ಆರೆಸ್ಸೆಸ್ ನಾಯಕ, ಟ್ರಾವೆಲ್ ಏಜಂಟ್, ರಾಜಕಾರಣಿ: ಇಲ್ಲಿದ್ದಾರೆ ನೋಡಿ ಭಾರತದ ‘ಮೀಡಿಯಾ ಮೌಲಾನಾಗಳು’

Update: 2022-10-02 07:55 GMT
Photo: Gobindh VB/Newslaundry.com

ಅಂತ್ಯವಿಲ್ಲದ ಮೌಖಿಕ ಸಂಘರ್ಷಗಳು ಟಿವಿ ಪರದೆಯ ಮೇಲೆ ನಡೆಯುತ್ತಲೇ ಇರುತ್ತವೆ. ಟಿಆರ್ಪಿಯನ್ನು ದೋಚುವ ಕೆಲವು ಅಗತ್ಯ ಅಂಶಗಳನ್ನು ನೀವು ಅಲ್ಲಿ ಗಮನಿಸಿರಬಹುದು; ಕೋಮುವಾದಿ ಚೌಕಟ್ಟು,ಮತಾಂಧ ನಿರೂಪಕ/ನಿರೂಪಕಿ,ಹಿಂದುತ್ವ ಪ್ರತಿಪಾದಕ,ರೇಗುವ ಮೌಲಾನಾ, ಸಾಕಷ್ಟು ಅವಹೇಳನಕಾರಿ ಟೀಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು, ಆದಾಯಕ್ಕಾಗಿ ಅಂಕೆ ತಪ್ಪಿದ ಚರ್ಚೆಗಳನ್ನು ಹೆಚ್ಚೆಚ್ಚು ನೆಚ್ಚಿಕೊಳ್ಳುತ್ತಿರುವ ಟಿವಿ ಸುದ್ದಿವಾಹಿನಿಗಳು ಅರೆಬರೆ ಮೌಲಾನಾಗಳನ್ನು ಮುಸ್ಲಿಂ ಬುದ್ಧಿಜೀವಿಗಳು,ಸಮುದಾಯದ ಪ್ರತಿನಿಧಿಗಳು ಮತ್ತು ಧಾರ್ಮಿಕ ನಾಯಕರನ್ನಾಗಿ ಬಿಂಬಿಸುವುದನ್ನು ಮುಂದುವರಿಸಿವೆ. ಆದರೆ ಇವರೆಲ್ಲ ಯಾರು,ಹೊಟ್ಟೆಪಾಡಿಗೆ ಅವರೇನು ಮಾಡುತ್ತಿದ್ದಾರೆ,ಟಿವಿ ಪರದೆಯ ಮೇಲೆ ಅವರೇಕೆ ಕಾಣಿಸಿಕೊಳ್ಳುತ್ತಿದ್ದಾರೆ? ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು newslaundry.com ಅವರಲ್ಲಿ ಕೆಲವರನ್ನು ಭೇಟಿಯಾಗಿದೆ.

ಹಾಫಿಝ್ ಗುಲಾಂ ಸರವರ್ ಅಲಿಯಾಸ್ ‘ಟಿವಿವಾಲಾ ಮೌಲಾನಾ’: 

Photo: Newslaundry.com

ಸರವರ್ ಟಿವಿ ಪರದೆಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎಬಿಪಿ ವಾಹಿನಿಯು ಜ್ಞಾನವಾಪಿ ವಿವಾದ ಕುರಿತು ಚರ್ಚೆ ಏರ್ಪಡಿಸಿದ್ದಾಗ ಮುಸ್ಲಿಂ ಧರ್ಮಗುರುವಾಗಿದ್ದ ಸರವರ್ ನ್ಯೂಸ್ ನೇಷನ್ ನ ‘ಕ್ಯಾ ಕೆಹತಾ ಹೈ ಇಸ್ಲಾಂ ’ಕಾರ್ಯಕ್ರಮದಲ್ಲಿ ಮುಸಿಂ ವಿದ್ವಾಂಸರಾಗಿದ್ದರು. ಆಜ್ ತಕ್ ನ ‘ಹಲ್ಲಾ ಬೋಲ್’ ಕಾರ್ಯಕ್ರಮದಲ್ಲಿ ಇದೇ ಸರವರ್ ಆಲ್ ಇಂಡಿಯಾ ಯುನೈಟೆಡ್ ಮುಸ್ಲಿಂ ಫ್ರಂಟ್ (ಎಐಯುಎಂಎಫ್)ನ ರಾಷ್ಟ್ರೀಯ ವಕ್ತಾರರಾಗಿದ್ದರು.

