ಔರಂಗಝೇಬ್‌ಗಿಂತ ಹೆಚ್ಚು ದೇವಸ್ಥಾನಗಳನ್ನು ಮೋದಿ ಧ್ವಂಸಗೊಳಿಸಿದ್ದಾರೆ: ಕಾಶಿ ವಿಶ್ವನಾಥ ದೇವಸ್ಥಾನದ ಮಹಂತ

Update: 2022-10-01 13:04 GMT
Photo: Newsclick.in

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವು ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತವನ್ನು ತಲ್ಲಣಗೊಳಿಸಿತ್ತು, ದಂಗೆಗಳು ಮತ್ತು ಹಿಂಸಾಚಾರಗಳಲ್ಲಿ ನೂರಾರು ಜನರು ಜೀವಗಳನ್ನು ಕಳೆದುಕೊಂಡಿದ್ದರು. 2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ವಿವಾದಿತ ನಿವೇಶನವನ್ನು ಹಿಂದುಗಳಿಗೆ ಹಸ್ತಾಂತರಿಸಿತ್ತು. ತೀರ್ಪು ತೀವ್ರ ಟೀಕೆಗಳಿಗೆ ಗುರಿಯಾಗಿತ್ತಾದರೂ ಭಾರತವು ಗತಕಾಲದ ವಿವಾದಗಳನ್ನು ಕೆದಕುವುದರಿಂದ ದೂರವಿರುತ್ತದೆ ಮತ್ತು ಸಮಾಜದಲ್ಲಿನ ಬಿರುಕುಗಳನ್ನು ಮುಚ್ಚಲು ಒತ್ತು ನೀಡುತ್ತದೆ ಎಂಬ ಭರವಸೆ ಮೂಡಿತ್ತು.

ಆದರೆ ಕಾಶಿಯ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ಗೋಡೆಯಲ್ಲಿನ ಶೃಂಗಾರ ಗೌರಿಯ ಚಿತ್ರಕ್ಕೆ ವರ್ಷಕ್ಕೊಂದು ಸಲದ ಬದಲು ದಿನವೂ ಪೂಜಿಸಲು ಅವಕಾಶ ನೀಡುವಂತೆ ಕೋರಿ ಐವರು ಹಿಂದು ಮಹಿಳೆಯರು ಈ ವರ್ಷದ ಪೂರ್ವಾರ್ಧದಲ್ಲಿ ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದರೊಂದಿಗೆ ಈ ಭರವಸೆ ಸುಳ್ಳಾಗಿದೆ. ಜ್ಞಾನವಾಪಿ ಮಸೀದಿಯು ಮಸೀದಿಯಲ್ಲ, ಅದು ದೇವಸ್ಥಾನವಾಗಿದೆ ಎಂದು ಈ ಮಹಿಳೆಯರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಈ ದಾವೆಯು ಗಂಗಾನದಿಯ ದಡದಿಂದ ವಿಶ್ವನಾಥ ದೇವಸ್ಥಾನಕ್ಕೆ ಮುಕ್ತ ಪ್ರವೇಶವನ್ನು ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಯೋಜನೆ ವಿಶ್ವನಾಥ ದೇಗುಲ ಕಾರಿಡಾರ್ ನಿರ್ಮಾಣದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಕಾರಿಡಾರ್ ನಿರ್ಮಾಣಕ್ಕಾಗಿ ಐತಿಹಾಸಿಕ ಕಟ್ಟಡಗಳು ಮತ್ತು ದೇವಸ್ಥಾನಗಳನ್ನು ನೆಲಸಮಗೊಳಿಸಿದಾಗ ಜ್ಞಾನವಾಪಿ ಮಸೀದಿಯನ್ನು ಗುರಿಯಾಗಿಸಿಕೊಳ್ಳಲಾಗುತ್ತದೆ ಮತ್ತು ಅದರ ಮೇಲೆ ಹಿಂದುಗಳ ಹಕ್ಕನ್ನು ಸ್ಥಾಪಿಸುವ ಪ್ರಯತ್ನ ನಡೆಯಲಿದೆ ಎಂದು ಅನೇಕರು ಭಾವಿಸಿದ್ದರು. ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಹೊಸ ಆವೃತ್ತಿ ಈಗ ತಲೆಯೆತ್ತಲಾರಂಭಿಸಿದೆ.
 
