ದ್ವೇಷ ರಾಜಕಾರಣದಿಂದ ದೇಶದ ನೈಜ ಸ್ಥಿತಿಯನ್ನು ಮರೆಮಾಚಲಾಗುತ್ತಿದೆ: ಯೋಗೇಂದ್ರ ಯಾದವ್

Update: 2022-09-28 13:32 GMT

ಬೆಂಗಳೂರು, ಸೆ.28: ಆಳುವ ಸರಕಾರದ ನೀತಿಗಳಿಂದಾಗಿ ದೇಶದ ಸಂವಿಧಾನವೇ ಅಪಾಯದ ಅಂಚಿನಲ್ಲಿರುವ ಕಾರಣ, ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ‘ಭಾರತ್ ಜೋಡೋ’ ಅಭಿಯಾನಕ್ಕೆ ಬೆಂಬಲ ನೀಡುವುದಾಗಿ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಸ್ಪಷ್ಟಪಡಿಸಿದ್ದಾರೆ. 

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ದ್ವೇಷದ ರಾಜಕಾರಣದಿಂದಾಗಿ ದೇಶದಲ್ಲಿ ಬಿಕ್ಕಟ್ಟಿನ ವಾತವರಣವು ನಿರ್ಮಾಣವಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ‘ಭಾರತ್ ಜೋಡೋ’ ಅಭಿಯಾನವನ್ನು ಆಯೋಜಿಸಿದೆ. ನಾವು ಈ ಅಭಿಯಾನಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ ಎಂದರು.

ಆದರೆ ನಾವು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಹಾಗೆಯೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರೂ ಅಲ್ಲ. ದೇಶದ ಒಳಿತಿಗಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಯೋಗೇಂದ್ರ ಯಾದವ್ ತಿಳಿಸಿದರು.

‘ಕೊರೋನ ಸಂಕಷ್ಟದಿಂದಾಗಿ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದ್ದರೂ, ಕಳೆದ ಎರಡು ವರ್ಷಗಳಿಂದ ಅಂಬಾನಿ, ಅದಾನಿಗಳ ಸಂಪತ್ತು ಹೆಚ್ಚಾಗುತ್ತಿದೆ. ಇದರಿಂದ ದೇಶದ ಆರ್ಥಿಕತೆ ಯಾವ ಮಟ್ಟಕ್ಕೆ ಕುಸಿದಿದೆ ಎಂದು ಯೋಚಿಸಬಹುದಾಗಿದೆ. ಆದರೆ ಸರಕಾರವು ಕೋಮುವಾದವನ್ನು ಮತ್ತು ದ್ವೇಷದ ರಾಜಕಾರಣವನ್ನು ಮುನ್ನಲೆಗೆ ತಂದು ದೇಶದ ದುಸ್ಥಿತಿಯನ್ನು ಮರೆಮಾಚುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು. 

‘ಸಂಘಪರಿವಾರದ ಗುಪ್ತ ಕಾರ್ಯಸೂಚಿಯನ್ನು ಬಿಜೆಪಿ ಸರಕಾರ ಜಾರಿ ಮಾಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಚಾತುವರ್ಣ ಸಿದ್ದಾಂತವನ್ನು ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ. ರಾಜ್ಯದಲ್ಲಿ ದೇವನೂರು ಮಹದೇವ ಇದನ್ನು ತಮ್ಮ ಪುಸ್ತಕದಲ್ಲಿ ಜನರಿಗೆ ಅರ್ಥವಾಗುವಂತೆ ಬಿಂಬಿಸಿದ್ದಾರೆ’ ಎಂದು ಅವರು ಸ್ಮರಿಸಿದರು.

------------------------------------------
''ದೇಶದ ಪ್ರತಿಯೊಬ್ಬರು ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಸಾಮಾನ್ಯ ಜನರು ಪರೋಕ್ಷ ತೆರಿಗೆಗಗಳನ್ನೇ ಹೆಚ್ಚಾಗಿ ಪಾವತಿಸುತ್ತಿದ್ದಾರೆ. ಹಾಗಾಗಿ ಜನರಿಗೆ ಉತ್ತಮ ಆಡಳಿತವನ್ನು ನೀಡುವುದು ಸರಕಾರದ ಕರ್ತವ್ಯವಾಗಬೇಕು. ಸರಕಾರವು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸದ ಕಾರಣ ‘ಭಾರತ್ ಜೋಡೋ’ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ. ಒಂದು ವೇಳೆ ಕಾಂಗ್ರೇಸ್ ಸರಕಾರ ಅಧಿಕಾರದಲ್ಲಿದ್ದು, ಇಂತಹದ್ದೇ ಸಮಸ್ಯೆಗಳು ದೇಶದಲ್ಲಿ ಇದ್ದಿದ್ದರೆ, ಅದರ ವಿರುದ್ಧವೂ ಅಭಿಯಾನವನ್ನು ಮಾಡುತ್ತಿದ್ದೆವು.'' 

ಯೋಗೇಂದ್ರ ಯಾದವ್, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News