ನ್ಯೂಸ್ ನೇಷನ್ ನ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಸ್ಲಿಂ ಓರ್ವರು ಪದೇ ಪದೇ ಮೌಲಾನಾ ಎಂದು ತನ್ನನ್ನು ಉಲ್ಲೇಖಿಸುತ್ತಿದ್ದಾಗ ಸರವರ್,‘ನಾನು ಮೌಲಾನಾ ಅಲ್ಲ, ಮೈ ಟಿವಿವಾಲಾ ಮೌಲಾನಾ ಹೂಂ ’ ಎಂದು ತಿದ್ದಿದ್ದರು.

‘ನಾನು ಬಿಹಾರ ಮದರಸ ಶಿಕ್ಷಣ ಮಂಡಳಿಯಿಂದ ಮೌಲ್ವಿ ಕೋರ್ಸ್ ಅನ್ನಷ್ಟೇ ಮಾಡಿದ್ದೇನೆ. ನಾನು ‘ಪ್ರಮಾಣೀಕೃತ ಮೌಲಾನಾ ’ಅಲ್ಲ,ಎಂದಿಗೂ ನನ್ನನ್ನು ಮೌಲಾನಾ ಅಥವಾ ಮುಸ್ಲಿಂ ಧರ್ಮಗುರು ಎಂದು ಬಣ್ಣಿಸಿಕೊಂಡಿಲ್ಲ ’ ಎಂದು ಸರವರ್ ತಿಳಿಸಿದರು. ಎಐಯುಎಂಎಫ್ನ ಸ್ಥಾಪಕ ಸದಸ್ಯರಾಗಿರುವ ಅವರು,ಟಿವಿಯಲ್ಲಿ ತನ್ನನ್ನು ಮುಸ್ಲಿಂ ಧಾರ್ಮಿಕ ನಾಯಕ ಅಥವಾ ಮೌಲಾನಾ ಎಂದು ಕರೆಯುವ ಯಾವುದೇ ಪ್ರಯತ್ನವನ್ನು ಹಲವಾರು ಸಲ ಆಕ್ಷೇಪಿಸಿದ್ದೇನೆ ಎಂದು ಹೇಳಿಕೊಂಡರು.

 ಬಿಹಾರದ ಬೇಗುಸರಾಯ್ ಮೂಲದ,ಹಾಲಿ ದಿಲ್ಲಿಯ ಬಾಟ್ಲಾ ಹೌಸ್ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿರುವ ಸರವರ್ ತಾನೋರ್ವ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಾರೆ. ‘ಹಿತೈಷಿ’ಯೋರ್ವರು ಅವರಿಗೆ ವಸತಿ ಸೌಲಭ್ಯವನ್ನು ಒದಗಿಸಿದ್ದಾರೆ. ಕಿರಾರಿಯಲ್ಲಿ ಪರ್ಸ್ಗಳು ಮತ್ತು ಬೆಲ್ಟ್ಗಳನ್ನು ತಯಾರಿಸುವ ಸಣ್ಣ ಘಟಕವೊಂದನ್ನು ನಡೆಸುತ್ತಿರುವ ಅವರು ‘ದೇಶ ಕಿ ಸಚ್ಚಾಯಿ’ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. 