ಜ್ಞಾನವಾಪಿ ಮಸೀದಿಯೇಕೆ ಏಕಾಏಕಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ? ಜ್ಞಾನವಾಪಿ ಮಸೀದಿಯ ಗತ ಇತಿಹಾಸ ಮತ್ತು ಅದು ವಿಶ್ವನಾಥ ದೇವಸ್ಥಾನಕ್ಕೆ ಸಮೀಪದಲ್ಲಿರುವುದು ಈ ಹಿಂದೆ ವಾರಣಾಸಿಯ ಮತ್ತು ಭಾರತದ ಜನರನ್ನೇಕೆ ಕೆರಳಿಸಿರಲಿಲ್ಲ? ಶತಮಾನಗಳ ಹಿಂದೆ ಅಲ್ಲಿ ಮುಘಲರು, ವಿಶೇಷವಾಗಿ ಔರಂಗಝೇಬ್ ಹಿಂದುಗಳನ್ನು ಬೇಟೆಯಾಡಿದ್ದನೇ?

ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಈ ವರದಿಗಾರ ವಿಶ್ವನಾಥ ದೇವಸ್ಥಾನದ ಮಹಂತ ರಾಜೇಂದ್ರ ಪ್ರಸಾದ್ ತಿವಾರಿಯವರನ್ನು ಭೇಟಿಯಾಗಿದ್ದ. ಅವರ ಪೂರ್ವಜರು ಶತಮಾನಗಳಿಂದಲೂ ಈ ದೇವಸ್ಥಾನದ ಮೇಲ್ವಿಚಾರಣೆಯನ್ನು ಹೊಂದಿದ್ದರು. ತಿವಾರಿ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಮೆಲುಕು ಹಾಕಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ...

ವ್ಯವಸ್ಥೆಯು ಇತಿಹಾಸವನ್ನು ಅಧ್ಯಯನ ಮಾಡುವವರು ಮತ್ತು ಅದನ್ನು ಬೋಧಿಸುವವರನ್ನು ಹಾಗೂ ನೆನಪಿನಲ್ಲಿರುವಂಥ ವಾಸ್ತುಶಿಲ್ಪವನ್ನು ಸೃಷ್ಟಿಸುವವರನ್ನು ಒಳಗೊಂಡಿರುತ್ತದೆ. ಇವರಲ್ಲಿ ನಮಗೆ ತಿಳಿದಿರುವ ಗತಕಾಲದ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವವರಿದ್ದಾರೆ, ಜೊತೆಗೆ ಇತಿಹಾಸವು ಪೊಳ್ಳು ಎಂದು ಭಾವಿಸುವವರೂ ಇದ್ದಾರೆ. ಅವರು ತಮಗೆ ಅನುಕೂಲವಾದ ಗತಕಾಲದ ಘಟನೆಗಳು ಮತ್ತು ಪುರಾವೆಗಳನ್ನು ಹೆಕ್ಕಿಕೊಂಡು ತಮ್ಮ ಪ್ರಸ್ತುತ ಅಜೆಂಡಾವನ್ನು ಬೆಂಬಲಿಸುವ ಇತಿಹಾಸವನ್ನು ರಚಿಸುತ್ತಾರೆ. ಅವರಿಗೆ ಇತಿಹಾಸವು 1669ರಲ್ಲಿ ಔರಂಗಝೇಬನು ವಿಶ್ವನಾಥ ದೇವಸ್ಥಾನವನ್ನು ನೆಲಸಮಗೊಳಿಸಲು ಆದೇಶಿಸುವುದರೊಂದಿಗೆ ಮುಘಲರ ಇತಿಹಾಸವು ಆರಂಭವಾಗುತ್ತದೆ. 

ವಿಶ್ವನಾಥ ದೇವಸ್ಥಾನದ ನೆಲಸಮದ ಮೊದಲಿನ ಮತ್ತು ನಂತರದ ಯಾವುದೇ ವಿಷಯಗಳು ಅವರ ಲೆಕ್ಕಕ್ಕಿಲ್ಲ. ಅಕ್ಬರ್ ವಿಶ್ವನಾಥ ದೇವಸ್ಥಾನವನ್ನು ನಿರ್ಮಿಸಿದ್ದ ಎನ್ನುವುದರ ಬಗ್ಗೆ ಅವರೆಂದೂ ಮಾತನಾಡುವುದಿಲ್ಲ. ಮುಸ್ಲಿಂ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಮತ್ತು ಮತಗಳಿಕೆಗಾಗಿ ಹಿಂದುಗಳ ಭಾವನೆಗಳನ್ನು ಬಳಸಿಕೊಳ್ಳಲು ಅಗತ್ಯ ನಿರೂಪಣೆಯನ್ನು ರಚಿಸುವುದು ಅವರ ಉದ್ದೇಶವಾಗಿದೆ ಎಂದು ತಿವಾರಿ ಹೇಳಿದರು.

