×
Ad

ಮಂಗಳೂರು: ಹಿರಿಯ ನಾಗರಿಕರ ದಿನಾಚರಣೆ

Update: 2022-10-01 20:44 IST

ಮಂಗಳೂರು, ಅ.1: ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ದ.ಕ.ಜಿಪಂ ಸಭಾಂಗಣದಲ್ಲಿ ‘ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ. ಆಸ್ತಿ ದೊರೆತ ನಂತರ ವಯಸ್ಸಾದ ತಂದೆ ತಾಯಿಯನ್ನು ದೂರ ಮಾಡುವಂತಿಲ್ಲ, ಕಾನೂನು ಪ್ರಕಾರ ಹಿರಿಯ ನಾಗರಿಕರು ತಾವು ಸಂಪಾದಿಸಿದ ಆಸ್ತಿಯನ್ನು ಮರಳಿ ಪಡೆಯಬಹುದು. ಇಂತಹ ಕಾನೂನುಗಳ ಬಗ್ಗೆ ಹಿರಿಯ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್ ವೃದ್ಧಾಪ್ಯ ಎಂದರೆ ಜೀವನ ದಲ್ಲಿ ಮತ್ತೆ ಮಗುವಾಗುವ ಸಮಯ. ಇಂತಹ ಸಂದರ್ಭದಲ್ಲಿ ಮಕ್ಕಳು ಹಿರಿಯರನ್ನು ಪ್ರೀತಿ, ಅಭಿಮಾನದಿಂದ ಕಾಣಬೇಕು. ಹಿರಿಯ ನಾಗರಿಕರು ಹಣ, ಆಸ್ತಿ, ಅಂತಸ್ತಿಗಿಂತಲೂ ಮಕ್ಕಳು ಅವರಿಗಾಗಿ ನೀಡುವ ಸಮಯಕ್ಕೆ ಎದುರು ನೋಡುತ್ತಿರುತ್ತಾರೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ಹಿರಿಯ ನಾಗರಿಕರನ್ನು ವೃದ್ದಾಶ್ರಮಕ್ಕೆ ತಳ್ಳುವುದು ಸರಿಯಲ್ಲ. ವಯಸ್ಸಾದಂತೆ ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ವರ್ತನೆಗಳು ಸಹಜ. ಅದಕ್ಕಾಗಿ ಅವರನ್ನು ದೂರ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್, ಜಿಪಂ ಉಪ ಕಾರ್ಯದರ್ಶಿ ಆನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪಭೋವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News