ಪರದೆಯ ಮೇಲೆ ರೋಷಾವಿಷ್ಟರಾಗುವಂತೆ ನಿರೂಪಕನೋರ್ವ ಇನ್ನೋರ್ವ ಮೌಲಾನಾಗೆ ಸನ್ನೆ ಮಾಡುವುದನ್ನು ತಾನು ನೋಡಿದ್ದೆ ಮತ್ತು ಅವರು ಅದನ್ನು ಪಾಲಿಸಿದ್ದರು ಎಂದು ಸರವರ್ ಹೇಳಿದರು. ಆದರೆ ನಿರೂಪಕ,ವಾಹಿನಿ ಅಥವಾ ಆ ಮೌಲಾನಾರನ್ನು ಹೆಸರಿಸಲು ಅವರು ನಿರಾಕರಿಸಿದರು. ‘ನನ್ನ ನಿಷ್ಠುರತೆಯಿಂದ ನನ್ನ ಸಂಬಂಧಗಳು ಕೆಡುತ್ತಿವೆ,ನಾನು ಜನರನ್ನು ಹೆಸರಿಸಿದರೆ ಅವು ಇನ್ನಷ್ಟು ಹಾಳಾಗುತ್ತವೆ’ ಎಂದರು.

ಸರವರ್ 2005ರ ವಿಧಾನಸಭಾ ಚುನಾವಣೆಯಲ್ಲಿ ಬೇಗುಸರಾಯ್ನ ಪೆರಿಯಾ ಬರಿಯಾರ್ಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಮಾಜಿ ಸಂಸದ ಉದಿತ್ ರಾಜ್ ಅವರ ಇಂಡಿಯನ್ ಜಸ್ಟೀಸ್ ಪಾರ್ಟಿಯ ಬಿಹಾರ ಮುಖ್ಯಸ್ಥರಾಗಿದ್ದ ಅವರು ತನಗೆ ಅಲ್ಲಿ ಅರ್ಹ ಗೌರವ ಸಿಗದ್ದರಿಂದ 2009ರಲ್ಲಿ ಬಿಎಸ್ಪಿಗೆ ಸೇರಿದ್ದರು. 2014ರಲ್ಲಿ ಪಕ್ಷವನ್ನು ತೊರೆಯುವ ಮುನ್ನ ಬಿಎಸ್ಪಿಯ ದಿಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸರವರ್ ಹೊಟ್ಟೆಪಾಡಿಗಾಗಿ ಪೇಂಟರ್ ಕೆಲಸ ಮಾಡುತ್ತಿದ್ದರು.
 ‌
ಕೆಲವು ಪ್ಯಾನೆಲಿಸ್ಟ್ಗಳಿಗೆ ವಾಹಿನಿಗಳು ಸುಮಾರು ಎರಡು ಸಾವಿರ ರೂ.ಗಳಿರುವ ಕವರ್ಗಳನ್ನು ನೀಡುತ್ತವೆ,ಆದರೆ ತಾನೆಂದಿಗೂ ಆ ಹಣವನ್ನು ಸ್ವೀಕರಿಸಿಲ್ಲ. ತನ್ನ ಸ್ಪ್ಲೆಂಡರ್ ಬೈಕ್ನಲ್ಲಿ ಟಿವಿ ಚರ್ಚೆಗಳಿಗೆ ಹೋಗುತ್ತೇನೆ,ಕೆಲವೊಮ್ಮೆ ವಾಹಿನಿಗಳೇ ವಾಹನಗಳನ್ನು ಕಳುಹಿಸುತ್ತವೆ ಎಂದು ಸರವರ್ ತಿಳಿಸಿದರು.

ನಿಝಾಮುದ್ದೀನ್ ಮರ್ಕಝ್ ಕೋವಿಡ್ ಪ್ರಹಸನದ ನಡುವೆ ಸರವರ್ 15 ತಬ್ಲಿಘಿ ಜಮಾಅತ್ ಸದಸ್ಯರಿಗೆ ಆಶ್ರಯ ನೀಡಿದ್ದರೆಂದು ಆರೋಪಿಸಲಾಗಿತ್ತು. ಆಗ ಝೀ ನ್ಯೂಸ್ನಲ್ಲಿದ್ದ ಸುಧೀರ್ ಚೌಧರಿ ಸರವರ್ ಸಮಾಜದ ಶತ್ರು ಎಂದು ಘೋಷಿಸಿದ್ದರು.

