ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡದ ಸರಕಾರ: ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ

Update: 2022-09-30 11:55 GMT
ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು, ಸೆ.30: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಪಿ ಪೋರ್ಟೆಲ್ ಮೂಲಕ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡದಿರುವುದನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟಲ್ ಮುಂಭಾಗದಲ್ಲಿ ಶುಕ್ರವಾರದಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. 

‘ಸರಕಾರದಲ್ಲಿ ಹಣ ಇಲ್ಲ, ಹಾಗಾಗಿ ವಿದ್ಯಾರ್ಥಿವೇತನದ ಹಣ ಮಂಜೂರು ಆಗಿಲ್ಲ ಎಂದು ಬೆಂಗಳೂರು ವಿವಿಯ ಆಡಳಿತ ಮಂಡಳಿಯು ಬೇಜಾವಬ್ದಾರಿ ಹೇಳಿಕೆಗಳನ್ನು ನೀಡುತ್ತಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ವಂಚಿರಾಗುತ್ತಿದ್ದಾರೆ. ಹಿಂದಿನ ಸರಕಾರದಲ್ಲಿ ಸ್ಕಾಲರ್‍ಶಿಪ್ ವಿತರಣೆ ಮಾಡುವಲ್ಲಿ ಯಾವುದೇ ವಿಳಂಬ ಆಗಲಿಲ್ಲ. ಆಡಳಿತ ಮಂಡಳಿಯೇ ಎಲ್ಲವನ್ನು ಸಮರ್ಪಕವಾಗಿ ನಿರ್ವಹಿಸುತ್ತಿತ್ತು. ಆದರೆ ಈಗ ಸ್ಕಾಲರ್‍ಶೀಲ್‍ನದ್ದೆ ದೊಡ್ಡ ಸಮಸ್ಯೆಯಾಗಿದೆ’ ಎಂದು ಪ್ರತಿಭಟನಾನಿರ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

‘ವಿದ್ಯಾರ್ಥಿಗಳಿಗೆ ಎಸ್‍ಎಸ್‍ಪಿ ಹಣ ಬಿಡುಗಡೆ ಆಗದೇ ಇರುವ ಕಾರಣದಿಂದಾಗಿ ವಿದ್ಯಾರ್ಥಿಗಳು ಎರಡು ತಿಂಗಳಿನಿಂದ ಪೇಯಿಂಗ್ ಹಾಸ್ಟಲ್‍ಗೆ ಹಣ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ಇಲ್ಲಿನ ಮೇಲ್ವಿಚಾರಕರನ್ನು ಭೇಟಿ ಮಾಡಿದಾಗ ಅವರು ನೀಡುತ್ತಿರುವ ಉತ್ತರವು ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದೆ’ ಎಂದು ಅವರು ತಿಳಿಸಿದರು.  

‘ವಿದ್ಯಾರ್ಥಿಗಳು ಎರಡು ತಿಂಗಳಿನಿಂದ ಮೆಸ್‍ಗೆ ಹಣ ಪಾವತಿ ಮಾಡಿಲ್ಲ, ನಮ್ಮ ಬಳಿ ಇರುವ ಹಣದಿಂದ ಎರಡು ತಿಂಗಳು ಕಾಲ ಹಾಸ್ಟಲ್ ನಿರ್ವಹಣೆ ಮಾಡಿದ್ದೇವೆ. ಈಗ ವಿದ್ಯಾರ್ಥಿಗಳು ಹಣ ಪಾವತಿ ಮಾಡಿದರೆ ಮಾತ್ರ ಮೆಸ್‍ಅನ್ನು ನಡೆಸುತ್ತೇವೆ. ಇಲ್ಲದಿದ್ದರೆ ನಾವು ತಾನೇ ಹೇಗೆ ನಡೆಸುವುದಕ್ಕೆ ಸಾಧ್ಯ? ಹಾಗಾಗಿ ನಾವು ಈವತ್ತು ಬೆಳಿಗ್ಗೆ ಅಡುಗೆಯನ್ನು ಮಾಡಿಲ್ಲವೆಂದು ಹೇಳುತ್ತಿದ್ದಾರೆ ಎಂದು ಹಾಸ್ಟಲ್‍ನವರು ತಿಳಿಸಿದ್ದಾರೆ’ ಎಂದು ವಿದ್ಯಾರ್ಥಿಗಳು ಹೇಳಿದರು.

‘ಎಸ್‍ಎಸ್‍ಪಿ ಪೋರ್ಟಲ್‍ನಲ್ಲಿ ಅರ್ಜಿಯನ್ನು ಸರಿಯಾಗಿ ಸಲ್ಲಿಸಿದ್ದರೂ, ಸರಕಾರದ ತಾಂತ್ರಿಕ ಕೊರತೆಯ ಕಾರಣದಿಂದಾಗಿ ವಿದ್ಯಾರ್ಥಿಗಳ ಅರ್ಜಿಗಳು ಅದಲು ಬದಲಾಗಿರುತ್ತದೆ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಯನ್ನು ನಡೆಲಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ಎಸ್‍ಎಸ್‍ಪಿ ಹಣ ಬಿಡುಗಡೆ ಆಗದ ಕಾರಣದಿಂದಾಗಿ ವಿಶ್ವವಿದ್ಯಾಲಯದ ಪರೀಕ್ಷಾ ಶುಲ್ಕ ಮತ್ತು ಕಿರು ಪ್ರಬಂಧ ವೆಚ್ಚವನ್ನು ಬರಿಸಲು ಸಾಧ್ಯವಾಗುತ್ತಿಲ್ಲ. ಇದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾತ್ರವಲ್ಲ, ಕರ್ನಾಟಕಾದ್ಯಂತ ಎಲ್ಲ್ಲ ಓಬಿಸಿ ಮತ್ತು ಎಸ್‍ಟಿ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಕಾಡುತ್ತಿದೆ’ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News