ಹಿಂದುತ್ವ ಸಂಘಪರಿವಾರದ ರಾಜಕೀಯ ಯೋಜನೆ: ಎಸ್.ವರಲಕ್ಷ್ಮೀ

Update: 2022-10-02 15:20 GMT

ಕುಂದಾಪುರ, ಅ.2: ನಾವು ಧರ್ಮ ವಿರೋಧಿಗಳಲ್ಲ. ನಮ್ಮ ಹೋರಾಟ ಕೋಮುವಾದದ ವಿರುದ್ಧವಾಗಿದೆ. ಧರ್ಮ ಸಾರ್ವಜನಿಕವಾಗಿ ಪ್ರದರ್ಶನಕ್ಕಲ್ಲ. ಹಿಂದು ಮತ್ತು ಹಿಂದುತ್ವ ಬೇರೆ. ಹಿಂದುತ್ವ ರಾಜಕೀಯ ಯೋಜನೆಯಾಗಿದೆ. ಸಂಘ ಪರಿವಾರದ ಗುರಿ ಹಿಂದೂ ರಾಷ್ಟ್ರ ಅಜೆಂಡಾ ಆಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಆರೋಪಿಸಿದ್ದಾರೆ.

ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ೧೫ನೇ ಸಮ್ಮೇಳನದ ಸ್ವಾಗತ ಸಮಿತಿ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ರಾಜ್ಯ ಸಮ್ಮೇಳನದ ಅಂಗವಾಗಿ ರವಿವಾರ ಕುಂದಾಪುರ ಕಲಾ ಮಂದಿರದ ಸಭಾಂಗಣ ದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಮತ್ತು ಕೋಮು ಸಾಮರಸ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತಿದ್ದರು.

ಉಡುಪಿಯ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿ, ಉಡುಪಿ ಜಿಲ್ಲೆ ರಚನೆಗೊಂಡು ೨೫ ವರ್ಷಗಳು ಕಳೆದರೂ ಜಿಲ್ಲೆಯ ಸರ್ವ ತೋಮುಖ ಅಭಿವೃದ್ಧಿ ನಿರೀಕ್ಷೆಯಷ್ಟು ಬೆಳೆದು ಬಂದಿಲ್ಲ. ಜಿಲ್ಲೆಗೆ ಸರಕಾರಿ ವೈದ್ಯಕೀಯ, ಇಂಜಿನೀಯರಿಂಗ್ ಕಾಲೇಜು, ಪರಿಸರ ಸ್ನೇಹಿ ಘನ ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಭರವಸೆ ಮುಂತಾದ ಯೋಜನೆ ಬೆಳೆದು ಬರುವುದಕ್ಕಾಗಿ ಒತ್ತಾಯಿಸಿ ಜನಪರ ಚಳುವಳಿಯ ಬೀದಿ ಹೋರಾಟ ಇಂದಿನ ಅಗತ್ಯವಾಗಿದೆ ಎಂದರು.

ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ ವಿ.ನರಸಿಂಹ ವಿಚಾರ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಶಂಕರ, ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಕೋಶಾಧಿಕಾರಿ ಎಚ್.ನರಸಿಂಹ ವೇದಿಕೆಯಲ್ಲಿದ್ದರು. ಚಂದ್ರಶೇಖರ ವಿ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News