ಶೋಯಿಬ್ ಜಮಾಯಿ ಅಲಿಯಾಸ್ ‘ಮುಸ್ಲಿಂ ಚಿಂತಕ’

Photo: Newslaundry.com

ಜಮಾಯಿ (33) 2018ರಿಂದ ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ,ಆದರೆ ಅವರು ಹಿಂದೆ ಎರಡು ರಾಜಕೀಯ ಪಕ್ಷಗಳ ಸದಸ್ಯರಾಗಿದ್ದರೂ ಟಿವಿ ವಾಹಿನಿಗಳು ಅವರನ್ನು ಹೆಚ್ಚಾಗಿ ಮುಸ್ಲಿಂ ಚಿಂತಕ ಅಥವಾ ವಿದ್ವಾಂಸ ಎಂದೇ ಬಣ್ಣಿಸುತ್ತವೆ.

ಜಾರ್ಖಂಡ್ ನ ಗಿರಿಧಿ ಮೂಲದವರಾಗಿದ್ದು,ಹಾಲಿ ದಿಲ್ಲಿಯ ಜಾಮಿಯಾ ನಗರದಲ್ಲಿ ವಾಸವಿರುವ ಜಮಾಯಿ ರಿಯಲ್ ಎಸ್ಟೇಟ್ ಮತ್ತು ಆಹಾರ ವ್ಯವಹಾರಗಳನ್ನು ನಡೆಸುತ್ತಾರೆ. ಬೆಂಗಳೂರು ವಿವಿಯಿಂದ ಬಿ.ಟೆಕ್ ಪದವೀಧರರಾಗಿರುವ ಅವರು,ಪ್ರಸ್ತುತ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿಯೇ ಅವರು ಇಸ್ಲಾಮಿಕ್ ಸ್ಟಡೀಸ್ನಲ್ಲಿ ಒಂದು ವರ್ಷದ ಡಿಪ್ಲೋಮಾವನ್ನೂ ಮಾಡಿದ್ದಾರೆ.
  
ಆದರೆ ಜಮಾಯಿ ಇಸ್ಲಾಮಿಕ್ ಧರ್ಮಶಾಸ್ತ್ರದ ವಿದ್ವಾಂಸರಲ್ಲ ಮತ್ತು ತಾನು ಅಂತಹ ವಿದ್ವಾಂಸ ಎಂದು ಹೇಳಿಕೊಳ್ಳುವುದಿಲ್ಲ. ಆದಾಗ್ಯೂ ತನ್ನ ನಿಂದಾತ್ಮಕ ಹೇಳಿಕೆಗಳು ಮತ್ತು ಮೋದಿ ವಿರೋಧಿ ನಿಲುವಿಗಾಗಿ ಟಿವಿ ವಾಹಿನಿಗಳು ಅವರ ಬಗ್ಗೆ ಒಲವು ಹೊಂದಿವೆ.

‘ನನ್ನ ತಂದೆ ತಬ್ಲಿಘಿ ಜಮಾಅತ್ನೊಂದಿಗೆ ಗುರುತಿಸಿಕೊಡಿದ್ದರು, ಹೀಗಾಗಿ ನಾನೂ ಅದನ್ನು ಸೇರಿದ್ದೆ. ಜಾಮಿಯಾದಿಂದ ನನ್ನ ಪಿಎಚ್ಡಿ ಸಂದರ್ಭದಲ್ಲಿ 2016ರಲ್ಲಿ ನಾನು ಇಂಡಿಯಾಸ್ ಮುಸ್ಲಿಂ ಫೌಂಡೇಷನ್ (ಐಎಂಎಫ್) ಸ್ಥಾಪಿಸಿದ್ದೆ. 2017ರಲ್ಲಿ ಆರ್ಜೆಡಿಯ ದಿಲ್ಲಿ ರಾಜ್ಯಾಧ್ಯಕ್ಷನಾಗಿದ್ದೆ ’ಎಂದು ಜಮಾಯಿ ತಿಳಿಸಿದರು.
 
