ಉಡುಪಿ: ಬೀಚ್ ಸ್ವಚ್ಛತಾ ಶ್ರಮದಾನ

Update: 2022-10-03 15:02 GMT

ಉಡುಪಿ, ಅ.3: ಸಾರ್ವಜನಿಕರು ಮತ್ತು ಪ್ರವಾಸಿಗರು ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯುವುದರಿಂದ ಅದು ಅಂತಿಮವಾಗಿ ಸಮುದ್ರ ಸೇರಿ ವಿವಿಧ ಅನಾಹುತಗಳಿಗೆ ಕಾರಣವಾಗುತ್ತದೆ.ಆದ್ದರಿಂದ ತಾವು ಉತ್ಪಾದನೆ ಮಾಡುವ ತ್ಯಾಜ್ಯವನ್ನು ಮನೆ ಹಂತದಲ್ಲಿಯೇ ವಿಂಗಡಿಸಿ ಗ್ರಾಮ ಪಂಚಾಯತ್ ಸ್ವಚ್ಛವಾಹಿನಿಗೆ ನೀಡುವಂತೆ ಉಡುಪಿ ಜಿಪಂನ  ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರಸನ್ನ ಹೆಚ್ ಹೇಳಿದ್ದಾರೆ. 

ರವಿವಾರ ಸ್ವಚ್ಛತಾ ಹೀ ಸೇವಾ ಆಂದೋಲನದಡಿ ಕೋಟೆ ಗ್ರಾಪಂ ಬಳಿಯ ಮಟ್ಟು ಬೀಚ್‌ನಲ್ಲಿ ನಡೆದ ಮಟ್ಟು ಬೀಚ್ ಸ್ವಚ್ಛತಾ ನಡಿಗೆ ಕಾರ್ಯಕ್ರಮದಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಶ್ರೀನಿವಾಸ್, ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಬಾಬು, ವಿವಿಧ ಇಲಾಖೆಗಳ ಜಿಲ್ಲಾ ಹಂತದ ಅಧಿಕಾರಿಗಳು, ಕೋಟೆ ಮತ್ತು ಉದ್ಯಾವರ ಗ್ರಾಪಂಗಳ ಜನಪ್ರತಿನಿಧಿಗಳು, ಸಾರ್ವಜನಿಕರು ಬೀಚ್ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಸ್ವಚ್ಛತಾ ಹೀ ಸೇವಾ ಆಂದೋಲನ ಕುರಿತು ಕಲಾವಿದರಾದ ರಮೇಶ್, ರಾಘವೇಂದ್ರ ಹಾಗೂ ಸುದರ್ಶನ್ ಮರಳುಶಿಲ್ಪ ರಚಿಸಿದರು. ಜಿಲ್ಲೆಯಾದ್ಯಂತ 19 ಗ್ರಾಪಂಗಳ ವ್ಯಾಪ್ತಿಯಲ್ಲಿ ಆಯೋಜಿಸಲಾದ ಬೀಚ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಸುಮಾರು 46.1 ಕಿ.ಮೀ.ವರೆಗೆ ಬೀಚ್ ಸ್ವಚ್ಛತೆ ಮಾಡಲಾಯಿತು. ಜನಪ್ರತಿನಿಧಿಗಳು, ಸರಕಾರಿ ನೌಕರರು, ಸಂಜೀವಿನಿ ಸಂಘಗಳ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಬೀಚ್ ಸ್ವಚ್ಛತೆ ಮೂಲಕ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ಥಳೀಯ ಸ್ವಚ್ಛ ಸಂಕೀರ್ಣಗಳಿಗೆ ಸಾಗಿಸಿ ನಿರ್ವಹಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News