ಮಂಗಳೂರು: ನಿಷೇಧಿತ ಸಂಘಟನೆಗಳ 19 ಕಚೇರಿಗಳಿಗೆ ಬೀಗಮುದ್ರೆ

Update: 2022-09-29 15:32 GMT

ಮಂಗಳೂರು, ಸೆ.29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಹಿತ 8 ಸಂಘಟನೆಗಳನ್ನು ಬುಧವಾರ ಕೇಂದ್ರ ಸರಕಾರ  ನಿಷೇಧಿಸಿದ ಬೆನ್ನಿಗೆ ದ.ಕ. ಜಿಲ್ಲೆಯಲ್ಲಿ ಪಿಎಫ್‌ಐ, ಸಿಎಫ್‌ಐ ಸಹಿತ 19 ಕಚೇರಿಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ಕೇಂದ್ರ ಸರಕಾರದ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಬುಧವಾರ ಮತ್ತು ಗುರುವಾರ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ 12 ಹಾಗೂ ದ.ಕ.ಜಿಲ್ಲಾ ಎಸ್ಪಿ ವ್ಯಾಪ್ತಿಯ (ಗ್ರಾಮಾಂತರ ಪ್ರದೇಶದ) 7 ಕಚೇರಿಗಳಿಗೆ ಪೊಲೀಸರು ಬೀಗ ಮುದ್ರೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ, ಪಾಂಡೇಶ್ವರ, ಬಂದರ್ ಠಾಣಾ ವ್ಯಾಪ್ತಿಯ ಕಚೇರಿಗಳಿಗೆ ಬುಧವಾರ ದಾಳಿ ಮಾಡಿ ದಾಖಲೆಪತ್ರಗಳು, ಕಂಪ್ಯೂಟರ್ ಸಹಿತ ಇತರ ಸೊತ್ತುಗಳನ್ನು ವಶಕ್ಕೆ ಪಡೆದು ಬೀಗ ಮುದ್ರೆ ಹಾಕಲಾಗಿತ್ತು.

ನಗರದ ಕಸಬಾ ಬೆಂಗರೆ, ಚೊಕ್ಕಬೆಟ್ಟು, ಕಾಟಿಪಳ್ಳ ಎರಡನೆ ಬ್ಲಾಕ್, ಅಡ್ಡೂರ್, ಕಿನ್ನಿಪದವು, ಕೆ.ಸಿ.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿಯ ಪಿಎಫ್‌ಐ ಮತ್ತು ಬಂದರ್ ಅಝೀಝುದ್ದೀನ್ ರಸ್ತೆಯ ಸಿಎಫ್‌ಐ ಹಾಗೂ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಇನ್ಫೋರ್ಮೇಶನ್ ಆ್ಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News