ಡಿಕೆಶಿ ಮೇಲಿನ ಸಿಬಿಐ ದಾಳಿ ಬಿಜೆಪಿ ಸರಕಾರದ ಆಘೋಷಿತ ತುರ್ತು ಪರಿಸ್ಥಿತಿಯ ಮುಂದುವರಿದ ಭಾಗ: ಎಸ್‌ಡಿಪಿಐ

Update: 2022-09-30 10:29 GMT

ಬೆಂಗಳೂರು, ಸೆ.30: ಪ್ರತಿಪಕ್ಷಗಳನ್ನು ಹೆದರಿಸಲು ತನಿಖಾ ಸಂಸ್ಥೆಗಳನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಇಳಿಯದಷ್ಟು ಕೀಳು ಮಟ್ಟಕ್ಕೆ ಇಳಿದು, ಊಹಿಸಲೂ ಸಾಧ್ಯವಿಲ್ಲದಷ್ಟು ಕ್ರೂರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಫ್ಯಾಶಿಸ್ಟ್ ಸರಕಾರ ದಿನದಿಂದ ದಿನಕ್ಕೆ ಆ ಕ್ರೌರ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಮೊನ್ನೆ ನಡೆದಂತಹ ಮತ್ತೊಂದು ಸುತ್ತಿನ ಸಿಬಿಐ ದಾಳಿ ಈ ಫ್ಯಾಶಿಸ್ಟ್ ಬಿಜೆಪಿ ಸರಕಾರದ ಅಘೋಷಿತ ತುರ್ತು ಪರಿಸ್ಥಿತಿಯ ಮುಂದುವರಿದ ಭಾಗ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ.

ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ತನಿಖಾ ಸಂಸ್ಥೆಗಳ ದುರ್ಬಳಕೆಯನ್ನು ಎಸ್‌ಡಿಪಿಐ ಖಂಡಿಸುತ್ತದೆ. ಡಿ.ಕೆ. ಶಿವಕುಮಾರ್ ಮೇಲೆ ನಡೆದ ಈ ದಾಳಿಯನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.

ದೇಶದ ಆಂತರಿಕ ಭದ್ರತೆ ಮತ್ತು ಆಡಳಿತ ವ್ಯವಸ್ಥೆಗೆ ತನಿಖಾ ಸಂಸ್ಥೆಗಳು ಬಹುಮುಖ್ಯವಾದ ಮೆಷಿನರಿ. ಅವುಗಳ ವಿಶ್ವಾಸಾರ್ಹತೆಯ ಜೊತೆ ಜೊತೆಗೆ ಅವುಗಳ ಮರ್ಯಾದೆಯನ್ನು ಕೂಡ ಈ ಫ್ಯಾಶಿಸ್ಟ್ ಸರಕಾರ ಕೇವಲ ತನ್ನ ರಾಜಕೀಯ ಲಾಭಕ್ಕೆ ನಾಶ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಎಸ್‌ಡಿಪಿಐ ಹೇಳಿದೆ.

ಮೋದಿ ನೇತೃತ್ವದ ಈ ಕೋಮುವಾದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ತನಿಖಾ ಸಂಸ್ಥೆಗಳು ನಡೆಸಿರುವ ದಾಳಿಗಳಲ್ಲಿ ಶೇ.85 ವಿರೋಧ ಪಕ್ಷಗಳ ಮೇಲೆ ನಡೆದಿವೆ. ಕಾಂಗ್ರೆಸ್ ಅದರ ಬಹುಮುಖ್ಯ ಗುರಿಯಾಗಿದ್ದಾರೆ, ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮುಂತಾದ ಪ್ರತಿಪಕ್ಷಗಳನ್ನು ಅದು ನಿರಂತರವಾಗಿ ಸಂವಿಧಾನ ವಿರೋಧಿ ಮಾರ್ಗಗಳಲ್ಲಿ ಟಾರ್ಗೆಟ್ ಮಾಡಿದೆ. ಈ ದಾಳಿಗಳು ಪ್ರತಿಪಕ್ಷಗಳ ವಿರುದ್ಧವೇ ಏಕೆ ನಡೆಯುತ್ತಿವೆ? ಬಿಜೆಪಿಯಲ್ಲಿ ಭ್ರಷ್ಟರೆ ಇಲ್ಲವೆ? ಕರ್ನಾಟಕದಲ್ಲಿ 40% ಕಮಿಷನ್ ಆರೋಪ ಅಷ್ಟು ಜೋರಾಗಿದೆ. ಒಬ್ಬ ಕಾಂಟ್ರಾಕ್ಟರ್ ಈ ಸಂಬಂಧ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಸಿಎಂ ಕುರ್ಚಿಗೆ ಸಾವಿರಾರು ರೂಪಾಯಿ ಕೋಟಿಯ ಬೇಡಿಕೆ ಇದೆ ಎಂದು ಸ್ವತಃ ಬಜೆಪಿಗೆ ಶಾಸಕರೊಬ್ಬರು ಆರೋಪಿಸಿದರು. ಇಷ್ಟೆಲ್ಲ ಇದ್ದರೂ   ಒಬ್ಬ ಬಿಜೆಪಿ ನಾಯಕನ ಮೇಲೆಯೂ ಕೂಡ ದಾಳಿಯಾಗಲಿ, ತನಿಖೆಯಾಗಲಿ ನಡೆದಿಲ್ಲ. ಇದು ಏನನ್ನು ಸೂಚಿಸುತ್ತದೆ ಎಂದು ಮಜೀದ್ ಪ್ರಶ್ನೆ ಮಾಡಿದರು.

ಇದಲ್ಲದೆ ಪ್ರಭುತ್ವವಿರೋಧಿ ಧ್ವನಿಗಳನ್ನು ಅಡಗಿಸಲು ಮತ್ತು ಜನರ ನಡುವೆ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಗಳನ್ನು ನಿಷೇಧ ಮಾಡಲು ತನಿಖಾ ಸಂಸ್ಥೆಗಳನ್ನು ಈ ಮನುವಾದಿ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಖಂಡನೀಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News