲಿಯೇ ಕುಳಿತ ಒಬ್ಬ ಹುಡುಗನು ಸಟಕ್ಕನೆ ಒಂದೇ ಸೀನಿದ. ಕೂಡಲೇ ಹತ್ತಿರದಲ್ಲಿದ್ದ ಒಬ್ಬ ಸಿಟ್ಟಿನ ಮುದುಕನು ಆ ಹುಡುಗನಿಗೆ ಒಂದು ಏಟು ಹಾಕಿಬಿಟ್ಟ. ಮಗುವು ಅಳಲಾರಂಭಿಸಿತು. ಅದನ್ನು ಒಬ್ಬರು ಒಳಗೆ ಎತ್ತಿಕೊಂಡೊಯ್ದರು. ಇದೆಲ್ಲವನ್ನೂ ನೋಡಿ ಅಲ್ಲಿಯೇ ಇದ್ದ ಇನ್ನೊಬ್ಬ ಗೃಹಸ್ಥರು ‘‘ಇದರಲ್ಲಿ ಹುಡುಗನದು ಏನು ತಪ್ಪು? ಸೀನು ಬಂದಿತು, ಸೀತುಬಿಟ್ಟ. ಪಾಪ! ಮಗುವಿಗೆ ಹೊಡೆಯಬೇಕೇ?’’ ಎಂದರು.

ಈ ಬಗೆಯ ಎಷ್ಟೋ ರೂಢಿಗಳು ಪ್ರತಿಯೊಂದು ಸಮಾಜದಲ್ಲಿಯೂ ಇರುವುದುಂಟು. ಇವಕ್ಕೆ ಸಂಪ್ರದಾಯಗಳು ಅಥವಾ ನಡವಳಿಕೆಗಳೆಂದು ಹೆಸರಿದೆ. ಚಿಕ್ಕಂದಿನಲ್ಲಿ ಈ ರೂಢಿ ಅಥವಾ ಸಂಪ್ರದಾಯಗಳ ತಿಳುವಳಿಕೆ ಇಲ್ಲದ ಬಾಲಕರಿಗೆ ಅಡಿಗಡಿಗೆ ಹೇಳಿಸಿಕೊಂಡು, ಸಿಟ್ಟುಮಾಡಿಸಿಕೊಂಡು, ಕೆಲಸಾರಿ ಪೆಟ್ಟುತಿಂದು ಇವನ್ನೆಲ್ಲ ಕಲಿತುಕೊಳ್ಳಬೇಕಾಗುತ್ತದೆ. ಸಂಪ್ರದಾಯಗಳು ತಲೆತಲಾಂತರದಿಂದ ಸಾಗಿಬಂದ ನಡವಳಿಕೆಗಳು. ಒಂದು ನಾಡಿನ ಸಂಪ್ರದಾಯಗಳು ಇನ್ನೊಂದು ನಾಡಿನಂತೆ ಇರುವುದಿಲ್ಲ. ಆದುದರಿಂದ, ಒಂದು ನಾಡಿನವರು ಇನ್ನೊಂದು ನಾಡಿಗೆ ಹೋಗುವಾಗ ಅಲ್ಲಿಯ ದೇಶಾಚಾರಗಳನ್ನು ಅರಿತುಕೊಂಡಿರದಿದ್ದರೆ ನಗೆಗೆ ಈಡಾಗಿ ಅಸಂಸ್ಕೃತರೆಂದು ಎಣಿಸಿಕೊಳ್ಳಬೇಕಾಗುವುದು. ಒಂದು ನಾಡಿನಲ್ಲಿಯೇ ಒಂದೊಂದು ಸಮಾಜದ ರೂಢಿ ಸಂಪ್ರದಾಯಗಳಲ್ಲಿ ಮತ್ತೆ ಎಷ್ಟು ಭಿನ್ನ ಭೇದಗಳಿರುತ್ತವೆ. ಅಷ್ಟೇ ಏಕೆ? ಮನೆತನ-ಮನೆತನಗಳ ಕುಲಾಚಾರಗಳೂ ಒಂದು ಬಗೆಯವಾಗಿರುವುದಿಲ್ಲ. ನಮ್ಮ ನಾಡಿನವರು ಗೂಬೆಯನ್ನು ಅಶುಭ ಪ್ರಾಣಿಯೆನ್ನುವರು. ಇನ್ನು ಕೆಲವು ನಾಡಿನವರು ಅದನ್ನು ಪವಿತ್ರವೆಂದು ಎಣಿಸುವರು, ಚಂಡಿಕೆ ಬಿಡಿಸುವುದು ಧರ್ಮವೆಂದು ಕೆಲವು ಸಮಾಜಗಳು ತಿಳಿದಿದ್ದರೆ, ಬೋಳುತಲೆಯೇ ಧರ್ಮಸಮ್ಮತವೆಂಬ ಭಾವನೆಯಿರುವ ಪಂಗಡಗಳೂ ಇವೆ. ಕೆಲವು ಮನೆತನಗಳಲ್ಲಿ ಮದುವೆಯ ಕಾಲಕ್ಕೆ ಬನ್ನಿಯ ಟೊಂಗೆಯನ್ನು ತಂದು ಪೂಜಿಸುವ ಸಂಪ್ರದಾಯವಿದ್ದರೆ ಇನ್ನು ಕೆಲವು ಮನೆತನಗಳಲ್ಲಿ ಇಪ್ಪಿಯ ಕೊಂಬೆಯನ್ನು ತಂದು ದೇವರಂತೆ ಮರ್ಯಾದಿಸುವುದುಂಟು.

