ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಮಹಾನ್ ನಾಯಕರು: ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್

Update: 2022-10-02 08:34 GMT

ಬೆಂಗಳೂರು: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದ ಮಹಾನ್ ನಾಯಕರು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕಡಿಮೆ ಅವಧಿಗೆ ಪ್ರಧಾನಿ ಆಗಿದ್ದರೂ ಅವರ ಕಾರ್ಯವೈಖರಿ, ಅವರಲ್ಲಿದ್ದ ರಾಷ್ಟ್ರಪ್ರೇಮ, ಅವರು ನಮಗೆ ಕೊಟ್ಟ ಸಂದೇಶ ಇಂದಿಗೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.

1857ರಿಂದ ಆರಂಭಗೊಂಡ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕರು ಭಾಗವಹಿಸಿದ್ದರು. ಗಾಂಧೀಜಿಯವರು ಕೊನೆಯ 25-30 ವರ್ಷ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ವೇಗವನ್ನು ಅವರು ಹೆಚ್ಚಿಸಿದ್ದರು ಎಂದು ತಿಳಿಸಿದರು.

ಭಾರತೀಯ ಜನತಾ ಪಾರ್ಟಿ ತನ್ನ ಪಂಚನಿಷ್ಠೆಗಳಲ್ಲಿ ಒಂದಾದ ಗಾಂಧಿ ಪ್ರಣೀತ ಸಮಾಜವಾದವನ್ನು ಅಳವಡಿಸಿಕೊಂಡಿದೆ. ಗಾಂಧೀಜಿಯವರ ಗ್ರಾಮ ಭಾರತ, ಮದ್ಯಪಾನ ನಿಷೇಧ, ಮತಾಂತರಕ್ಕೆ ವಿರುದ್ಧವಾದ ನಿಲುವು ಮತ್ತು ಮಹಿಳಾ ಸ್ವಾತಂತ್ರ್ಯದ ಸಂದೇಶಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಆತ್ಮನಿರ್ಭರ ಭಾರತ ಕಾರ್ಯಕ್ರಮದ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ವಿವರಿಸಿದರು.

ಶಾಸ್ತ್ರೀಜಿ ಅವರು ಅತ್ಯಂತ ಸಾಧಾರಣ ಹಿನ್ನೆಲೆಯಿಂದ ಬಂದು ಪ್ರಧಾನಮಂತ್ರಿ ಆದವರು. ಅವರ ‘ಜೈ ಜವಾನ್ ಜೈ ಕಿಸಾನ್’ ಧ್ಯೇಯವಾಕ್ಯ ಇಂದಿಗೂ ಪ್ರಸ್ತುತ ಎಂದು ನುಡಿದರು. ಅವರ ಸಾವು ಅತ್ಯಂತ ದುಃಖಕರ ಆಗಿದ್ದರೂ, ಅವರ ಜೀವನಶೈಲಿ ಹಾಗೂ ಸಂದೇಶಗಳು ಇವತ್ತಿಗೂ ಅನುಕರಣಾರ್ಹ ಎಂದು ವಿವರಿಸಿದರು.

ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News