400-500 ವರ್ಷಗಳ ಹಿಂದೆ ಬಾದಶಾಹತ್ ಅಥವಾ ಚಕ್ರವರ್ತಿಗಳ ಆಡಳಿತವಿತ್ತು ಮತ್ತು ವ್ಯಾಖ್ಯಾನದಂತೆ ಅದು ನಿರಂಕುಶ ಪ್ರಭುತ್ವವನ್ನು ಸೂಚಿಸುತ್ತದೆ. ನಾವಿಂದು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತದ ಯುಗದಲ್ಲಿದ್ದೇವೆ. ಇಂದಿನ ಆಡಳಿತಗಾರರು ಸಂವಿಧಾನಕ್ಕೆ ಅಂಟಿಕೊಂಡಿರಬೇಕು. ಜನರು ಅವರನ್ನು ಆಯ್ಕೆ ಮಾಡಿರುವುದರಿಂದ ಅವರು ಅಧಿಕಾರಕ್ಕೆ ಬಂದಿರುತ್ತಾರೆ,ಆದರೆ ಅವರ ಕ್ರಮಗಳು ಚಕ್ರವರ್ತಿಯ ಆಡಳಿತವನ್ನು ನೆನಪಿಸುತ್ತಿವೆ. ಸಂವಿಧಾನವನ್ನು ತುಳಿಯಲು ಅವರು ಮುಸ್ಲಿಂ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಬಯಸುತ್ತಿದ್ದಾರೆ. ಇಲ್ಲಿ ‘ಅವರು’ಶಬ್ದವು ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಸೂಚಿಸುತ್ತಿದೆಯೇ ಎಂದು ನೀವು ಪ್ರಶ್ನಿಸಿದ್ದೀರಿ. ಅದಕ್ಕೆ ನನ್ನ ಉತ್ತರ ಹೌದು,ಎಷ್ಟೆಂದರೂ ಅಧಿಕಾರದಲ್ಲಿ ಇರುವವರು ಅವರೇ ಆಗಿದ್ದಾರೆ.

ವಿಶ್ವನಾಥ ಸ್ವಯಂಭೂ ಲಿಂಗವಾಗಿದ್ದಾನೆ, ಅದು ಅನಾದಿ ಕಾಲದಿಂದಲೂ ಅಲ್ಲಿತ್ತು,ಅದು ಯಾವಾಗಲೂ ಮಹತ್ವವನ್ನು ಪಡೆದುಕೊಂಡಿತ್ತು. ಆದರೆ ಶಿವಲಿಂಗಕ್ಕಾಗಿ ಬೃಹತ್ ದೇವಸ್ಥಾನವನ್ನು ಕಟ್ಟಿಸಿದ್ದು ಅಕ್ಬರ್. ಇದೇ ದೇವಸ್ಥಾನವು ಐತಿಹಾಸಿಕವಾಗಿದ್ದು,ಇದನ್ನೇ ಔರಂಗಝೇಬ್ ಧ್ವಂಸಗೊಳಿಸಿದ್ದ. ಬಿಜೆಪಿ ಮತ್ತು ಆರೆಸ್ಸೆಸ್ ಔರಂಗಝೇಬ್ನನ್ನು ಮತ್ತು ಆತನ ಮೂಲಕ ಭಾರತದಲ್ಲಿಯ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ಆತನ ವ್ಯಕ್ತಿತ್ವವನ್ನು ದೇವಸ್ಥಾನ ಧ್ವಂಸದೊಂದಿಗೆ ಸಂಯೋಜಿಸಿವೆ. ಔರಂಗಝೇಬ್ ನ ರಾಕ್ಷಸೀಕರಣದ ಹೆಸರಿನಲ್ಲಿ ಹಿಂದುತ್ವ ಅಜೆಂಡಾವನ್ನು ಜಾರಿಗೊಳಿಸುವ ಅವರ ಕನಸಿನ ಯೋಜನೆಯಾಗಿದೆ ಎಂದು ಸಂದರ್ಶನದಲ್ಲಿ ತಿವಾರಿ ಉಲ್ಲೇಖಿಸಿದ್ದಾರೆ.

