ಭಾರತೀಯ ಜೈಲುಗಳಲ್ಲಿಯ ಶೇ.38ಕ್ಕೂ ಅಧಿಕ ಕೈದಿಗಳು OBCಗಳು, ಕಳೆದೊಂದು ದಶಕದಲ್ಲಿ ಶೇ.10ರಷ್ಟು ಏರಿಕೆ

Update: 2022-10-03 06:04 GMT

 ಹೊಸದಿಲ್ಲಿ,ಅ.2: ಭಾರತೀಯ ಜೈಲುಗಳಲ್ಲಿಯ ಶೇ.38ಕ್ಕೂ ಅಧಿಕ ಕೈದಿಗಳು ಒಬಿಸಿ ಸಮುದಾಶಯಗಳಿಗೆ ಸೇರಿದವರಾಗಿದ್ದು,ಕಳೆದೊಂದು ದಶಕದಲ್ಲಿ ಅವರ ಸಂಖ್ಯೆ ಶೇ.10ರಷ್ಟು ಏರಿಕೆಯಾಗಿದೆ ಎನ್ನುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ ಅಂಕಿಅಂಶಗಳ ವಿಶ್ಲೇಷಣೆಯು ತೋರಿಸಿದೆ. ಎನ್‌ಸಿಆರ್‌ಬಿ ಅಂಕಿಅಂಶಗಳಂತೆ ಭಾರತದ ಕಿಕ್ಕಿರಿದು ತುಂಬಿರುವ ಜೈಲುಗಳಲ್ಲಿ 2021ರ ಅಂತ್ಯದ ವೇಳೆಗೆ 5,54,034 ಕೈದಿಗಳಿದ್ದು,ಈ ಪೈಕಿ ಶೇ.77.1ರಷ್ಟು ಜನರು ವಿಚಾರಣಾಧೀನ ಕೈದಿಗಳಾಗಿದ್ದರು ಮತ್ತು ಶೇ.22.2ರಷ್ಟು ಕೈದಿಗಳು ನ್ಯಾಯಾಲಯಗಳಿಂದ ದೋಷಿಗಳೆಂದು ಘೋಷಿಸಲ್ಪಟ್ಟವರಾಗಿದ್ದರು.

ಅತ್ಯಂತ ಹೆಚ್ಚಿನ ವಿಚಾರಣಾಧೀನ ಕೈದಿಗಳನ್ನು ಹೊಂದಿರುವ ವಿಶ್ವದ ದೇಶಗಳಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ ಎನ್ನುವುದನ್ನು ವರ್ಲ್ಡ್ ಪ್ರಿಸನ್ ಬ್ರೀಫ್ ಸಂಗ್ರಹಿಸಿರುವ ದತ್ತಾಂಶಗಳು ತೋರಿಸಿವೆ. ಲಿಚೆನ್‌ಸ್ಟೈನ್,ಸ್ಯಾನ್ ಮಾರಿಯೊ,ಹೈಟಿ,ಗಬನ್ ಮತ್ತು ಬಾಂಗ್ಲಾದೇಶಗಳಲ್ಲಿಯ ಸ್ಥಿತಿ ಭಾರತಕ್ಕಿಂತಲೂ ಕೆಟ್ಟದಾಗಿದೆ.

 ಭಾರತದ ನ್ಯಾಯ ಪ್ರಕ್ರಿಯೆಗಳು ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಸುದೀರ್ಘ ವಿಳಂಬಕ್ಕೆ ಕುಖ್ಯಾತವಾಗಿದ್ದು,ಕೋವಿಡ್ ಸಾಂಕ್ರಾಮಿಕವು ನ್ಯಾಯ ಪ್ರಕ್ರಿಯೆಗಳನ್ನು ಇನ್ನಷ್ಟು ನಿಧಾನಗೊಳಿಸಿದೆ. ಕೋವಿಡ್ ಲಾಕ್‌ಡೌನ್‌ಗಳು ಮತ್ತು ಸುರಕ್ಷಿತ ಅಂತರದಂತಹ ನಿಯಮಗಳು ಭಾರತೀಯ ನ್ಯಾಯಾಲಯಗಳ ಕಾರ್ಯ ನಿರ್ವಹಣೆಗೆ ತೀವ್ರ ಅಡ್ಡಿಯನ್ನುಂಟು ಮಾಡಿದ್ದವು.

ವಿಚಾರಣಾಧೀನ ನ್ಯಾಯಾಲಯಗಳಲ್ಲಿ ನ್ಯಾಯ ವಿತರಣೆಯು ಆಮೆಗತಿಯಲ್ಲಿ ಸಾಗುವುದರೊಂದಿಗೆ,ತಮ್ಮ ವಿಚಾರಣೆಗಾಗಿ ಕಾಯುತ್ತಿರುವವರು ವರ್ಷಗಳ ಕಾಲ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. 2011ರಲ್ಲಿ ವಿಚಾರಣಾಧೀನ ಕೈದಿಗಳ ಪೈಕಿ ಶೇ.40.1ರಷ್ಟು ಜನರು ಮೂರು ತಿಂಗಳಿಗೂ ಕಡಿಮೆ ಅವಧಿಯಿಂದ ಜೈಲುಗಳಲ್ಲಿದ್ದರು ಮತ್ತು ಶೇ.22ರಷ್ಟು ಕೈದಿಗಳು ಒಂದು ವರ್ಷ ಅಥವಾ ಹೆಚ್ಚಿನ ಅವಧಿಯಿಂದ ಜೈಲುವಾಸ ಅನುಭವಿಸುತ್ತಿದ್ದರು. 2021ರ ವೇಳೆಗೆ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿ ಕೊಳೆಯುತ್ತಿರುವವರ ಪ್ರಮಾಣ ಶೇ.29.1ರಷ್ಟಿತ್ತು.