ಆರ್ಜೆಡಿಯಲ್ಲಿದ್ದಾಗ ದಿಲ್ಲಿಯಲ್ಲಿ ಇಂಡಿಯಾ ಇಸ್ಲಾಮಿಕ್ ಸೆಂಟರ್ನ ಕಾರ್ಯಕ್ರಮವೊಂದರಲ್ಲಿ ತಾನು ಭಾಷಣ ಮಾಡಿದ್ದೆ. ಅದರ ಬಳಿಕ ಮುಸ್ಲಿಂ ಸಮುದಾಯದ ಸದಸ್ಯರು ತನ್ನನ್ನು ಭೇಟಿಯಾಗಿ ಟಿವಿ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದರು. ಅಲ್ಲಿಯ ಚರ್ಚೆಗಳಲ್ಲಿ ಭಾಗವಹಿಸುವವರು ಮುಸ್ಲಿಮರನ್ನು ಸೂಕ್ತವಾಗಿ ಪ್ರತಿನಿಧಿಸುವುದಿಲ್ಲ ಮತ್ತು ಇದೇ ಕಾರಣದಿಂದ ಸಮುದಾಯವು ಕೆಟ್ಟ ಹೆಸರು ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಆದರೆ ಅವರು 2018ರಲ್ಲಿ ಆಜ್ ತಕ್ನಿಂದ ಆರಂಭಿಸಿ ಟಿವಿ ಚರ್ಚೆಗಳಲ್ಲಿ ಆರ್ಜೆಡಿ ಪರವಾಗಿ ಭಾಗವಹಿಸಿಲ್ಲ,ಐಎಂಎಫ್ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ. ಮೊದಲ 3-4 ತಿಂಗಳುಗಳಲ್ಲೇ ಎಲ್ಲ ಮುಖ್ಯವಾಹಿನಿ ವಾಹಿನಿಗಳು ತಮ್ಮ ಪ್ರೈಮ್ ಟೈಮ್ ಶೋಗಳಿಗಾಗಿ ತನ್ನನ್ನು ಆಹ್ವಾನಿಸಿದ್ದವು ಎಂದರು. 2020ರ ಬಿಹಾರ ಚುನಾವಣೆಗಳಿಗೆ ಮುನ್ನ ಆರ್ಜೆಡಿಯನ್ನು ತೊರೆದು ಪಪ್ಪು ಯಾದವರ ಅಧಿಕಾರ ಪಾರ್ಟಿ ಲೋಕತಾಂತ್ರಿಕಕ್ಕೆ ಸೇರಿದ್ದ ಅವರು,ಕೆಲವು ತಿಂಗಳುಗಳ ಹಿಂದೆ ಅದಕ್ಕೆ ರಾಜೀನಾಮೆ ನೀಡಿದ್ದಾರೆ.

ಮೌಲಾನಾ ಸಾಜಿದ್ ರಶೀದಿ ಅಲಿಯಾಸ್ ‘ಫೈರ್ಬ್ರಾಂಡ್ ಮೌಲ್ವಿ’:

Photo: Newslaundry.com

ಸಮೀಕ್ಷಾ ತಂಡಗಳು ಮದರಸಗಳಿಗೆ ಆಗಮಿಸಿದಾಗ ಅವುಗಳನ್ನು ಶೂಗಳು ಮತ್ತು ಚಪ್ಪಲಿಗಳಿಂದ ಸ್ವಾಗತಿಸಬೇಕು ಎಂದು ರಶೀದಿ ಇತ್ತೀಚಿಗೆ ಉತ್ತರ ಪ್ರದೇಶದಲ್ಲಿಯ ಮದರಸಗಳ ಸಮೀಕ್ಷೆಯ ಯೋಗಿ ಆದಿತ್ಯನಾಥ್ ಸರಕಾರದ ನಿರ್ಧಾರದ ಕುರಿತು ಹೇಳುವ ಮೂಲಕ ಟಿವಿ ವಿವಾದವೊಂದನ್ನು ಸೃಷ್ಟಿಸಿದ್ದರು. ಚರ್ಚೆಗಳಲ್ಲಿ ಭಾಗವಹಿಸಲು ಆರಂಭಿಸಿ 10 ವರ್ಷಗಳು ಕಳೆದ ಬಳಿಕವೂ ಅವರು ಸುದ್ದಿ ವಾಹಿನಿಗಳ ಪಾಲಿಗೆ ಜನಪ್ರಿಯರಾಗಿಯೇ ಉಳಿದಿರುವುದು ಏಕೆ ಎನ್ನುವುದಕ್ಕೆ ಇದು ಸುಳಿವು ನೀಡುತ್ತದೆ.

ಆಲ್ ಇಂಡಿಯಾ ಇಮಾಮ್ಸ್ ಅಸೋಸಿಯೇಷನ್ ನ ಸ್ಥಾಪಕ ಹಾಗೂ ಭಾರತೀಯ ಟಿವಿಯಲ್ಲಿ ಅತ್ಯಂತ ವಿವಾದಾತ್ಮಕ ಮುಸ್ಲಿಂ ಧರ್ಮಗುರುಗಳಲ್ಲಿ ಓರ್ವರಾಗಿರುವ ರಶೀದಿ ಹಜ್ ಪ್ರವಾಸದ ಉದ್ಯಮವನ್ನು ನಡೆಸುತ್ತಿದ್ದಾರೆ. ದಿಲ್ಲಿಯ ಪಹಾಡಗಂಜ್ನ ಮಸೀದಿಯ ಮೇಲಿನ ಕೋಣೆಯಲ್ಲಿ ವಾಸವಿರುವ ಅವರು ಮಸೀದಿಯಲ್ಲಿ ನಮಾಝ್ ನೇತೃತ್ವ ವಹಿಸುತ್ತಿದ್ದಾರೆ.

‘ಹಿಂದೆಲ್ಲ ಟಿವಿ ವಾಹಿನಿಗಳು ಚರ್ಚೆಗಳಲ್ಲಿ ಭಾಗವಹಿಸಿದರೆ ಹಣ ನೀಡುತ್ತಿದ್ದವು, ಆದರೆ ಈಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ ಅದನ್ನು ನಿಲ್ಲಿಸಿವೆ. ಮೊದಲು ಟಿವಿ ವಾಹಿನಿಗಳಿಗೆ ಹೆಚ್ಚಿನ ಆಯ್ಕೆಗಳಿರಲಿಲ್ಲ, ಹೀಗಾಗಿ ನಮ್ಮನ್ನು ಕರೆದು ಹಣ ನಿಡುತ್ತಿದ್ದವು. ಆದರೆ ಈಗ ಅವು ಅನೇಕ ಮೌಲಾನಾಗಳನ್ನು ಸೃಷ್ಟಿಸಿವೆ. ಸ್ಟುಡಿಯೋಗಳಿಗೆ ಆಹ್ವಾನಿಸಲ್ಪಡುವ ಜನರು ಗಡ್ಡವನ್ನು ಬಿಟ್ಟಿರುತ್ತಾರೆ ಮತ್ತು ಸ್ಕಲ್ ಕ್ಯಾಪ್ ಧರಿಸಿರುತ್ತಾರೆ,ಆದರೆ ಅವರಿಗೆ ಪ್ರಶ್ನೆಗಳು ಅರ್ಥವಾಗುವುದೂ ಇಲ್ಲ. ಅವರು ಸುಮ್ಮನೆ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ. ಮಾತನಾಡಿದರೂ ಅದು ಅಸಂಬದ್ಧವೇ ಆಗಿರುತ್ತದೆ. ಈಗ ಡಿಡಿ ನ್ಯೂಸ್ ಮಾತ್ರ ಹಣ ನೀಡುತ್ತಿದೆ ’ಎಂದು ರಶೀದಿ ಹೇಳಿದರು.
 