ಔರಂಗಝೇಬ್ ನ ಆಡಳಿತ ಅಷ್ಟೇನೂ ಕರಾಳವಾಗಿರಲಿಲ್ಲ,ಆತ ಅಂತಹ ದುಷ್ಟನೂ ಆಗಿರಲಿಲ್ಲ. ಆತನ ಆಳ್ವಿಕೆಯಲ್ಲಿ ವಾರಣಾಸಿಯಲ್ಲಿನ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ದೇವಸ್ಥಾನವನ್ನು ಧ್ವಂಸಗೊಳಿಸಲು ಆತ ಖುದ್ದಾಗಿ ಇಲ್ಲಿಗೆ ಬಂದಿದ್ದ ಸಾಧ್ಯತೆಯಿಲ್ಲ ಎನ್ನುವುದನ್ನು ಇತಿಹಾಸಕಾರರು ಒಪ್ಪಿಕೊಳ್ಳುತ್ತಾರೆ. ಆದಾಗ್ಯೂ ದೇವಸ್ಥಾನವನ್ನು ಧ್ವಂಸಗೊಳಿಸಿದ್ದನ್ನು ಆತನ ತಲೆಗೆ ಕಟ್ಟಲಾಗಿದೆ.ಈ ಕುರಿತು ಇಂದು ಬಹಳಷ್ಟು ಗದ್ದಲ ನಡೆಯುತ್ತಿದೆ.
 
ಇದೇ ರೀತಿ ವಿಶ್ವನಾಥ ಕಾರಿಡಾರ್ ನ ನಿರ್ಮಾಣಕ್ಕಾಗಿ ಅನೇಕ ಪ್ರಾಚೀನ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಈ ವಿನಾಶವನ್ನು ಮೋದಿಯವರ ತಲೆಗೆ ಕಟ್ಟಬೇಕು. ಸುಮಾರು 286 ಶಿವಲಿಂಗಗಳನ್ನು ಕಿತ್ತೆಸೆಯಲಾಗಿತ್ತು ಮತ್ತು ಈ ಪೈಕಿ ಕೆಲವು ಚರಂಡಿಗಳಲ್ಲಿ ಬಿದ್ದಿದ್ದವು. ಇವುಗಳಲ್ಲಿ ಕೇವಲ 146 ಶಿವಲಿಂಗಗಳು ಪತ್ತೆಯಾಗಿವೆ. ಅವುಗಳನ್ನು ವಾರಣಾಸಿಯ ಲಂಕಾ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು,ನಿತ್ಯ ಅವುಗಳನ್ನು ಪೂಜಿಸಲಾಗುತ್ತಿದೆ. ನಿಸ್ಸಂಶಯವಾಗಿ ನಾನು ಔರಂಗಝೇಬ್ ವಿಶ್ವನಾಥ ದೇವಸ್ಥಾನವನ್ನು ಧ್ವಂಸಗೊಳಿಸಿದ್ದನ್ನು ನೋಡಿಲ್ಲ. ಆದರೆ ಮೋದಿಯವರ ತಂಡವು ಹಿಂದು ಭಾವನೆಗಳನ್ನು ಸಂಪೂರ್ಣವಾಗಿ ಅವಮಾನಿಸಿ ಐತಿಹಾಸಿಕ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವಲಿಂಗಗಳನ್ನು ಕಿತ್ತೆಸೆದಿದ್ದನ್ನು ನೋಡಿದ್ದೇನೆ ಎಂದು ತಿವಾರಿ ಹೇಳಿದ್ದಾರೆ. 

2019ರಲ್ಲಿ ರಾಮಜನ್ಮಭೂಮಿ-ಬಾಬರಿ ಮಸೀದಿ ತೀರ್ಪು ಬರುವ ತಿಂಗಳುಗಳ ಮೊದಲು ನಾನು ಪತ್ರಿಕಾಗೋಷ್ಠಿಯಲ್ಲಿ ಅಯೋಧ್ಯೆಯ ವಿವಾದಿತ ಜಾಗವನ್ನು ಹಿಂದೂಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಹೇಳಿದ್ದೆ. ಇದರಿಂದ ಬಿಜೆಪಿಗೆ ವೋಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅವರು ತಮ್ಮ ಮಂದಿರ-ಮಸೀದಿ ಅಜೆಂಡಾದೊಂದಿಗೆ ವಾರಣಾಸಿಗೆ ಬರುತ್ತಾರೆ ಎಂದು ಹೇಳಿದ್ದೆ. ನಾನು ಹೇಳಿದ್ದು ಸರಿ ಎಂದು ಈಗ ಸಾಬೀತಾಗಿದೆ.