 ಇಂತಹ ರೂಢಿಗಳು ಏಕೆ ಉಂಟಾದವು? ಹೇಗೆ ಉಂಟಾದವು? ಎಂಬುದನ್ನು ನಿಶ್ಚಿತವಾಗಿ ಹೇಳಲಿಕ್ಕಾಗುವುದಿಲ್ಲ. ಕಾರಣವಿಲ್ಲದೆ ಕಾರ್ಯವಿಲ್ಲ, ಎಂಬುದು ನಿಜ. ಆದರೂ ಆ ಹಿಂದಿನ ಕಾಲದ ಸಂಪ್ರದಾಯಗಳ ಹುಟ್ಟಿನ ಗುಟ್ಟನ್ನು, ಉಗಮದ ಕಾರಣ ಮೀಮಾಂಸೆಯನ್ನು ಊಹೆಯಿಂದ ತಿಳಿದುಕೊಳ್ಳಬೇಕೇ ಹೊರತು ಎದೆ ತಟ್ಟಿ ಹೇಳಲಿಕ್ಕಾಗುವುದಿಲ್ಲ. ರೂಢಿ ಅಥವಾ ಸಂಪ್ರದಾಯಗಳ ಉಗಮವು ವಿಚಾರ ವಿಮರ್ಶೆಗಳಲ್ಲಿ ಇಲ್ಲ; ಭಾವನೆಯಲ್ಲಿದೆ, ಶ್ರದ್ಧೆಯಲ್ಲಿದೆ, ವ್ಯಕ್ತಿಯಲ್ಲಾಗಲೀ, ಸಮಾಜದಲ್ಲಾಗಲೀ, ವಿಚಾರ ವಿಮರ್ಶೆಯ ಶಕ್ತಿಯು ಹೆಚ್ಚಿದಂತೆ ರೂಢಿಗಳ ಪ್ರಾಬಲ್ಯವು ಕಡಿಮೆಯಾಗುವುದು, ಸಮಾಜದ ಪ್ರಾಥಮಿಕ ಸ್ಥಿತಿಯಲ್ಲಿ ಬುದ್ಧಿಶಕ್ತಿಯು ಇನ್ನೂ ಬೆಳೆದಿದ್ದಿಲ್ಲ. ಆಗಿನ ಜನರಿಗೆ ತುಲನಾತ್ಮಕ ವಿಚಾರ ವಿಮರ್ಶೆಗಳ ಕಲ್ಪನೆಯೂ ಇರಲಿಲ್ಲ. ಭಾವನಾಶಕ್ತಿಯೇ ತಾನೇ ತಾನಾಗಿ ಆಗಿನ ಜನಸಮಾಜವನ್ನು ಆಳುತ್ತಲಿತ್ತು. ಈಗಲೂ ಆರಂಭದ ಸ್ಥಿತಿಯ ಸಮಾಜಗಳು ರೂಢಿ ಅಥವಾ ಸಂಪ್ರದಾಯಗಳ ಬಂಧನದಲ್ಲಿರುವುದು ಈ ಕಾರಣದಿಂದಲೇ. ಮನುಷ್ಯರಲ್ಲಿ ತಿಳುವಳಿಕೆ ಬೆಳೆದುಬಂದಂತೆ ಕಟ್ಟು-ಕಟ್ಟಳೆ (Laws)ಗಳಿಗೆ ಹೆಚ್ಚು ಹೆಚ್ಚು ಮಹತ್ವವು ಬರಲಾರಂಭಿಸಿದೆ. ಎಷ್ಟೋ ಸಾರಿ ರೂಢಿಗಳೇ ಕಟ್ಟಲೆ (ಕಾಯ್ದೆ)ಗಳಾಗಿ ಪರಿಣಮಿಸುವುದುಂಟು.