2021ರ ಅಂತ್ಯದ ವೇಳೆಗೆ ಜೈಲುಗಳಲ್ಲಿದ್ದವರಲ್ಲಿ ಹೆಚ್ಚಿನ ಪಾಲು (ಶೇ.95.8) ಪುರುಷರದಾಗಿತ್ತು. ಒಟ್ಟು ಕೈದಿಗಳ ಪೈಕಿ ಶೇ.25.2 ಜನರು ವಿದ್ಯಾವಂತರಾಗಿದ್ದು,ಶೇ,40.2ರಷ್ಟು ಕೈದಿಗಳು 10ನೇ ತರಗತಿಗೇ ಶಾಲೆಗಳನ್ನು ತೊರೆದಿದ್ದರು.

ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಜಾತಿ ಸಮುದಾಯಗಳಿಗೆ ಸೇರಿದ ಕೈದಿಗಳು ಅತಿಯಾದ ಸಂಖ್ಯೆಯಲ್ಲಿದ್ದಾರೆ. ನ್ಯಾಯಾಲಯಗಳಿಂದ ಶಿಕ್ಷೆಗೆ ಗುರಿಯಾದವರು ಮತ್ತು ವಿಚಾರಣಾಧೀನ ಹಿಂದುಗಳ ಸಂಖ್ಯೆ ದೇಶದ ಜನಸಂಖ್ಯೆಯಲ್ಲಿ ಅವರ ಶೇಕಡಾವಾರು ಪಾಲಿಗಿಂತ ಕಡಿಮೆ ಪ್ರಮಾಣದಲ್ಲಿದ್ದರೆ,ಸಿಕ್ಖರು ಮತ್ತು ಮುಸ್ಲಿಮರು ಜನಸಂಖ್ಯೆಯಲ್ಲಿ ತಮ್ಮ ಶೇಕಡಾವಾರು ಪಾಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು.

 ಶಿಕ್ಷೆಗೆ ಒಳಗಾದವರು ಮತ್ತು ವಿಚಾರಣಾಧೀನ ಕೈದಿಗಳ ಧಾರ್ಮಿಕ ಸಂಯೋಜನೆಯಲ್ಲಿ ಅಂತರವಿದೆ. ವಿಚಾರಣಾಧೀನ ಕೈದಿಗಳ ಪೈಕಿ ಮುಸ್ಲಿಮರು ಅತ್ಯಂತ ದೊಡ್ಡ ಗುಂಪಾಗಿದ್ದರೆ ಇತರ ಸಮುದಾಯಗಳಲ್ಲಿ ಈ ಪ್ರವೃತ್ತಿ ವಿರುದ್ಧವಾಗಿದೆ.

