×
Ad

ನ್ಯಾಯಾಂಗ ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲಿ: ನ್ಯಾ.ಸಿ.ಎಂ.ಜೋಷಿ

Update: 2022-10-01 20:47 IST

ಉಡುಪಿ, ಅ.1: ಜನಸಾಮಾನ್ಯರಿಗೆ ಕ್ಷಿಪ್ರಗತಿಯಲ್ಲಿ, ಸಕಾಲದಲ್ಲಿ ನ್ಯಾಯ ಸಿಗುವ ನಿಟ್ಟಿನಲ್ಲಿ  ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿ ಸಬೇಕಿದೆ. ಬಾಕಿ ಕಡತಗಳು ಶೀಘ್ರವೇ ವಿಲೇವಾರಿಯಾಗುವಂತೆ ಅದು ನೋಡಿ ಕೊಳ್ಳಬೇಕಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಿ.ಎಂ.ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಸಿ.ಎಂ.ಜೋಷಿ ಹಾಗೂ ನ್ಯಾ.ಟಿ.ಜಿ. ಶಿವಶಂಕರೇಗೌಡ ಅವರನ್ನು ಇಂದು ಸಂಜೆ ಉಡುಪಿ ವಕೀಲರ ಸಂಘದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಜನಸಾಮಾನ್ಯರು ಕೋರ್ಟ್, ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಅವರಿಗೆ ಕ್ಲಪ್ತ ಸಮಯದಲ್ಲಿ ನ್ಯಾಯ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಗಮನ ಹರಿಸಬೇಕಾಗಿದೆ ಎಂದು ಜಿಲ್ಲಾ ನ್ಯಾಯಾಲ ಯದ ಆವರಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅವರು ನುಡಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸಾಧಕರು ಕೂಡಾ ವಕೀಲರ ನಡುವಿನಿಂದಲೇ ಮೇಲೆ ಬಂದು ಸಾಧಕರಾಗುತ್ತಾರೆ. ಈ ಕ್ಷೇತ್ರದಲ್ಲಿ ಎಲ್ಲರಿಗೂ ಸಾಧಿಸಬೇಕೆಂಬ ತುಡಿತವಿರುತ್ತದೆ. ಕರಾವಳಿ ಭಾಗದ ಉಡುಪಿ, ಕುಂದಾಪುರ, ಕಾರ್ಕಳದ ವಕೀಲರು ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತರಾಗಬೇಕು ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ನ್ಯಾಯವಾದಿ ಅಸದುಲ್ಲಾ ಶುಭಾಶಂಸನೆಗೈದರು.

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಕೀಲರ ಪರಿಷತ್‌ನ ಸದಸ್ಯ ಹಾಗೂ ಹಿರಿಯ ವಕೀಲ ಪಿ.ಪಿ.ಹೆಗ್ಡೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬಿ. ಸೋಮನಾಥ್ ಹೆಗ್ಡೆ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕೆ. ಶೆಟ್ಟಿ, ಶೈಲಜಾ ಜೋಷಿ, ಎಂ.ಎಸ್. ವೇದಾವತಿ ಶಿವಶಂಕರೇಗೌಡ ಉಪಸ್ಥಿತರಿದ್ದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿ, ನ್ಯಾಯವಾದಿ ಮೊಹಮ್ಮದ್ ಸುಹಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News