ಎಲ್ಲಾ ಜಿಲ್ಲೆಗಳಲ್ಲಿ ವರ್ಷದೊಳಗೆ ಗಾಂಧಿಭವನ ನಿರ್ಮಾಣಕ್ಕೆ ಕ್ರಮ: ಸಿಎಂ ‌ಬಸವರಾಜ ಬೊಮ್ಮಾಯಿ

Update: 2022-10-02 08:14 GMT

ಬೆಂಗಳೂರು, ಅ. 2: ಕರ್ನಾಟಕ ಸರಕಾರದ ವತಿಯಿಂದ ಈಗಾಗಲೇ 23 ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಿಸಲಾಗಿದ್ದು, ಇನ್ನೂ ಏಳು ಜಿಲ್ಲೆಗಳಲ್ಲಿ ನಿರ್ಮಾಣವಾಗಬೇಕಿದೆ. ಈ ಏಳು ಜಿಲ್ಲೆಗಳಲ್ಲಿ ಒಂದು ವರ್ಷದೊಳಗೆ ಗಾಂಧಿಭವನ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ತಿಳಿಸಿದರು.

ರವಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ನಡೆದ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿ ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ರಾಜ್ಯ ಸರಕಾರದ ಪ್ರತಿಷ್ಠಿತ 2022 ನೇ ದಿನದರ್ಶೀ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಈ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಬೇಕಾದ ನಿವೇಶನ ಮತ್ತು ಅನುದಾನ ಒದಗಿಸಲು ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಖಾದಿ‌ ,ಗ್ರಾಮೀಣ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿ‌ಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು;ಈ ಮೂಲಕ ಮಾರುಕಟ್ಟೆ ಒದಗಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಅವರು ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಬಂದಿರುವುದರಿಂದ ಪ್ರಶಸ್ತಿಗೆ ಮೌಲ್ಯ ಬಂದಿದೆ. ಅವರ ಸೇವೆಯನ್ನು ನಮ್ಮ ಸರಕಾರ ಬಳಸಿಕೊಳ್ಳಲಿದೆ ಎಂದರು.

ಗ್ರಾಮಗಳ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು, ಕರ್ನಾಟಕ ಈ ವಿಷಯದಲ್ಲಿ ಬಹಳ ಮುಂದೆ ಇದೆ. ಹಳ್ಳಿಗಳಲ್ಲಿ ಕೂಡ‌ ಡಿಜಿಟಲ್ ಕ್ರಾಂತಿಯಿಂದ ಬಹಳಷ್ಟು ಅನುಕೂಲಗಳಾಗ್ತಿವೆ. ತಂತ್ರಜ್ಞಾನ ಕ್ರಾಂತಿಯಿಂದ ಹಳ್ಳಿಗಳಲ್ಲಿ ಸರಕಾರದ ಅನೇಕ ಸೇವೆಗಳನ್ನು ಒದಗಿಸುತ್ತಿದ್ದು,ಇನ್ನಷ್ಟು ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರು.

ಜನರ ಸುತ್ತಲು ಅಭಿವೃದ್ಧಿಯಾಗಬೇಕು;ಅಭಿವೃದ್ಧಿ ಸುತ್ತಲೂ ಜನ ಸುತ್ತಬಾರದು ಎನ್ನುವ ದೃಷ್ಟಿಕೋನದಿಂದ ನಮ್ಮ ಸರಕಾರ ಕರ್ತವ್ಯ ನಿರ್ವಹಿಸುತ್ತಿದೆ ಎಂದರು. ಮೋಹನದಾಸ್ ಕರಮಚಂದ ಗಾಂಧಿ ಅವರು‌ ಮಹಾತ್ಮರಾಗುವವರೆಗೆಗಿನ ಪಯಣ ಅತ್ಯಂತ ಅದ್ಭುತವಾದುದು. ಸತ್ಯದ ಮಾರ್ಗದಿಂದ ಇತರರಿಗೆ ದಾರಿದೀಪವಾಗಿ ಮತ್ತು ‌ಎಲ್ಲಕ್ಕಿಂತ ಹೆಚ್ಚಾಗಿ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಿಸೆ ಒದಗಿಸಿದವರು.
ಒಬ್ಬ ವ್ಯಕ್ತಿ ಮನಸ್ಸು ಮಾಡಿದರೇ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಮಹಾತ್ಮ ಹೇಗಾಗಬಹುದು ಎನ್ನುವುದಕ್ಕೆ ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಉದಾಹರಣೆ ಎಂದರು.

