ಉಜಿರೆ: ಹೋಟೆಲ್ ಓಶಿಯನ್ ಪರ್ಲ್ ನ 5ನೇ ಶಾಖೆ ಲೋಕಾರ್ಪಣೆ

Update: 2022-09-30 13:11 GMT

ಬೆಳ್ತಂಗಡಿ: ಅತಿಥಿ ಸೇವೆಗೆ ಮತ್ತು ಉತ್ತಮ ಗುಣಮಟ್ಟದ ಆಹಾರ ಕ್ರಮಕ್ಕೆ ಹೆಸರು ವಾಸಿಯಾದ ಹೋಟೆಲ್ ಓಶಿಯನ್ ಪರ್ಲ್ ನ 5ನೇ ಶಾಖೆ ಉಜಿರೆ ಕಾಶೀ ಪ್ಯಾಲೆಸ್ ನಲ್ಲಿ ಶುಕ್ರವಾರ ಲೋಕಾರ್ಪಣೆಗೊಂಡಿತ್ತು. 

ಉದ್ಘಾಟನೆಯನ್ನು ಕಾಶೀ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಯುಳ್ಳ ಉಜಿರೆ ಶ್ರೇಷ್ಠ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಇಬ್ಬರು ಖ್ಯಾತ ಉದ್ಯಮಿಗಳಾದ ಜಯರಾಮ ಬನನ್ ಹಾಗೂ ಶಶಿಧರ ಶೆಟ್ಟಿ ಅವರು ಲಾಭದ ಉದ್ದೇಶವಿಲ್ಲದೆ ತಾಯ್ನಾಡಿನಲ್ಲಿ ಸೇವೆ ನೀಡುವ ದೃಷ್ಟಿಯಿಂದ ನಿರ್ಮಿಸಿರುವ ಹೋಟೆಲ್ ಉದ್ಯಮ ಉಜಿರೆಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ದ.ಕ. ಹಾಗೂ ಉಡುಪಿ ಜಿಲ್ಲೆಗಳು ಹೋಟೆಲ್ ಉದ್ಯಮದಲ್ಲಿ ಪ್ರಖ್ಯಾತಿಗಳಿಸಿವೆ. ತುಳುನಾಡಿನ ಮಂದಿ ಎಲ್ಲಿದ್ದರೂ ಶ್ರೇಷ್ಠ ಸಾಧನೆ ಮಾಡುವ ವ್ಯಕ್ತಿತ್ವ ಉಳ್ಳವರು. ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿಗೊಳ್ಳಲಿದ್ದು ಇಲ್ಲಿನ ನಾನಾ ಭಾಗಗಳಲ್ಲಿ ಇಂತಹ ಹೋಟೆಲ್ ಗಳು ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದರು.

ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, "ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿರುವ ಉಜಿರೆ ಪ್ರದೇಶಕ್ಕೆ ಇಂತಹ ಹೋಟೆಲ್ ಒಂದರ ನಿರ್ಮಾಣ ಅಗತ್ಯವಾಗಿತ್ತು. ಬೃಹತ್ ನಗರಗಳಲ್ಲಿನ ಹೋಟೆಲ್ ಗಳಲ್ಲಿರುವ ಸೌಕರ್ಯವನ್ನು ಉಜಿರೆಗೆ ಪರಿಚಯಿಸಿರುವುದು ಹೆಮ್ಮೆಯ ವಿಚಾರ" ಎಂದು ಹೇಳಿದರು.

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, "ಉಜಿರೆಯ ಮೂಲಕ ಬರುವ ಸಾಮಾನ್ಯ ಪ್ರವಾಸಿಗರಿಂದ ಹಿಡಿದು ದೇಶದ ಶ್ರೇಷ್ಠ ವ್ಯಕ್ತಿಗಳಿಗೂ ಬೇಕಾದ ವ್ಯವಸ್ಥೆಯನ್ನು ಹೊಂದಿರುವ ಹಾಗೂ ಸ್ಥಳೀಯರ ಅಗತ್ಯತೆಗೆ ಬೇಕಾದ ಸೇವೆ ನೀಡುವ ಉದ್ದೇಶದಿಂದ ನಿರ್ಮಾಣವಾಗಿರುವ ಈ ಹೋಟೆಲ್ ಮಾದರಿಯಾಗಿದೆ" ಎಂದರು.

ಉದ್ಯಮಿ ಶಶಿಧರ ಶೆಟ್ಟಿ ಮಾತನಾಡಿ, "ಇಲ್ಲಿ ಮಿತ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆ ಸಿಗಲಿದೆ. ಅವಕಾಶಗಳು ಬೆಳವಣಿಗೆಗೆ ಕಾರಣ ಎಂಬ ಧ್ಯೇಯದೊಂದಿಗೆ ಇಲ್ಲಿನ ಸಂಪೂರ್ಣ ಕಾಮಗಾರಿಯನ್ನು ಸ್ಥಳೀಯರಿಂದಲೇ ಮಾಡಿಸಲಾಗಿದೆ. ಹಾಗೂ ಇಲ್ಲಿನ ಶೇ.80ಕ್ಕಿಂತ ಅಧಿಕ ಉದ್ಯೋಗಿಗಳು ಸ್ಥಳೀಯರೇ ಆಗಿದ್ದಾರೆ" ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನಂತ ಅಸ್ರಣ್ಣ, ಮಾಜಿ ಸಚಿವ ಕೃಷ್ಣ ಪಾಲೇಮಾರ್,
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ,ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್, ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಡಾ.ವೈ. ಭರತ್ ಶೆಟ್ಟಿ,ಯು.ರಾಜೇಶ್ ನಾಯ್ಕ್, ಎಸ್‌ ಡಿಎಂಇ ಐಟಿ ಮತ್ತು ವಸತಿ ನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ವರ್ಮ, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಗಾಯತ್ರಿ, ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಓಶಿಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ಸ್ ಅಧ್ಯಕ್ಷ ಜಯರಾಮ್ ಬನನ್ ಹಾಗೂ ಶಶಿಧರ ಶೆಟ್ಟಿ ಮತ್ತು ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಿದರು. 
ಪ್ರಕಾಶ್ ಶೆಟ್ಟಿ ನೊಚ್ಚ ವಂದಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರು ಭೇಟಿ ನೀಡಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News