ಪರಿಷತ್ತಿನ ಸದಸ್ಯರಿಗೆ ತಲಾ 50 ಕೋಟಿ ರೂ. ಅನುದಾನ ನೀಡಿ: ಎಸ್.ಎಲ್. ಭೋಜೇಗೌಡ
Update: 2022-10-03 21:12 IST
ಬೆಂಗಳೂರು, ಅ.3: ‘ವಿಧಾನ ಪರಿಷತ್ ಎಲ್ಲ ಸದಸ್ಯರಿಗೂ ತಲಾ 50 ಕೋಟಿ ರೂಪಾಯಿ ಅನುದಾನ ನೀಡಬೇಕು' ಎಂದು ವಿಧಾನ ಪರಿಷತ್ತಿನ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಒತ್ತಾಯಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಮನಿರ್ದೇಶಿತ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‍ಗೆ ಕೋರಿಕೆಯ ಮೇರೆಗೆ 50 ಕೋಟಿ ರೂ.ಅನುದಾನ ನೀಡಿದಂತೆ ಎಲ್ಲ ವಿಧಾನ ಪರಿಷತ್ ಸದಸ್ಯರಿಗೂ 50 ಕೋಟಿ ರೂ.ಅನುದಾನ ನೀಡಬೇಕು' ಎಂದು ಸರಕಾರಕ್ಕೆ ಆಗ್ರಹಿಸಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿರುವುದು ಸ್ವಾಗತಾರ್ಹ.ಅಲ್ಲಿನ ಪರಿಷತ್ ಸದಸ್ಯರ ಕೋರಿಕೆಯನ್ನು ಮನ್ನಿಸಿ ಅನುದಾನ ಬಿಡುಗಡೆ ಮಾಡಿರುವುದು ಸಂತಸದ ಸಂಗತಿ. ಆದರೆ, ಯೋಗೇಶ್ವರ್‍ಗೆ ನೀಡಿದ ಮಾದರಿಯಲ್ಲಿ ಕರ್ನಾಟಕದ ಎಲ್ಲ ವಿಧಾನ ಪರಿಷತ್ತಿನ ಶಾಸಕರ ಕ್ಷೇತ್ರಕ್ಕೂ 50 ಕೋಟಿ ರೂ. ಗಳ ಅನುದಾನ ನೀಡಬೇಕೆಂದು ಒತ್ತಾಯ ಮಾಡಿದರು.