ಆವಿಷ್ಕಾರ ಎಂದರೆ ಸಾಫ್ಟ್ ವೇರ್, ಐಟಿ ಮಾತ್ರವಲ್ಲ ಸಿರಿಧಾನ್ಯವೂ ಇದೆ: ನಿರ್ಮಲಾ ಸೀತಾರಾಮನ್

Update: 2022-09-29 15:26 GMT

ಬೆಂಗಳೂರು, ಸೆ.29: ‘ಆವಿಷ್ಕಾರ ಎಂದಾಕ್ಷಣ ಕೇವಲ ಸಾಫ್ಟ್‍ವೇರ್, ಐಟಿ ಸಂಬಂಧಿಸಿದ ಕ್ಷೇತ್ರಗಳು, ವೈದ್ಯಕೀಯ ಉಪಕರಣಗಳು ಮಾತ್ರವಲ್ಲ. ಸಿರಿಧಾನ್ಯದಂತಹ ಉತ್ಪಾದನಾ ಘಟಕಗಳಿಗೂ ಆದ್ಯತೆ ನೀಡಬೇಕಿದೆ' ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ನೀಡಿದ್ದಾರೆ.

ಗುರುವಾರ ನಗರದ ಕೆಜಿ ರಸ್ತೆಯ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆ (ಎಫ್‍ಕೆಸಿಸಿಐ) ಕಚೇರಿಯಲ್ಲಿ ಸರ್ವಸದಸ್ಯರ 105ನೇ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತಿಕ ಮಾರುಕಟ್ಟೆಯಲ್ಲಿ ಸಿರಿಧಾನ್ಯ ರಫ್ತಿಗೆ ಚಿನ್ನದ ಮೌಲ್ಯವಿದೆ. ಸಂಸ್ಕರಣಾ ಘಟಕಗಳ ಮೌಲ್ಯವರ್ಧನೆಗೆ ಲೆಕ್ಕಾಧಿಕಾರಿಗಳು, ತೆರಿಗೆ ಸಂಗ್ರಹಕಾರರು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ರೈತರಿಗೆ ಸಕ್ರಿಯ ಚಿಂತನೆಗಳನ್ನು ತುಂಬುವ ಮೂಲಕ ಹೆಚ್ಚಿನ ಲಾಭ ತಂದುಕೊಡಲು ಶ್ರಮಿಸಬೇಕಿದೆ' ಎಂದು ಸಲಹೆ ನೀಡಿದರು.

‘2023ನೆ ವರ್ಷದ ವಿಶ್ವ ಸಿರಿಧಾನ್ಯ ವರ್ಷವಾಗಿದೆ. ಈಗಾಗಲೇ ಸಿರಿಧಾನ್ಯ ರಫ್ತಿನಲ್ಲಿ ಕರ್ನಾಟಕ ಮತ್ತು ಭಾರತವು ಮುಂಚೂಣಿಯಲ್ಲಿದ್ದು, ಮತ್ತಷ್ಟು ಮಾರುಕಟ್ಟೆ ವಿಸ್ತರಣೆಗೆ ಹೊಸ ಆಲೋಚನೆ, ನವೋದ್ಯಮಗಳ ಮೂಲಕ ಒತ್ತು ನೀಡಬೇಕಿದೆ ಎಂದು ಅವರು ಹೇಳಿದರು.

ಆವಿಷ್ಕಾರಗಳು ಭವಿಷ್ಯದ ಹಲವು ಸಮಸ್ಯೆಗಳಿಗೆ ಮತ್ತು ಆರ್ಥಿಕ ಸ್ಥಿತಿ ಬದಲಾವಣೆಗೆ ಪರಿಹಾರವಾಗಿದೆ. ಆವಿಷ್ಕಾರ ಮತ್ತು ನವೋದ್ಯಮಗಳಲ್ಲಿ ಬೆಂಗಳೂರು ಈಗಾಗಲೇ ಮುಂಚೂಣಿಯಲ್ಲಿದೆ. ಇದಕ್ಕೆ ಬೇಕಾದ ಪ್ರೋತ್ಸಾಹ ಮತ್ತು ಸಹಕಾರವನ್ನು ರಾಜ್ಯ ಸರಕಾರ ನೀಡುತ್ತಿರುವುದು ಶ್ಲಾಘನೀಯ. `ಬಿಯಾಂಡ್ ಬೆಂಗಳೂರು' ಹೆಜ್ಜೆ ಮಾದರಿ ಎಂದ ಅವರು, ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಡಿಮೆ ದರದಲ್ಲಿ ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿಕೊಡುವ ಮೂಲಕ ರೈತರಿಗೆ ಭರ್ಜರಿ ಲಾಭ ಗಳಿಸಲು ಮತ್ತು ಮಾರುಕಟ್ಟೆ ಕಲ್ಪಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಸಿಐ ಅಧ್ಯಕ್ಷ ಡಾ.ಐ.ಎಸ್.ಪ್ರಸಾದ್, ನೂತನ ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಡಾ.ಪೆರಿಕಾಲ್ ಸುಂದರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News