ವಿಶ್ವನಾಥ್ ಕಾರಿಡಾರ್ ಪರಿಕಲ್ಪನೆ ಮತ್ತು ಯೋಜನೆ ಅನಾವರಣಗೊಂಡಾಗ, ಜ್ಞಾನವಾಪಿ ಮಸೀದಿಯ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಇಂತೇಜಾಮಿಯಾ ಸಮಿತಿಯ ಪದಾಧಿಕಾರಿಗೆ ನಾನು ಕಾರಿಡಾರ್ ವಿರುದ್ಧ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಹೇಳಿದ್ದೆ. ಇಲ್ಲದಿದ್ದರೆ ಅವರು ಕೂಡಾ ಬಿಜೆಪಿ-ಆರ್‌ಎಸ್‌ಎಸ್ ಹೆಣೆದ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದಿದ್ದೆ. ಇದೂ ಸರಿ ಎಂದು ಸಾಬೀತಾಗಿದೆ.

ಮೋದಿಯವರ ಪಕ್ಷವು ಕೇವಲ ಹಿಂದು ಧರ್ಮದ ವ್ಯಾಪಾರ ಮಾಡುತ್ತಿದೆ. ಹೆಚ್ಚು ಮುಕ್ತವಾಗಿ ಹೇಳಬೇಕೆಂದರೆ ಮೋದಿ ಔರಂಗಝೇಬ್ನಿಗಿಂತ ಹೆಚ್ಚು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಜ್ಞಾನವಾಪಿ ವಿವಾದದ ಕುರಿತಂತೆ ಹೇಳುವುದಾದರೆ,ನೀವು ಹಿಂದೆ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ಎಂದಿಗೂ ಸಾಧ್ಯವಿಲ್ಲ. ಇತಿಹಾಸದಿಂದ ನೀವು ಒಳ್ಳೆಯ ಅಥವಾ ಕೆಟ್ಟ ಪಾಠಗಳನ್ನು ಮಾತ್ರ ಕಲಿಯಬಹುದು. ಇತಿಹಾಸದಲ್ಲಿಯ ತಪ್ಪುಗಳನ್ನು ಸರಿಪಡಿಸಲು ಬಯಸುವವರು ಹೊಸ ಇತಿಹಾಸವನ್ನು ಬರೆಯುವುದಿಲ್ಲ. ಅವರು ಕೇವಲ ಬೆಂಕಿಗೆ ತುಪ್ಪವನ್ನು ಸುರಿಯುತ್ತಾರೆ,ಅವರು ಸಮಾಜದಲ್ಲಿ ವಿಷವನ್ನು ಬೆರೆಸುತ್ತಾರೆ. ನೀವು ಔರಂಗಝೇಬ್ನ ತಪ್ಪುಗಳನ್ನು ಪುನರಾವರ್ತಿಸಲು ಬಯಸಿದ್ದರೆ ನೀವು ಅವನಿಗಿಂತ ಒಳ್ಳೆಯವರಾಗಿರಲು ಸಾಧ್ಯವಿಲ್ಲ ಎಂದು ತಿವಾರಿ ಹೇಳಿದರು. 