ಜೀವನದಲ್ಲಿನ ‌ಎಲ್ಲ ಸಂಕಟ-ಸಮಸ್ಯೆಗಳ ಪರಿಹಾರ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ‌ ಜೀವನ ಚರಿತ್ರೆಯಾಗಿದ್ದು, ಅವರನ್ನು ‌ಜೀವನ ಚರಿತ್ರೆ ಓದಿದರೇ ಎಲ್ಲವೂ ಪರಿಹಾರವಾಗುತ್ತದೆ ಎಂದು ವಿವರಿಸಿದ ಅವರು ಬಹಳ ಉದಾತ್ತವಾದ ಸತ್ಯದ ಶಕ್ತಿಯಾಗಿ ಬದುಕಿದ್ದರು ಎಂದರು.

ಜೀವನದಲ್ಲಿ ‌ಮುಗ್ಧತೆ ಕಾಪಾಡಿಕೊಂಡು‌ ಹೋಗುವುದು ಮತ್ತು ಆತ್ಮ ಸಾಕ್ಷಿಯಾಗಿ ನಡೆದುಕೊಂಡು ಹೋಗುವುದು ಬಹಳ ಕಷ್ಟ; ಅದೆರಡನ್ನು ಅಳವಡಿಸಿಕೊಂಡು‌ ಜೀವನ ಸಾಗಿಸಿದರು ಎಂದರು. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಷ್ಟ ಗುರಿ ನೀಡಿದಂತವರು ಮಹಾತ್ಮರು; ಇಡೀ ಜಗತ್ತಿನಲ್ಲಿ ಆಹಿಂಸೆ ಮೂಲಕ ಸ್ವಾತಂತ್ರ್ಯ ಸಿಕ್ಕಿದ್ದು ಭಾರತದಲ್ಲಿ ‌ಎಂದರು.

ಇಂದಿನ ಕಾಲದಲ್ಲಿಯೂ ಕೂಡ ಗಾಂಧಿ ಅವರು ಪ್ರಸ್ತುತವಾಗಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮತ್ತು ಎಲ್ಲ ರಂಗಗಳಲ್ಲಿಯೂ ಅವರು ಪ್ರಸ್ತುತರಾಗಿದ್ದಾರೆ ಎಂದರು.

ಸತ್ಯಾಗ್ರಹ ಎನ್ನುವುದು ವಿಜ್ಞಾನ; ಅದಕ್ಕೆ ವಿಚಾರಗಳು ತುಂಬಿದ್ದು ಮಹಾತ್ಮಗಾಂಧಿ ಅವರು. ಸಂವಿಧಾನ ಇಂದು ಗಟ್ಟಿಯಾಗಿ ಉಳಿಯಲಿಕ್ಕೆ‌ ಗಾಂಧೀಜಿ ಅವರ ವಿಚಾರಧಾರೆಗಳು ಕೂಡ ಕಾರಣ ಎಂದರು.

ಪ್ರಶಸ್ತಿ ಹಣ ನಿಮ್ಹಾನ್ಸ್ ಗೆ ನೀಡಿಕೆ: ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯಿಂದ ಬಂದ ನಗದನ್ನು ನಿಮ್ಹಾನ್ಸ್ ಗೆ ನೀಡಲಾಗುವುದು ಎಂದು ಪ್ರಶಸ್ತಿ ಪುರಸ್ಕೃತ ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರು ಘೋಷಿಸಿದರು.

ನನ್ನ ನಿವೃತ್ತಿಯಿಂದ ನಂತರ ಬಂದ 1.09 ಕೋಟಿ ಮತ್ತು ನನ್ನ ಎರಡು‌ ಮನೆಗಳು ಮತ್ತು ನಿವೇಶನಗಳ ಹಣ ಸಹ ನಿಮ್ಹಾನ್ಸ್ ಗೆ ಒದಗಿಸಲಾಗುವುದು. ಮಾನಸಿಕ ಆರೋಗ್ಯ ಕ್ಷೇತ್ರ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದ್ದು, ಇದಕ್ಕೆ ವಿಶೇಷ ಒತ್ತು ನೀಡುವ ಕೆಲಸವಾಗಬೇಕು ಎಂದು ಹೇಳಿದ ಅವರು ಮಾನಸಿಕ ಆರೋಗ್ಯ ಸೇವೆಗಳಲ್ಲಿ ಇಡೀ ದೇಶಕ್ಕೆ ಕರ್ನಾಟಕವೇ ಮಾದರಿಯಾಗಿದೆ ಎಂದರು.

