ಆಡಳಿತ, ವಿರೋಧ ಪಕ್ಷದವರ ಪ್ರತ್ಯಾರೋಪಗಳಿಂದ ರೈತ ಕಂಗಾಲು: ಆಪ್ ಕಿಡಿ

Update: 2022-09-29 14:35 GMT

ಬೆಂಗಳೂರು, ಸೆ.29: ರಾಜ್ಯದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತಿಸುವ ಬದಲು ರಾಜಕೀಯ ಆರೋಪಗಳಲ್ಲಿ ತೊಡಗಿರುವುದರಿಂದ ಅನ್ನದಾತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಗುರುವಾರ ರಾಜ್ಯ ಸರಕಾರದ ನಿರ್ಲಕ್ಷ್ಯದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಅತಿವೃಷ್ಟಿಯಿಂದ 8.91 ಲಕ್ಷ ಹೆಕ್ಟೇರ್ ಬೆಳೆಹಾನಿ ಸಂಭವಿಸಿ, 12,319 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರಕಾರವು ವಿಧಾನಸಭೆಯಲ್ಲಿ ತಿಳಿಸಿದೆ. ಈ ಪೈಕಿ ಕೇಂದ್ರ ಸರಕಾರದಿಂದ ಕೇವಲ 1,646.05 ಕೋಟಿ ರೂ. ಮಾತ್ರ ಬಂದಿರುವುದು ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಎಂದರು.

ಕೇಂದ್ರ ಸರಕಾರವು ಸೂಕ್ತ ಪರಿಹಾರ ನೀಡಲು ನಿರಾಕರಿಸಿದ್ದರೂ ರಾಜ್ಯ ಸರಕಾರವು ಸುಮ್ಮನಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಉಂಟಾದ ಪ್ರವಾಹವನ್ನೂ ರಾಜ್ಯ ಸರಕಾರ ಸರಿಯಾಗಿ ನಿರ್ವಹಿಸಿಲ್ಲ. ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ.ಪರಿಹಾರ ನೀಡುವ ಬಿಜೆಪಿ ಸರಕಾರದ ಘೋಷಣೆಯು ಕೇವಲ ಘೋಷಣೆಯಾಗಿ ಉಳಿದಿದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

ಸಂತ್ರಸ್ತರ ಪೈಕಿ ಅನೇಕರಿಗೆ ಕೇವಲ ಒಂದು ಲಕ್ಷ ರೂಪಾಯಿ ಮಾತ್ರ ಸಿಕ್ಕಿದೆ. ಬೆರಳೆಣಿಕೆಯ ಮಂದಿಗೆ ಮಾತ್ರ ಐದು ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ. ಅವರು ಮನೆಯಿಲ್ಲದೇ ಟೆಂಟ್‍ಗಳಲ್ಲಿ, ದೇವಸ್ಥಾನಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದರೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪೃಥ್ವಿ ರೆಡ್ಡಿ ಆರೋಪಿಸಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, ರಾಜ್ಯ ಸರಕಾರ ನೀಡುತ್ತಿರುವ ಬೆಳೆ ಪರಿಹಾರ ಧನವು ಹಲವು ರೈತರಿಗೆ ತಲುಪುತ್ತಿಲ್ಲ. ರೈತರು ಲಂಚ ನೀಡಲು ನಿರಾಕರಿಸಿದ ಕಾರಣಕ್ಕೆ ಸ್ಥಳೀಯ ಅಧಿಕಾರಿಗಳು ಸರ್ವೇ ಮಾಡಿ ಸರಕಾರದ ಆ್ಯಪ್‍ನಲ್ಲಿ ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ. ಸರಕಾರದ ಕಠಿಣ ಮಾನದಂಡಗಳಿಂದಾಗಿ, ಸಂತ್ರಸ್ತ ರೈತರಿಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಕೇಂದ್ರದಿಂದ ಪರಿಹಾರ ದೊರಕಿಸಿ ಕೊಡುವುದರಲ್ಲಿ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಇತ್ತೀಚೆಗೆ ಬಂದಿದ್ದ ಕೇಂದ್ರ ಪರಿಶೀಲನಾ ತಂಡವು ಸಮರ್ಪಕ ಸಮೀಕ್ಷೆ ನಡೆಸದೇ ಹಿಂದಿರುಗಿದೆ. ಕೇಂದ್ರ ಸರಕಾರವು 2021-22 ಹಾಗೂ 2022-23ರಲ್ಲಿ 14,100 ಕೋಟಿ ರೂ.ಜಿಎಸ್ಟಿ ಬಾಕಿ ಉಳಿಸಿಕೊಂಡಿದೆ. ಕೇಂದ್ರದೊಂದಿಗೆ ಮಾತುಕತೆ ನಡೆಸಿ ಈ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಸಿಕೊಳ್ಳಲು ರಾಜ್ಯ ಸರಕಾರ ಪ್ರಯತ್ನ ಮಾಡುತ್ತಿಲ್ಲ ಎಂದು ಭಾಸ್ಕರ್ ರಾವ್ ಹೇಳಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್ ಕಾಳಪ್ಪ, ಚನ್ನಪ್ಪಗೌಡ ನೆಲ್ಲೂರು, ಜಗದೀಶ್ ವಿ ಸದಂ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News