ಯುದ್ಧ ಪ್ರಾರಂಭವಾಗುವ ಮೊದಲೇ ನೀವು ಭಯಗೊಂಡರೆ, ಬಹುಶಃ ನಿಮಗೆ ಹೋರಾಡಲು ಸಾಧ್ಯವಿಲ್ಲ. ಅವರು ನನ್ನ ಮೇಲೆಯೂ ಒತ್ತಡ ಹೇರಿದರು, ಆದರೆ ನಾನು ಜಗಳವಾಡುತ್ತಲೇ ಇದ್ದೆ. ಇಂದಿಗೂ ವಿಶ್ವನಾಥ್ ಕಾರಿಡಾರ್ ವಿರುದ್ಧ ಮಾತನಾಡುತ್ತಿರುವುದು ನಾನೊಬ್ಬನೇ. ಕಾರಿಡಾರ್ ವಿರುದ್ಧದ ನಮ್ಮ ಚಳವಳಿಯಲ್ಲಿ ನಮ್ಮೊಂದಿಗೆ ಇದ್ದವರೂ ಮೌನವಾಗಿದ್ದಾರೆ. ಸರಿ, ನನ್ನ ಹೋರಾಟದಲ್ಲಿ ನಾನು ಯಶಸ್ವಿಯಾಗಲಿಲ್ಲ, ಆದರೆ ಕಾರಿಡಾರ್ ನಿರ್ಮಿಸಲು ಪ್ರಾಚೀನ ದೇವಾಲಯಗಳನ್ನು ಕೆಡವುವುದನ್ನು ದೃಢವಾಗಿ ವಿರೋಧಿಸಿದ ಒಬ್ಬ ವ್ಯಕ್ತಿ ಇದ್ದಾನೆ ಎಂದು ಕನಿಷ್ಠ ಇತಿಹಾಸವು ನೆನಪಿಸಿಕೊಳ್ಳುತ್ತದೆ.

ನನ್ನ ಮೇಲೆ ಅಪಾರ ಒತ್ತಡ ಹೇರಲಾಯಿತು. ಅವರು ನನ್ನ ಮನೆಯ ಸುತ್ತಲೂ ಕಂದಕಗಳನ್ನು ತೋಡಿದರು. ಮನೆಯನ್ನು ಮಾರಿ ಬೇರೆ ಸ್ಥಳಕ್ಕೆ ಶಿಫ್ಟ್ ಮಾಡುವಂತೆ ಹೇಳಿದರು. ನನ್ನ ಮನೆ ಕೂಡ ಕಾರಿಡಾರ್‌ನ ವಲಯದಲ್ಲಿಲ್ಲದಿದ್ದರೂ ಅಂತಿಮವಾಗಿ, ನನ್ನ ಮನೆಯೂ ನಾಶವಾಯಿತು. ನಾನು ಅಲ್ಲಿಯೇ ಉಳಿದುಕೊಂಡರೆ, ಕಾರಿಡಾರ್ ನಿರ್ಮಿಸುವ ಅವರ ಕಾರ್ಯದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತೇನೆ ಎಂದು ಅವರು ಹೆದರುತ್ತಿದ್ದರು ಎಂದು ನಾನು ಭಾವಿಸುತ್ತೇನೆ.

300-400 ವರ್ಷಗಳಷ್ಟು ಹಿಂದಿನ ವಿಷಯಗಳನ್ನು ಕೆದಕುವುದರಲ್ಲಿ ಏನಾದರೂ ಅರ್ಥವಿದೆಯೇ? ನಾಳೆ ಇನ್ನೂ ಹಿಂದಿನ ವಿಷಯವನ್ನೆತ್ತಲು ಯಾರಾದರೂ ಬಯಸಬಹುದು. ಆಗ ಸಮಾಜಕ್ಕೆ ಏನಾಗುತ್ತದೆ ಎನ್ನುವುದನ್ನು ಯೋಚಿಸಿ. ನಮ್ಮ ಸಮಾಜದ ಪ್ರಸ್ತುತ ಸ್ಥಿತಿಗಳನ್ನು ಸುದಾರಿಸಲು ನಾವೆಲ್ಲ ಯೋಚಿಸಬೇಕಿದೆ ಮತ್ತು ಅದಕ್ಕಾಗಿ ಶ್ರಮಿಸಬೇಕಿದೆ. ಸಾಮಾಜಿಕ ಸೌಹಾರ್ದ ಶೂನ್ಯವಾಗಿರುವ ಯಾವುದೇ ದೇಶವು ಪ್ರಗತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು newsclick ಗೆ ನೀಡಿದ ಸಂದರ್ಶನದಲ್ಲಿ ವಿಶ್ವನಾಥ ದೇವಸ್ಥಾನದ ಮಹಂತ ರಾಜೇಂದ್ರ ಪ್ರಸಾದ್ ತಿವಾರಿ ಹೇಳಿಕೆ ನೀಡಿದ್ದಾರೆ.

ಕೃಪೆ:newsclick.in

Writer - ಐಜಾಝ್ ಅಷ್ರಫ್ (newsclick.in)

contributor

Editor - ಐಜಾಝ್ ಅಷ್ರಫ್ (newsclick.in)

contributor

Similar News