ಸುಪ್ರಸಿದ್ಧ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ರಾಜ್ಯ ಸರಕಾರದ ಪ್ರತಿಷ್ಠಿತ 2022 ನೇ ದಿನದರ್ಶೀ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಹಾಗೂ 05ಲಕ್ಷ ರೂ.ಗಳ ನಗದು ನೀಡಿ ಗೌರವಿಸಲಾಯಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ಡಾ.ಸಿ.ಆರ್.ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿತ್ತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧಿಭವನದ‌ ಚಟುವಟಿಕೆಗಳನ್ನು ವಿವರಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಡಾ.ಸಿ.ಆರ್.ಚಂದ್ರಶೇಖರ ಅವರ ಆಯ್ಕೆ ಮಾಡಿದ ಉದ್ದೇಶವನ್ನು ವಿವರಿಸಿದರು.

ಮಾಜಿ‌ ಸಚಿವರು ಆಗಿರುವ ಶಾಸಕ ಎಚ್.ಕೆ.ಪಾಟೀಲ್ ಅವರು ಮಾತನಾಡಿ, ಗ್ರಾಮಸ್ವರಾಜ್ ದಿಂದ ಮಾತ್ರ ರಾಷ್ಟ್ರ ಕಲ್ಯಾಣ ಸಾಧ್ಯ ಎಂದು ಹೇಳಿ ಪ್ರೇರಣೆ ನೀಡಿದವರು ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು. ಗಾಂಧೀಜಿ ಅವರ ಗ್ರಾಮಸ್ವರಾಜ್ ಕನಸು‌ ನನಸು‌ ಮಾಡುವಲ್ಲಿ ನಮ್ಮ ರಾಜ್ಯದಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾಡಿದ್ದೇವೆ. ಇದರ ಸಂಪೂರ್ಣ ಅನುಷ್ಠಾನವಾಗಬೇಕು;ಅಂದಾಗ ಮಾತ್ರ ರಾಜ್ಯದಲ್ಲಿ ಗ್ರಾಮಸ್ವರಾಜ್ ನನಸಾಗಲು ಸಾಧ್ಯ. ಈ ಕುರಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಬೇಕು‌ ಎಂದರು.

ಹಿಂದಿನ ಸರಕಾರದ ಅವಧಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲು ಗಾಂಧಿಭವನ ನಿರ್ಮಾಣ ಮಾಡಬೇಕು ಅಂತ ನಿರ್ಧರಿಸಿ ಅನುಷ್ಠಾನಗೊಳಿಸಲಾಗಿತ್ತು; ಕೆಲ‌ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗಿಲ್ಲ, ಅಂತವುಗಳ ಕಡೆ ತಮ್ಮಿಂದ ನಿರ್ದೇಶನ ಹೋಗಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡಿದರು.

ಗಾಂಧಿ ಚಟುವಟಿಕೆಗಳಲ್ಲಿ ಸದಾ ನಿರಂತರವಾಗಿರುವ ಬೆಂಗಳೂರಿನ ಗಾಂಧಿ ಭವನಕ್ಕೆ‌ ಅಗತ್ಯ ಸಹಕಾರ ನೀಡಬೇಕು ಎಂದರು. ಗಾಂಧಿಭವನ ಪ್ರಕಾಶನದಿಂದ ಹೊರತರಲಾದ 5ಪುಸ್ತಕಗಳನ್ನು ಹಾಗೂ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರ ಸ್ಕೀಲ್ಸ್ ಫಾರ್ ಸ್ಟೂಡೆಂಟ್ಸ್ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಹಲವು ಮಹನೀಯರಿಗೆ ಕರ್ನಾಟಕ ಗಾಂಧಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಪೌರಾಡಳಿತ ಮತ್ತು ಸಣ್ಣಕೈಗಾರಿಕಾ ಸಚಿವರಾದ ಎಂ.ಟಿ.ಬಿ.ನಾಗರಾಜ,ಶಾಸಕರಾದ ರಾಜೀವ್ ಕುಡಚಿ, ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ,‌ ಮಾಜಿ ರಾಜ್ಯಸಭಾ ಸದಸ್ಯರಾದ ಎಚ್.ಹನುಮಂತಪ್ಪ, ‌ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಸೇರಿದಂತೆ ‌ಕರ್ನಾಟಕ‌ ಗಾಂಧಿ‌ಸ್ಮಾರಕ‌ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕರ್ನಾಟಕ‌ ಗಾಂಧಿ‌ಸ್ಮಾರಕ‌ ನಿಧಿಯ ಸದಸ್ಯರು,ಮಹಾತ್ಮ‌ಗಾಂಧಿ ಸೇವಾ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು,ಗಾಂಧಿ‌ ಅನುಯಾಯಿಗಳು,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು,ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತಿತರರು ಇದ್ದರು.

ಮಹಾತ್ಮ ಗಾಂಧಿ ಜಯಂತಿ ಮತ್ತು ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಪ್ರದಾನದ ಅಂಗವಾಗಿ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News