ಮಂಗಳೂರು: ಪಿಎಫ್‌ಐ-ಸಿಎಫ್‌ಐ ಕಚೇರಿಗೆ ಬೀಗ ಜಡಿದ ಪೊಲೀಸರು; ದಾಖಲೆ ಪತ್ರಗಳ ಸಹಿತ ಸೊತ್ತುಗಳು ವಶ

Update: 2022-09-28 16:12 GMT

ಮಂಗಳೂರು, ಸೆ.28: ಪಿಎಫ್‌ಐ ಸಹಿತ 8 ಸಂಘಟನೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ನಗರದ ಪಿಎಫ್‌ಐ ಮತ್ತು ಸಿಎಫ್‌ಐ ಕಚೇರಿಗೆ ಬುಧವಾರ ಪೊಲೀಸರು ಬೀಗ ಜಡಿದಿರುವುದಾಗಿ ವರದಿಯಾಗಿದೆ.

ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವ ಪೊಲೀಸರು ಸ್ಟೇಟ್‌ಬ್ಯಾಂಕ್ ಸಮೀಪದ ನೆಲ್ಲಿಕಾಯಿ ರಸ್ತೆಯ ಕಟ್ಟಡದಲ್ಲಿರುವ ಪಿಎಫ್‌ಐ ಮತ್ತು ಬಂದರು ಅಝೀಝುದ್ದೀನ್ ರಸ್ತೆಯಲ್ಲಿರುವ ಸಿಎಫ್‌ಐ ಕಚೇರಿಗೆ ಬಿಗಿ ಬಂದೋಬಸ್ತ್‌ನಲ್ಲಿ ಬೀಗಮುದ್ರೆ ಹಾಕಲಾಯಿತು.

ಕಾರ್ಯಾಚರಣೆಗೆ ಮುನ್ನ ನೆಲ್ಲಿಕಾಯಿ ರಸ್ತೆ ಹಾಗೂ ಅಝೀಝುದ್ದೀನ್ ರಸ್ತೆಯನ್ನು ಎರಡೂ ಕಡೆಯಿಂದ ವಾಹನ ಸಂಚಾರಕ್ಕೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಸಂಜೆ 4ಕ್ಕೆ ಪೊಲೀಸರು ನಗರದ ನೆಲ್ಲಿಕಾಯಿ ರಸ್ತೆಯ ಪಿಎಫ್‌ಐ ಕಚೇರಿಗೆ ತೆರಳಿದಾಗ ಕಚೇರಿ ಪ್ರವೇಶದ ಮುಖ್ಯಗೇಟ್‌ಗೆ ಬೀಗ ಹಾಕಲಾಗಿತ್ತು. ಒಳಗಡೆ ಯಾರೂ ಇರಲಿಲ್ಲ. ಆದಾಗ್ಯೂ ಬೀಗ ಮುರಿದು ಒಳಪ್ರವೇಶಿಸಿದ ಪೊಲೀಸರು ಸರಕಾರಿ ಪಂಚರ ಸಮಕ್ಷಮದಲ್ಲಿ ಕಚೇರಿಯ ಒಳಗಿದ್ದ ದಾಖಲೆ ಪತ್ರಗಳ ಸಹಿತ ವಸ್ತುಗಳನ್ನು ಜಫ್ತಿ ಮಾಡಿ ಬಳಿಕ ಕಚೇರಿ ಬಾಗಿಲಿಗೆ ಬೀಗ ಜಡಿದರು. ಈ ವೇಳೆ ಬಂದರ್ ಅಝೀಝುದ್ದೀನ್ ರಸ್ತೆಯಲ್ಲಿದ್ದ ಸಿಎಫ್‌ಐ ಕಚೇರಿಯಿಂದಲೂ ದಾಖಲೆಪತ್ರಗಳನ್ನು ವಶಪಡಿಸಿ ಕಚೇರಿಗೆ ಬೀಗಮುದ್ರೆ ಹಾಕಲಾಯಿತು ಎಂದು ತಿಳಿದು ಬಂದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿರುವ ಪಿಎಫ್‌ಐ ಮತ್ತು ಸಿಎಫ್‌ಐ ಕಚೇರಿಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸೆ.22ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದ.ಕ. ಜಿಲ್ಲೆಯ 11 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಐದು ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸಿದ್ದರು. ಬಳಿಕ ಪೊಲೀಸರು ಜಿಲ್ಲೆಯ 15 ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸಿದ್ದರು. ಕೇಂದ್ರ ಸರಕಾರವು ಬುಧವಾರ ಪಿಎಫ್‌ಐ ಸಹಿತ 8 ಸಂಘಟನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಸಂಘಟನೆಗಳ ಕಚೇರಿಗೆ ಬೀಗ ಜಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News