ಚರ್ಚೆಗಳಲ್ಲಿ ರೋಷಾವಿಷ್ಟರಾಗಿ ವರ್ತಿಸುವಂತೆ ವೌಲಾನಾಗಳಿಗೆ ಆ್ಯಂಕರ್ಗಳು ಸನ್ನೆಯ ಮೂಲಕ ಸೂಚಿಸುತ್ತಾರೆ ಎಂದು ಅವರು ಬೆಟ್ಟು ಮಾಡಿದರು. ಸಭಿಕರಿಗೆ ಮೊದಲೇ ಪ್ರಶ್ನೆಗಳನ್ನು ನೀಡಲಾಗಿರುತ್ತದೆ ಮತ್ತು ಅವುಗಳನ್ನು ಯಾರಿಗೆ ಕೇಳಬೇಕು ಎಂದು ತಿಳಿಸಲಾಗಿರುತ್ತದೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಪ್ರಚೋದನಾತ್ಮಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಯಾರಾದರೂ ಅವುಗಳಿಗೆ ಸೂಕ್ತ ಉತ್ತರ ನೀಡಲು ಪ್ರಾರಂಭಿಸಿದರೆ ಸಭಿಕರು ಕೂಗಾಡಲು ಆರಂಭಿಸುತ್ತಾರೆ ಎಂದು ಅವರು ಆರೋಪಿಸಿದರು.
 
ಉ.ಪ್ರದೇಶದ ಸಹಾರನ್ಪುರ ಮೂಲದ ರಶೀದಿ ಸೆಮಿನರಿಯೊಂದರಲ್ಲಿ ಧರ್ಮಶಾಸ್ತ್ರದ ಅಧ್ಯಯನ ಮುಗಿಸಿದ ಬಳಿಕ 1993ರಲ್ಲಿ ದಿಲ್ಲಿಗೆ ಬಂದಿದ್ದರು. ಅಲ್ಮಿ ಇಂಕಿಲಾಬ್ ಮತ್ತು ಇಮಾಮತ್ ಎಂಬ ಎರಡು ಪತ್ರಿಕೆಗಳನ್ನು ಅವರು ಆರಂಭಿಸಿದ್ದರಾದರೂ ಕಣ್ಣು ಬಿಡುವ ಮೊದಲೇ ಅವು ನಿಂತುಹೋಗಿದ್ದವು. ಬಳಿಕ 1994ರಲ್ಲಿ ಇಮಾಮ್ಸ್ ಅಸೋಸಿಯೇಷನ್ ಸ್ಥಾಪಿಸಿದ್ದರು.

ಮೌಲಾನಾ ಸುಹೈಬ್ ಕಾಸ್ಮಿ ಅಲಿಯಾಸ್ ‘ದಿ ನ್ಯಾಷನಲಿಸ್ಟ್’:

Photo: Newslaundry.com

ಕಾಸ್ಮಿಯವರ ದಿಲ್ಲಿ ನಿವಾಸದ ಹೊರಗಿನ ನಾಮಫಲಕ ಅವರನ್ನು ಬಿಜೆಪಿಯ ‘ಹಿರಿಯ ನಾಯಕ ’ಎಂದು ಬಣ್ಣಿಸುತ್ತದೆ ಮತ್ತು ಅವರು ಆರೆಸ್ಸೆಸ್ ಮುಸ್ಲಿಂ ರಾಷ್ಟ್ರೀಯ ಮಂಚ್ ನ ರಾಷ್ಟ್ರೀಯ ಸಂಚಾಲಕರಾಗಿದ್ದಾರೆ. ಆದರೆ ಟಿವಿ ವಾಹಿನಿಗಳು ಅವರನ್ನು ಮುಸ್ಲಿಂ ವಿದ್ವಾಂಸ ಮತ್ತು ಅವರು 2005ರಲ್ಲಿ ಸ್ಥಾಪಿಸಿದ್ದ ಜಮಾಅತ್-ಎ-ಉಲೇಮಾ ಹಿಂದ್ ನ ಅಧ್ಯಕ್ಷ ಎಂದು ಮಾತ್ರ ಬಿಂಬಿಸುತ್ತಿವೆ.
 
