ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‍ಶಿಪ್ | ರಾಜ್ಯದ ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಿಸಿದ ಸಚಿವ ಡಾ.ನಾರಾಯಣಗೌಡ

Update: 2022-09-28 14:18 GMT

ಬೆಂಗಳೂರು, ಸೆ.28: ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‍ನ 8 ವರ್ಷದೊಳಗಿನವರ ಪ್ರಶಸ್ತಿ ವಿಜೇತರಾಗಿರುವ ಕರ್ನಾಟಕದ ಚಾರ್ವಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಐದು ಲಕ್ಷ ರೂ.ನಗದು ಬಹುಮಾನ ಘೋಷಿಸಿದ್ದಾರೆ. 

ಜಾರ್ಜಿಯಾದ ಬಟುಮಿಯಲ್ಲಿ ನಡೆದ ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್‍ಶಿಪ್‍ನ ಬಾಲಕಿಯರ 8 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ರಾಜ್ಯಕ್ಕೆ ಕೀರ್ತಿ ತಂದಿರುವ ಚಾರ್ವಿಗೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಚಾರ್ವಿ ಅಪಾರ ಪ್ರತಿಭೆ ಹೊಂದಿದ್ದು, ಚಿಕ್ಕ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡುತ್ತಿದ್ದಾಳೆ. ಮುಂದಿನ ತಿಂಗಳು ಇಂಡೊನೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಯೂತ್ ಚಾಂಪಿಯನ್‍ಶಿಪ್‍ನಲ್ಲೂ ಆಕೆ ದೇಶವನ್ನು ಪ್ರತಿನಿಧಿಸುವಳು. ನವೆಂಬರ್‍ನಲ್ಲಿ ಶ್ರೀಲಂಕಾದಲ್ಲಿ ನಡೆ ಯಲಿರುವ ಕಾಮನ್‍ವೆಲ್ತ್ ಚೆಸ್ ಕೂಟದಲ್ಲೂ ಪಾಲ್ಗೊಳ್ಳಲಿದ್ದಾಳೆ ಎಂದು ಅವರು ಹೇಳಿದ್ದಾರೆ.

ಈ ಬಾಲ ಪ್ರತಿಭೆಗೆ ಎಲ್ಲ ರೀತಿಯ ನೆರವು ನೀಡಲಿದ್ದು, ಐದು ಲಕ್ಷ ರೂಪಾಯಿ ನಗದು ಪುರಸ್ಕಾರ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ ಎಂದು ನಾರಾಯಣಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News