ಗಾಂಧಿ ತತ್ವದಿಂದ ಬದುಕು ಮರುನಿರ್ಮಾಣ ಮಾಡಲು ಸಾಧ್ಯ: ಚೊಕ್ಕಾಡಿ

Update: 2022-10-03 15:23 GMT

ಉಡುಪಿ, ಅ.3: ಸೌಹಾರ್ದತೆ ಬೆಳೆಯುವುದು ಅರಿವಿನಲ್ಲಿ. ಆದುದರಿಂದ ಪರಸ್ಪರ ಒಗ್ಗಟ್ಟಿನೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಹೀಗೆ ಗಾಂಧಿ ತತ್ವದ ಮೂಲಕ ಬದುಕು ಮರು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಲೇಖಕ, ಚಿಂತಕ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.

ಉಡುಪಿ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಮತ್ತು ಗಾಂಧೀ ವಿಚಾರ ವೇದಿಕೆ ಉಡುಪಿ ಘಟಕದ ವತಿಯಿಂದ ಸೋಮವಾರ ಜಿಲ್ಲಾ ಗ್ರಂಥಾಲಯ ಸಭಾಭವನದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಆಯೋಜಿಸಲಾದ ಶಾಂತಿ ನಡೆ ಹಾಗೂ ವಿಚಾರಧಾರೆ ಕಾರ್ಯಕ್ರಮದಲ್ಲಿ ಅವರು ಪ್ರಸಕ್ತ ಸಮಾಜದದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಅವರು ಮಾತನಾಡುತಿದ್ದರು.

ಜನಾಂಗ ಧ್ವೇಷ ಎಂಬುದು ಜಗತ್ತಿನ ಎಲ್ಲ ಕಡೆಗಳಲ್ಲಿಯೂ ಇದೆ. ಜನಾಂಗೀಯ ಕಲಹದಿಂದ ಹಲವು ನಾಗರೀಕತೆಯೇ ಸರ್ವನಾಶವಾಗಿರುವುದನ್ನು ನಾವು ಇತಿಹಾಸದಲ್ಲಿ ನೋಡಬಹುದಾಗಿದೆ. ಆದುದರಿಂದ ಭಾರತದಲ್ಲಿ ನಾಗರಿಕತೆ ಉಳಿಯಬೇಕಾದರೆ ಜನಾಂಗೀಯ ಕಲಹ ನಡೆಯದಂತೆ ನೋಡಿ ಕೊಳ್ಳಬೇಕಾಗಿದೆ ಎಂದರು.

ಮನುಷ್ಯರ ಜೊತೆ ಒಡನಾಟ ಇಟ್ಟುಕೊಂಡಿರೆ ಯಾವುದೇ ಸಮಸ್ಯೆ ಆಗುವು ದಿಲ್ಲ. ಮನುಷ್ಯ ಸಂಬಂಧಗಳಿಂದ ಸಹಜವಾಗಿಯೇ ಕೋಮು ಸಾಮರಸ್ಯದ ಸಂದೇಶವನ್ನು ನಮ್ಮಲ್ಲಿ ನಿರ್ಮಾಣ ಮಾಡಬಹುದಾಗಿದೆ. ಅದಕ್ಕಾಗಿ ನಾವು ಮುಖ್ಯವಾಗಿ ಪರಸ್ಪರ ಮಾತನಾಡಲು ಆರಂಭಿಸಬೇಕು. ಇಲ್ಲದ ಶತ್ರುಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಬದಲು ನಾವು ಮಿತ್ರರನ್ನು ಹುಟ್ಟು ಹಾಕಲು ಆರಂಭಿಸಿದರೆ ಶುತ್ರಗಳ ಸಂಖ್ಯೆ ಕಡಿಮೆ ಆಗುತ್ತದೆ. ರಚನಾತ್ಮಕ ದೃಷ್ಠಿಕೋನವನ್ನು ಸಮಾಜದಲ್ಲಿ ಮತ್ತು ನಮ್ಮ ಜೀವನ ವ್ಯವಸ್ಥೆ ಕಂಡುಕೊಳ್ಳುವುದರಿಂದ ಗಾಂಧೀಜಿ ಯವರೇ ಇಂದಿನ ಬಹಳ ಮುಖ್ಯವಾದ ಪ್ರಸ್ತುತತೆ ಎಂದು ಅವರು ತಿಳಿಸಿದರು.  

ಶಾಂತಿ ನಡೆಗೆ ಚಾಲನೆ: ಉಡುಪಿ ಕಾರ್ಪೊರೇಶನ್ ಬ್ಯಾಂಕ್ ಮ್ಯೂಸಿಯಂ (ಹಾಜಿ ಅಬ್ದುಲ್ಲಾರವರ ನಿವಾಸ) ನಲ್ಲಿರುವ ಹಾಜಿ ಅಬ್ದುಲ್ಲಾರ ಪ್ರತಿಮೆಗೆ ಟ್ರಸ್ಟ್‌ನ ವಿಶ್ವಸ್ಥ ಸಿರಾಜ್ ಅಹ್ಮದ್ ಮಾಲಾರ್ಪಣೆ ಮಾಡುವ ಮೂಲಕ ಶಾಂತಿ ನಡಿಗೆಗೆ ಚಾಲನೆ ನೀಡಿದರು.

ಯೂನಿಯನ್ ಬ್ಯಾಂಕಿನ ಡಿಜಿಎಂ ಡಾ.ಎಚ್.ಟಿ.ವಾಸಪ್ಪ, ಟ್ರಸ್ಟ್‌ನ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ, ಹಾಜಿ ಅಬ್ದುಲ್ಲಾರ ಬಗ್ಗೆ ಪರಿಚಯ ಮಾಡಿದರು.

ಹಾಜಿ ಅಬ್ದುಲ್ಲಾರ ಮನೆಯಿಂದ ಹೊರಟ ನಡಿಗೆ, ಕೆ.ಎಂ.ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಗ್ರಂಥಾಲಯದಲ್ಲಿ ಸಮಾಪ್ತಿಗೊಂಡಿತು. ಹಿರಿಯ ಗಾಂಧಿವಾದಿ ರಾಜಗೋಪಾಲ್, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಿರಿಯ ಚಿಂತಕ ಪ್ರೊ.ಫಣಿರಾಜ್, ಪ್ರೊ.ಹಯವದನ ಉಪಾಧ್ಯಾಯ, ಅಮೃತ್ ಶೆಣೈ, ಹುಸೇನ್ ಕೋಡಿಬೆಂಗ್ರೆ, ಬಾಲಕೃಷ್ಣ ಶೆಟ್ಟಿ, ಸೌಜನ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News