‘ನಾವು ಬಾಲ ಸ್ವಯಂಸೇವಕರಾಗಿದ್ದೆವು. ನನ್ನ ತಂದೆ ಜನಸಂಘಿಯಾಗಿದ್ದರು. ನನ್ನ ತಂದೆ ಮತ್ತು ನಾನು ಮುಸ್ಲಿಂ ರಾಷ್ಟ್ರೀಯ ಮಂಚ್ನ ಸ್ಥಾಪಕ ಸದಸ್ಯರಾಗಿದ್ದೇವೆ. ಕೇರಳ, ಕಾಶ್ಮೀರ, ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ನಾನು ಬಿಜೆಪಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದೇನೆ ’ ಎಂದು ಕಾಸ್ಮಿ ಹೇಳಿದರು. ತನ್ನ ತಂದೆ ಡಾ.ಆತಿಕ್ ಅಹ್ಮದ್ ಖಾನ್ ಅವರು ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿದ್ದರು ಮತ್ತು ಬಿಜ್ನೋರ್ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು ಎಂದರು.

ದಿಲ್ಲಿಯ ದರಿಯಾಗಂಜ್ನಲ್ಲಿ ಕಚೇರಿಯನ್ನು ಹೊಂದಿರುವ ಜಮಾಅತ್-ಎ-ಉಲೇಮಾ ಹಿಂದ್ ರಾಷ್ಟ್ರವಾದಿ ಮುಸ್ಲಿಮರ ಸಂಘಟನೆಯಾಗಿದೆ ಮತ್ತು ಪ್ರತಿ ಸದಸ್ಯನೂ ಬಿಜೆಪಿ ಮತ್ತು ಆರೆಸ್ಸೆಸ್ ನ ಭಾಗವಾಗಿದ್ದಾನೆ. ಸಂಘಟನೆಯಲ್ಲಿ ಐದು ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ ಎಂದರು.
 
ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಗೆ ಪ್ರಚಾರ ನೀಡುವ ವಿಷಯಗಳನ್ನು ಬೆಂಬಲಿಸುವ ಕಾಸ್ಮಿ,ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವ ಮುಸ್ಲಿಮರು ದಾರಿ ತಪ್ಪಿದಾರೆ ಎಂದು ಭಾವಿಸಿದ್ದಾರೆ. ಲವ್ ಜಿಹಾದ್, ಹಿಜಾಬ್, ಜ್ಞಾನವಾಪಿ ಮಸೀದಿ, ಸಿಎಎ-ಎನ್ಆರ್ಸಿಯಂತಹ ಹಿಂದುತ್ವ ಆಂದೋಲನಕ್ಕೆ ನಿಕಟವಾಗಿರುವ ವಿಷಯಗಳ ಕುರಿತು ಅವರು ಮುಸ್ಲಿಂ ಸಮುದಾಯವನ್ನು ಶಪಿಸುತ್ತಾರೆ. ಥಳಿಸಿ ಕೊಲ್ಲುವಂತಹ ಘಟನೆಗಳು ಕಿರು ಪ್ರಕರಣಗಳು ಎಂದು ಭಾವಿಸುವ ಈ ರಾಷ್ಟ್ರವಾದಿ ಮುಸ್ಲಿಂ, ಇಂತಹ ದೊಡ್ಡ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎನ್ನುತ್ತಾರೆ.

ಕೃಪೆ: newslaundry.com

Writer - ಅನ್ಮೋಲ್ ಪ್ರೀತಂ (Newslaundry.com)

contributor

Editor - ಅನ್ಮೋಲ್ ಪ್ರೀತಂ (Newslaundry.com)

contributor

Similar News