RSS ಬೆಂಬಲಿತ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಒಗ್ಗೂಡಲು ಸಿಪಿಐ ಕರೆ

Update: 2022-10-03 13:57 GMT

ಬೆಂಗಳೂರು, ಅ. 3: ‘ಆರೆಸ್ಸೆಸ್ ಮತ್ತು ಬಿಜೆಪಿ ಒಂದಾಗಿ ಹುಸಿ ರಾಷ್ಟ್ರೀಯ ಪ್ರೇಮವನ್ನು ಮುನ್ನೆಲೆಗೆ ತಂದು, ದೇಶದಲ್ಲಿ ಅಸಹನೆ, ಹಿಂಸೆ, ಗಲಭೆಗಳನ್ನು ಸೃಷ್ಟಿ ಮಾಡಿವೆ. ಆದುದರಿಂದ ಆರೆಸ್ಸೆಸ್ ಬೆಂಬಲಿತ ಸರಕಾರವನ್ನು ಅಧಿಕಾರದಿಂದ ಇಳಿಸಲು ಪ್ರಜಾಸತ್ಮಾತ್ಮಕ, ಎಡ ಮತ್ತು ಸ್ಥಳೀಯ ಪಕ್ಷಗಳು ಒಗ್ಗೂಡಿ ಕಾರ್ಯತಂತ್ರವನ್ನು ರೂಪಿಸಬೇಕು' ಎಂದು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆನೀಡಿದ್ದಾರೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದ ನಂತರ ರೂಪಿಸಲಾದ ಆರ್ಥಿಕ ನೀತಿಗಳಿಂದಾಗಿ ದೇಶದ ಬಡಜನರು ಸಂಕಷ್ಟದಲ್ಲಿ ಬದುಕುವಂತೆ ಮಾಡಿತು. ಅದಾನಿ, ಅಂಬಾನಿಯಂತಹ ಉದ್ಯಮಿಗಳಿಗೆ ಪರೋಕ್ಷವಾಗಿ, ಪ್ರತ್ಯಕ್ಷವಾಗಿ ನೆರವು ನೀಡಿ, ರೈತರು, ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗವನ್ನು ಅತಂತ್ರಕ್ಕೆ ಸಿಲುಕಿಸಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

‘ಕಾರ್ಮಿಕರ ಕನಿಷ್ಠ ಕೂಲಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ಕನಿಷ್ಠ 31,500 ರೂ.ಗೆ ನಿಗದಿಪಡಿಸಬೇಕು. ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣಗೊಳಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಶಾಸನಗಳನ್ನು ಹಿಂಪಡೆಯಬೇಕು. ಗುಜರಾತ್‍ನಲ್ಲಿ ಬಿಲ್ಕಿಸ್ ಬಾನು ಮೇಲಿನ ಸಾಮೂಹಿಕ ಅತ್ಯಾಚಾರಿಗಳಿಗೆ ಕಾನೂನುಬಾಹಿರವಾಗಿ ಕ್ಷಮಾದಾನ ನೀಡಿ ಅವಧಿ ಪೂರ್ವ ಜೈಲಿನಿಂದ ಬಿಡುಗಡೆಗೊಳಿಸಿರುವ ಸರಕಾರ, ಕೂಡಲೇ ಪಾತಕಿಗಳಿಗೆ ಜೈಲು ಶಿಕ್ಷೆ ವಿಧಿಸಬೇಕು' ಎಂದು ಅವರು ಆಗ್ರಹಿಸಿದರು.ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಿಜಯ ಭಾಸ್ಕರ್ ಡಿ.ಎ, ಬಿ.ಅಮ್ಜದ್, ಶಿವರಾಜ್ ಬಿರಾದಾರ್, ಸತ್ಯಾನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News