ಬಿಬಿಎಂಪಿ ಚುನಾವಣೆ: ಮೀಸಲಾತಿ ನಿಗದಿ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2022-09-28 17:49 GMT

ಬೆಂಗಳೂರು, ಸೆ.28: ಬಿಬಿಎಂಪಿ ವಾರ್ಡ್‍ಗಳಿಗೆ ಸದ್ಯ ನಿಗದಿಪಡಿಸಿರುವ ವಾರ್ಡ್‍ವಾರು ಮೀಸಲಾತಿಯನ್ನು ಮರು ಪರಿಶೀಲಿಸಲು ಸಾಧ್ಯವೇ ಎಂಬ ಬಗ್ಗೆ ನಿಲವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ. 

ನಗರದ ಕೆ.ಮಹದೇವ ಎಂಬುವವರು ಸಲ್ಲಿಸಿದ್ದ  ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಈ ಸೂಚನೆ ನೀಡಿದೆ. ಅರ್ಜಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ. 

ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ್ದ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಬಿಬಿಎಂಪಿ ವಾರ್ಡ್‍ವಾರು ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಭಕ್ತವತ್ಸಲ ಸಮಿತಿ ನೀಡಿರುವ ವರದಿ ಆಧರಿಸಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಸರಕಾರ ಹೇಳಿದೆ.

ಆದರೆ, ಸುಪ್ರೀಂಕೋರ್ಟ್ ಹೇಳಿರುವ ಮೂರು ಹಂತದ ಪರಿಶೀಲನೆಯನ್ನು ಭಕ್ತವತ್ಸಲ ಸಮಿತಿಯೇ ಅನ್ವಯಿಸಿಕೊಂಡಿಲ್ಲ. ಸರಕಾರ ಸಹ ಮೀಸಲಾತಿ ಕಲ್ಪಿಸುವಾಗ ಈ ಅಂಶವನ್ನು ಪರಿಗಣಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ರಾಜಕೀಯ ಮೀಸಲಾತಿಗೆ ಮಾನದಂಡವೇ ಬೇರೆ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡುವಂತೆ ರಾಜಕೀಯ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಯಾವ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲವೋ ಅಂತಹ ಜಾತಿಗಳಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ. ಆದರೆ, ಬಿಬಿಎಂಪಿ ವಾರ್ಡ್ ಮೀಸಲಾತಿ ನಿಗದಿಯಲ್ಲಿ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ಬಿಬಿಎಂಪಿ ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News