ಡಿಸೆಂಬರ್ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ನಿರ್ದೇಶ

Update: 2022-09-30 12:55 GMT

ಬೆಂಗಳೂರು, ಸೆ.30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯು 243 ವಾರ್ಡ್‍ವಾರು ಮೀಸಲಾತಿ ಪಟ್ಟಿ ಪ್ರಕಟಿಸಿ, ಸರಕಾರ ಆ.16ರಂದು ಪ್ರಕಟಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ನ.30ರೊಳಗೆ ಹೊಸ ಅಧಿಸೂಚನೆಯನ್ನು ಹೊರಡಿಸಲು ಮತ್ತು ಡಿ.31ರೊಳಗೆ ಚುನಾವಣೆಯನ್ನು ನಡೆಸಬೇಕೆಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.  

ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ನಿವೃತ್ತ ನ್ಯಾ.ಡಾ.ಭಕ್ತವತ್ಸಲ ನೇತೃತ್ವದ ಒಬಿಸಿ ಆಯೋಗಕ್ಕೆ ರಾಜ್ಯ ಸರಕಾರ ಜನಸಂಖ್ಯೆಯ ಸರಿಯಾದ ಅಂಕಿ ಅಂಶಗಳನ್ನು ಸಲ್ಲಿಸಬೇಕು. ಡಿ.31ರೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ. 

ಇದಕ್ಕೂ ಮುನ್ನ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ಪ್ರಮಾಣ ಪತ್ರ ಸಲ್ಲಿಸಿ ಮೀಸಲಾತಿ ದೋಷಗಳನ್ನು ಸರಿಪಡಿಸಲು 16 ವಾರಗಳ ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದನ್ನು ನ್ಯಾಯಪೀಠ ತಿರಸ್ಕರಿಸಿ, ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಆದೇಶ ಪಾಲನೆ ಕುರಿತು ತಿಳಿದುಕೊಳ್ಳಲು ನ.30ಕ್ಕೆ ಪ್ರಕರಣವನ್ನು ಪಟ್ಟಿ ಮಾಡಲು ಆದೇಶಿಸಿದೆ. 

ಮಹಿಳೆಯ ವರ್ಗಕ್ಕೆ ಮೀಸಲಾತಿ ತರ್ಕಬದ್ಧವಾಗಿಲ್ಲ. ಅಲ್ಲದೆ, ಮಹಿಳೆಯರಿಗೆ ಅವರ ಜನಸಂಖ್ಯೆಯ ಅವರೋಹಣ ಕ್ರಮದಲ್ಲಿ ವಾರ್ಡ್‍ವಾರು ಮೀಸಲಾತಿಯನ್ನು ನಿಗದಿಪಡಿಸುವಂತೆ ಹಾಗೂ ಆಯೋಗದಿಂದ ಪರಿಷ್ಕೃತ ವರದಿಯನ್ನು ಪಡೆದುಕೊಂಡ ನಂತರ ಸರಕಾರವು ಒಬಿಸಿಗೆ ಮೀಸಲಾತಿಯನ್ನು ನಿದಗಿಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠವು ಹೇಳಿದೆ. 

ಒಬಿಸಿ ಮೀಸಲು ನಿಗದಿಗೆ ಸರ್ವೆ ನಡೆಸಿಲ್ಲ. ಒಬಿಸಿ ಆಯೋಗ ಸರ್ವೆ ನಡೆಸದೇ ಮೀಸಲು ನೀಡಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಚುನಾವಣಾ ಆಯೋಗ ಟ್ರಿಪಲ್ ಟೆಸ್ಟ್ ಮಾನದಂಡ ಅನುಸರಿಸಿಲ್ಲ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ವಾರ್ಡ್‍ಗಳನ್ನೂ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಹೀಗಾಗಿ, ಹೊಸದಾಗಿ ಒಬಿಸಿ ಸರ್ವೆ ನಡೆಸಲು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಬಿಬಿಎಂಪಿ ಚುನಾವಣೆ ವಿಳಂಬವಾಗಬಾರದು. ಸುಪ್ರೀಂಕೋರ್ಟ್‍ನ ಆದೇಶದಂತೆ ನಡೆಯಬೇಕು, ಆದಷ್ಟೂ ಈ ವರ್ಷದೊಳಗೆ ಚುನಾವಣೆ ನಡೆಯಲೇಬೇಕು ಎಂದು ಕಳೆದ ವಿಚಾರಣೆ ವೇಳೆ ನ್ಯಾಯಪೀಠವು ಅಭಿಪ್ರಾಯಪಟ್ಟಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News