ಕಟ್ಟಳೆಗಳನ್ನು ಜನರು ತಮಗೆ ಸರಿದೋರಿದಂತೆ ಬದಲಿಸಿಕೊಳ್ಳಬಲ್ಲರು. ಅವು ಬದಲಾದರೂ ಅದಾವ ದೈವೀಸಂಕೋಪದ ಭೀತಿಯಿಲ್ಲ, ಸಂಪ್ರದಾಯ ಅಥವಾ ರೂಢಿಗಳನ್ನು ಇಷ್ಟು ಬೇಗನೆ ಮಾರ್ಪಡಿಸಿಕೊಳ್ಳುವುದು ಅಸಾಧ್ಯ. ಸಂಪ್ರದಾಯಗಳು ಬಾಳಿಕೆಯಲ್ಲಿ ಕಟ್ಟಳಿಗಿಂತಲೂ ಹೆಚ್ಚು  ಜಿಗಟು. ಇದಕ್ಕೆ ಎರಡು ಕಾರಣಗಳು  1) ಜನರ ಹೆದರಿಕೆ, 2) ಮನದ ಹೆದರಿಕೆ. ಮೊದಲನೆಯದರಲ್ಲಿ ಜನರಿಂದ ನಗಿಸಿಕೊಳ್ಳುವ ಹೆದರಿಕೆಯಿದೆ; ಬಹಿಷ್ಕೃತರಾಗುವ ಅಂಜಿಕೆಯಿದೆ. ಎರಡನೆಯದರಲ್ಲಿ ಸ್ವಂತದ ಭಾವನೆಗಳೇ ಅಡ್ಡಬಂದು ಮನುಷ್ಯರು ರೂಢಿಗಳ ಬಂಧನದಲ್ಲಿ ಸಿಲುಕಿಕೊಂಡಿರಲು ಸಿದ್ಧರಾಗುವರು. ಇದರೊಂದಿಗೆ ದೇವರು, ದೆವ್ವಗಳ ಕಾಟದ ವಿಚಾರವೂ ತಲೆಯೆತ್ತಿ ಮನೋಭಾವನೆಗಳು ಮನುಷ್ಯನನ್ನು ಪರಂಪರಾಪ್ರಿಯನನ್ನಾಗಿ ಮಾಡುತ್ತವೆ. ರೂಢಿಗೆ ತಲೆಬಾಗದ ಮಾನವನಿಲ್ಲ. ಜಗತ್ತನ್ನೇ ಗೆದ್ದು ಆಳುವ ಸಾಮ್ರಾಟರನ್ನೂ ಸೇನಾಪತಿಗಳನ್ನೂ ರೂಢಿಯು ತನ್ನ ಗುಲಾಮರನ್ನಾಗಿ ಮಾಡಿಕೊಂಡಿರುತ್ತದೆ.

ಸಂಪ್ರದಾಯ ಅಥವಾ ರೂಢಿಗಳಲ್ಲಿ ಕೆಲವೊಂದು ವರ್ಗೀಕರಣವನ್ನು ಮಾಡಬಹದು. ಕೆಲವು ರೂಢಿಗಳಲ್ಲಿ ಮನುಷ್ಯನು ತನಗೆ ಬಂದ ಅನುಭವಗಳನ್ನು ಹಿಡಿದು ಇಟ್ಟಿರುವಂತೆ ತೋರುತ್ತದೆ. ಒಂಟಿ ಸೀನುವುದು, ಬೆಕ್ಕು ಅಡ್ಡಬರುವುದು, ಹಲ್ಲಿ ನುಡಿಯುವುದು, ವಿಶಿಷ್ಟ ಕನಸುಗಳು ಬೀಳುವುದು ಇವೇ ಮೊದಲಾದವುಗಳು ಈ ಬಗೆಯ ಉದಾಹರಣೆಗಳು. ಗಂಡಸರ ಎಡಗಣ್ಣು ಹಾರಬಾರದೆಂಬ ಒಂದು ಗ್ರಹಿಕೆ. ಗಂಡಸರ ಎಡಗಣ್ಣು ಹಾರಿದರೆ ಅಶುಭವಂತೆ. ಆದರೆ, ಕೆಲವರು ತಮಗೆ ಎಡಗಣ್ಣು ಹಾರುತ್ತಿದ್ದಾಗಲೇ ಶುಭವಾಗಿರುತ್ತದೆಂದು ತಮ್ಮ ಅನುಭವವನ್ನು ನನಗೆ ಹೇಳಿದ್ದಾರೆ. ಆದುದರಿಂದ ಇಂತಹ ಗ್ರಹಿಕೆಗಳನ್ನು ತ್ರಿಕಾಲಾಬಾಧಿತ ಸಿದ್ಧಾಂತಗಳೆಂದು ನಂಬುವುದು ಮಾತ್ರ ತಿಳಿಗೇಡಿತನವಾಗದೆ ಇರಲಾರದು. ಹೀಗೆ ನಂಬಿ ಹಾಳಾದವರು ಕಡಿಮೆ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News