ನಿಷೇಧಿತ ಸಂಘಟನೆ ಪರ ಪ್ರತಿಭಟಿಸಿದರೆ ಕ್ರಮ: ಪ್ರವೀಣ್ ಸೂದ್

Update: 2022-09-28 16:46 GMT

ಬೆಂಗಳೂರು, ಸೆ.28: ಕೇಂದ್ರ ಸರಕಾರ ಪಿಎಫ್‍ಐ ಸೇರಿದಂತೆ ಅದರ ಬೆಂಬಲಿತ ಸಂಘಟನೆಗಳನ್ನು 5 ವರ್ಷಗಳ ಕಾಲ ನಿಷೇಧಿಸಿದ್ದು, ಇದರ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದರೆ ಯಾರೇ ಆಗಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಬುಧವಾರ ನಗರದ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಎನ್‍ಐಎ ನಮ್ಮ ರಾಜ್ಯಕ್ಕೆ ಬಂದು ದಾಳಿ ಮಾಡಿತ್ತು. ಆನಂತರ, ಎರಡು ದಿನಗಳ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ 101 ಪಿಎಫ್‍ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಇದೀಗ ಕೇಂದ್ರ ಗೃಹ ಸಚಿವಾಲಯ ಪಿಎಫ್‍ಐ ಸಂಘಟನೆಯನ್ನು ಯುಎಪಿಎ ಕಾಯ್ದೆಯಡಿ ನಿಷೇಧಿಸಿದೆ. ಈ ಸಂಘಟನೆ ಪರವಾಗಿ ಬೀದಿಗಿಳಿದು ಹೋರಾಟ ಮಾಡಿದರೆ ಯಾರೇ ಆಗಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದ ಅವರು, ಕೇಂದ್ರ ಸರಕಾರವೇ ಪರಿಶೀಲನೆ ನಡೆಸಿ ಪಿಎಫ್‍ಐ ಸೇರಿ ಹಲವು ಸಂಘಟನೆಗಳನ್ನು ನಿಷೇಧಿಸುವ ಕ್ರಮ ಕೈಗೊಂಡಿದೆ. ಹಾಗಾಗಿ, ಸರಕಾರದ ಸೂಚನೆಯಂತೆ ಪೊಲೀಸರು ಕಾರ್ಯನಿರ್ವಹಿಸುತ್ತಾರೆ ಎಂದರು.

ಕಟ್ಟೆಚ್ಚರ: ರಾಜ್ಯದ ವಿವಿಧೆಡೆ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್ ಹೆಚ್ಚಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಯಾವುದೇ ಪ್ರತಿಭಟನೆ, ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಚಾಮರಾಜಪೇಟೆ, ಡಿಜೆ ಹಳ್ಳಿ, ಕೆಜಿ ಹಳ್ಳಿಯ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News