ಜಾಗತಿಕ ಕ್ರಿಮಿನಲ್ ವಾಚ್‌ಡಾಗ್ ಫೇರ್ ಟ್ರಯಲ್ಸ್ ಹೇಳುವಂತೆ ವಿಶ್ವಾದ್ಯಂತ ಅಂಚಿನಲ್ಲಿರುವ ಸಮುದಾಯಗಳಿಗೆ ಸೇರಿದವರು ಹೆಚ್ಚಾಗಿ ಅಪರಾಧ ನಡವಳಿಕೆಯ ಶಂಕಿತರಾಗಿರುತ್ತಾರೆ ಮತ್ತು ವಿಚಾರಣೆಗಾಗಿ ಕಾಯುತ್ತಿರುವಾಗ ಜೈಲಿನಲ್ಲಿ ಬಂಧನದಲ್ಲಿರುವ ಹಾಗೂ ದೋಷ ನಿರ್ಣಯಗೊಂಡರೆ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಭಾರತದಲ್ಲಿಯೂ ಅಧ್ಯಯನಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಪಕ್ಷಪಾತವನ್ನು ಬೆಟ್ಟು ಮಾಡಿವೆ. ಮಹಾರಾಷ್ಟ್ರದಲ್ಲಿ ನಡೆಸಲಾದ ಅಧ್ಯಯನವೊಂದು ರಾಜ್ಯದ ಜೈಲುಗಳಲ್ಲಿ ಮುಸ್ಲಿಮರು ತಮ್ಮ ಸಮುದಾಯವನ್ನು ಅತಿಯಾಗಿ ಪ್ರತಿನಿಧಿಸುತ್ತಿದ್ದಾರೆ ಮತ್ತು ಸಮುದಾಯದವರು ಎದುರಿಸುತ್ತಿರುವ ತಾರತಮ್ಯದೊಂದಿಗೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ನಡುವೆ ನಂಟು ಇದೆ ಎಂದು ತೋರಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ಕೈದಿಗಳ ಧಾರ್ಮಿಕ ಸಂಯೋಜನೆಯಲ್ಲಿ ಸಣ್ಣ, ಆದರೆ ಗಮನಾರ್ಹ ಬದಲಾವಣೆಯಾಗಿದೆ.  ಶಿಕ್ಷೆಗೊಳಗಾದವರು ಮತ್ತು ವಿಚಾರಣಾಧೀನ ಕೈದಿಗಳಲ್ಲಿ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದವರ ಒಟ್ಟು ಸಂಖ್ಯೆಯಲ್ಲಿ ಅಲ್ಪ ಇಳಿಕೆಯಾಗಿದ್ದರೆ, 2011ರಿಂದ ಹಿಂದುಗಳ ಪಾಲು ಹೆಚ್ಚುತ್ತಿದೆ. 2011ರಲ್ಲಿ ವಿಚಾರಣಾಧೀನ ಕೈದಿಗಳಲ್ಲಿ ಹಿಂದುಗಳ ಪಾಲು ಶೇ.70.5 ಮತ್ತು ಮಸ್ಲಿಮರ ಪಾಲು ಶೇ.21.2ರಷ್ಟು ಹಾಗೂ ಶಿಕ್ಷೆಗೊಳಗಾದವರಲ್ಲಿ ಹಿಂದುಗಳ ಪಾಲು ಶೇ.71.7 ಮತ್ತು ಮುಸ್ಲಿಮರ ಪಾಲು ಶೇ.17.8ರಷ್ಟಿತ್ತು.

ಧಾರ್ಮಿಕ ಅಲ್ಪಸಂಖ್ಯಾತರ ಜೊತೆಗೆ ಶೋಷಿತ ಜಾತಿಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದವರು ಜೈಲು ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದಾರೆ. 2021ರಲ್ಲಿ ವಿಚಾರಣಾಧೀನ ಕೈದಿಗಳಲ್ಲಿ ಶೇ.22.8ರಷ್ಟು ಮತ್ತು ಶಿಕ್ಷೆಗೊಳಗಾದವರಲ್ಲಿ ಶೇ.21.7ರಷ್ಟು ಜನರು ಎಸ್‌ಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಮತ್ತು 2011ರ ಜನಗಣತಿಯಂತೆ ದೇಶದ ಜನಸಂಖ್ಯೆಯಲ್ಲಿ ಅವರ ಪಾಲು ಶೇ.16.6ರಷ್ಟಿತ್ತು. ಇದೇ ವೇಳೆ ಬುಡಕಟ್ಟು ಸಮುದಾಯಗಳು ಜನಸಂಖ್ಯೆಯಲ್ಲಿ ಶೇ.8.6ರಷ್ಟು ಪಾಲು ಹೊಂದಿದ್ದರೆ,ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೊಳಗಾದವರಲ್ಲಿ ಅವರ ಪಾಲು ಅನುಕ್ರಮವಾಗಿ ಶೇ.10.7 ಮತ್ತು ಶೇ.14.1ರಷ್ಟಿತ್ತು.

ಕಳೆದೊಂದು ದಶಕದಲ್ಲಿ ಭಾರತೀಯ ಜೈಲುಗಳಲ್ಲಿ ಎಸ್‌ಸಿ/ಎಸ್‌ಟಿ ಕೈದಿಗಳ ಸಂಖ್ಯೆ ಹೆಚ್ಚು ಕಡಿಮೆ ಸ್ಥಿರವಾಗಿದ್ದರೆ,ಒಬಿಸಿ ಸಮುದಾಯಗಳಿಗೆ ಸೇರಿದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2011ರಲ್ಲಿ ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೊಳಗಾದವರಲ್ಲಿ ಒಬಿಸಿಗಳ ಸಂಖ್ಯೆ ಅನುಕ್ರಮವಾಗಿ ಶೇ.29.5 ಮತ್ತು ಶೇ.28.7ರಷ್ಟಿದ್ದರೆ,2021ರ ಅಂತ್ಯದ ವೇಳೆಗೆ ಇದು ಶೇ.38.3ಕ್ಕೆ ಮತ್ತು ಶೇ.37.3ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಇತರ ಗುಂಪುಗಳಿಗೆ ಸೇರಿದವರ ಸಂಖ್ಯೆ ಕಡಿಮೆಯಾಗಿದೆ. ಕಳೆದೊಂದು ಅವಧಿಯಲ್ಲಿ ಹಲವಾರು ರಾಜ್ಯಗಳಲ್ಲಿ ಜೈಲುಗಳಲ್ಲಿರುವ ಕೈದಿಗಳ ಸಂಖ್ಯೆಯಲ್ಲಿ ಒಬಿಸಿ ಸಮುದಾಯಗಳಿಗೆ ಸೇರಿರುವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬೆಟ್ಟು ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News