'ಭಾರತ್ ಜೋಡೋ ಯಾತ್ರೆ' ಸೂತ್ರ ಹರಿದ ಗಾಳಿಪಟದಂತ ಒಂದು ವ್ಯರ್ಥ ಹಾರಾಟ: ಸಚಿವ ಡಾ.ಸುಧಾಕರ್ ಟೀಕೆ
ಬೆಂಗಳೂರು, ಅ.5: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ(Bharat Jodo Yatra) ಸೂತ್ರ ಹರಿದ ಗಾಳಿಪಟದಂತ ಒಂದು ವ್ಯರ್ಥ ಹಾರಾಟ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದ್ದಾರೆ.
ಈ ಬಗ್ಗೆ BharatTodoYatra ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಸಚಿವರು, ಗೊತ್ತು- ಗುರಿ ಎರಡೂ ಇಲ್ಲದ ಈ ನಡಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ವನ್ನು ನಿಂದಿಸುವ ಏಕಮಾತ್ರ ಉದ್ದೇಶ ಹೊಂದಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಈ ದೇಶವನ್ನು ಅರ್ಧ ಶತಮಾನಗಳ ಕಾಲ ಆಳಿದೆ. ಈ ಅವಧಿಯಲ್ಲಿ ರಾಹುಲ್ ಗಾಂಧಿಯವರ ಪೂರ್ವಜರು ಎಲ್ಲೆಲ್ಲಿ ದೇಶವನ್ನು ಒಡೆದರೋ ಅದೆಲ್ಲವನ್ನೂ ಜತನದಿಂದ ಕಟ್ಟುವ ಕಾರ್ಯವನ್ನು ಆರೆಸ್ಸೆಸ್ ಮಾಡಿದೆ. ಈಗ ರಾಹುಲ್ ಗಾಂಧಿ ಕೂಡಿಸಿದ್ದನ್ನು ಕಳೆಯಲು ಹೊರಟಿದ್ದಾರೆ ಎಂಬುದೇ ಹೆಚ್ಚು ಸಮರ್ಪಕ ವ್ಯಾಖ್ಯಾನವಾದೀತು ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿಯವರ ಪಾದಯಾತ್ರೆಯ ಸದುದ್ದೇಶವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಇದೊಂದು ಶುದ್ಧ ರಾಜಕೀಯ ಅಜೆಂಡಾದ ವಿಭಜಕ ಮನಸುಗಳ ವಿಜೃಂಭಣೆಯ ನಡಿಗೆ ಎಂದು ಟೀಕಿಸಿದ್ದಾರೆ.
ದೇಶ ವಿಭಜನೆ, ಕಾಶ್ಮೀರ ವಿಭಜನೆ, ತುರ್ತು ಪರಿಸ್ಥಿತಿ ಹೇರಿಕೆ, ಬೋಫೋರ್ಸ್ ಹಗರಣ, 2ಜಿ ಹಗರಣ ಇದೆಲ್ಲವೂ ಕಾಂಗ್ರೆಸ್ ನಡೆಸಿದ ವಿಭಜಕ ಆಡಳಿತದ ಫಲಶೃತಿ. ಇದಲ್ಲದರ ಸಾಕ್ಷಿ ಪ್ರಜ್ಞೆಯೇ ರಾಹುಲ್ ಗಾಂಧಿ! ಇನ್ನೇನು ಉಳಿಸಿದ್ದೀರಿ ಜೋಡಿಸುವುದಕ್ಕೆ? ನಿಮ್ಮ ಯಾತ್ರೆಯ ಕಾಲದಲ್ಲಿ ಒಮ್ಮೆಯಾದರೂ ಆತ್ಮವಿಮರ್ಶೆ ಮಾಡಿಕೊಂಡು ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಡಾ.ಸುಧಾಕರ್ ಒತ್ತಾಯಿಸಿದ್ದಾರೆ.
ಕಾಶ್ಮೀರದಲ್ಲಿ ಹಿಂದುಗಳ ಮಾರಣ ಹೋಮ ನಡೆದಾಗ 'ಭಾರತ್ ಜೋಡೋ ಯಾತ್ರೆ' ನೆನಪಾಗಲಿಲ್ಲ, ಮುಂಬಯಿ ಮೇಲೆ ಉಗ್ರರ ದಾಳಿ, ಬೋಧ ಗಯಾದಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಸಹಭಾಳ್ವೆಯ ನೆನಪಾಗಲಿಲ್ಲ. ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ಸರಣಿ ನಡೆದಾಗ ಶಾಂತಿ ಮಂತ್ರದ ಸ್ಮರಣೆ ಬರಲಿಲ್ಲ. ಈಗ ಮರಳಿ ಅಧಿಕಾರ ಗಳಿಸುವುದಕ್ಕಾಗಿ ಇಷ್ಟೊಂದು ನಾಟಕವೇ? ಎಂದು ಪ್ರಶ್ನಿಸಿದ್ದಾರೆ.