ಹತ್ತಿರದ ಮಸೀದಿಯಿಂದ 'ಆಝಾನ್' ಕೇಳಿದ ಕೂಡಲೇ ಭಾಷಣ ನಿಲ್ಲಿಸಿದ ಅಮಿತ್ ಶಾ: ವೀಡಿಯೊ ವೈರಲ್
ಬಾರಾಮುಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸಮೀಪದ ಮಸೀದಿಯಲ್ಲಿ ಆಝಾನ್ ಕೇಳಿದ ಕೂಡಲೇ ತಮ್ಮ ಭಾಷಣವನ್ನು ಮೊಟಕುಗೊಳಿಸಿದ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ಉತ್ತರ ಕಾಶ್ಮೀರ ಜಿಲ್ಲೆಯ ಶೋಕತ್ ಅಲಿ ಕ್ರೀಡಾಂಗಣದಲ್ಲಿ ಸುಮಾರು ಅರ್ಧ ಗಂಟೆಯ ಭಾಷಣ ಮಾಡಿದ ಗೃಹಸಚಿವ ಅಮಿತ್ ಶಾ, ಐದು ನಿಮಿಷಗಳ ಕಾಲ ವಿರಾಮ ನೀಡಿ ವೇದಿಕೆಯಲ್ಲಿದ್ದವರಿಗೆ "ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ" ಎಂದು ಕೇಳಿದರು. 'ಆಝಾನ್' ನಡೆಯುತ್ತಿದೆ ಎಂದು ವೇದಿಕೆಯ ಮೇಲಿದ್ದ ಯಾರೋ ಹೇಳಿದಾಗ, ಷಾ ತಮ್ಮ ಭಾಷಣವನ್ನು ನಿಲ್ಲಿಸಿದರು. ಈ ವೇಳೆ ಸಭೆಯಿಂದ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು ಮತ್ತು ಚಪ್ಪಾಳೆ ತಟ್ಟಿದರು. ಸ್ವಲ್ಪ ಸಮಯದ ನಂತರ, ಪ್ರಾರ್ಥನೆಯ ಕರೆ ಈಗ ನಿಂತಿದೆ ಎಂದು ಹೇಳಿ, ತಮ್ಮ ಭಾಷಣವನ್ನು ಮುಂದುವರಿಸಬೇಕೇ ಎಂದು ಕೇಳಿದರು.
"ಪ್ರಾರಂಭಿಸಬೇಕೋ ಬೇಡವೋ? ಜೋರಾಗಿ ಹೇಳಿ, ನಾನು ಪ್ರಾರಂಭಿಸಬೇಕೇ" ಎಂದು ಕೇಳಿದರು ಮತ್ತು ನಂತರ ತಮ್ಮ ಭಾಷಣವನ್ನು ಮುಂದುವರೆಸಿದರು. ಈ ವೀಡಿಯೊ ಸದ್ಯ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.