ಅ.7: ಸೀರತ್ ಅಭಿಯಾನದ ಅಂಗವಾಗಿ ವಿಚಾರಗೋಷ್ಠಿ

Update: 2022-10-05 17:52 GMT

ಮಂಗಳೂರು, ಅ.5: ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ದೂರ ಮಾಡುವ ಸಲುವಾಗಿ ಮತ್ತು ಅವರು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಪರಿಚಯಿಸಲು ಜಮಾಅತೆ ಇಸ್ಲಾಮೀ ಹಿಂದ್ ‘ಪ್ರವಾದಿ ಮುಹಮ್ಮದ್ (ಸ)ರನ್ನು ಅರಿಯೋಣ’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ಹಮ್ಮಿಕೊಂಡ ಸೀರತ್ ಅಭಿಯಾನದ ಪ್ರಯುಕ್ತ ಅ.7ರಂದು ಸಂಜೆ 7ಕ್ಕೆ ನಗರದ ಪುರಭವನದಲ್ಲಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ದ.ಕ.ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ದೇಶದ ಹಿತಚಿಂತನೆ: ಪ್ರವಾದಿ ಮುಹಮ್ಮದ್ (ಸ) ಚಿಂತನೆಗಳ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ಸರ್ವಧರ್ಮೀಯರಿಗಾಗಿ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಅತಿಥಿಗಳಾಗಿ ಮಾಜಿ ಶಾಸಕ, ಚಿಂತಕ ವೈಎಸ್‌ವಿ ದತ್ತ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಕುಲಶೇಖರ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡೀಸ್ ಭಾಗವಹಿಸಲಿದ್ದಾರೆ. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ವಿಷಯ ಮಂಡಿಸಲಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳ್ಗಾಮೀ ಮುಹಮ್ಮದ್ ಸಾದ್ ಅಧ್ಯಕ್ಷತೆ ವಹಿಸುವರು ಎಂದರು.

ಹತ್ತು ದಿನಗಳ ಸೀರತ್ ಅಭಿಯಾನದ ಅಂಗವಾಗಿ ಶಾಂತಿ ಪ್ರಕಾಶನದ ವತಿಯಿಂದ ‘ಪ್ರವಾದಿ ಮುಹಮ್ಮದ್ (ಸ) ಸಮಗ್ರ ವ್ಯಕ್ತಿತ್ವ’ ಮತ್ತು ‘ಪ್ರವಾದಿ ಮುಹಮ್ಮದ್ (ಸ):ವಿವಾಹಗಳು ಮತ್ತು ವಿಮರ್ಶೆಗಳು’ ಎಂಬ ಎರಡು ಕೃತಿಗಳನ್ನು ಹೊರತರಲಾಗಿದೆ. ಅಲ್ಲದೆ ವಿವಿಧ ಕಡೆಗಳಲ್ಲಿ ವೃದ್ಧಾಶ್ರಮಗಳಿಗೆ ಭೇಟಿ, ಆಸ್ಪತ್ರೆಗಳಿಗೆ ಭೇಟಿ, ಹಿರಿಯರಿಗೆ ಸನ್ಮಾನ, ಶುಚಿತ್ವ ಅಭಿಯಾನ, ರಕ್ತದಾನ ಶಿಬಿರ, ಗಿಡ ನೆಡುವುದು ಇತ್ಯಾದಿ ಸಮಾಜ ಸೇವಾ ಕಾರ್ಯಗಳಲ್ಲದೆ ಸೀರತ್ ಪ್ರವಚನ, ವಿಚಾರಗೋಷ್ಠಿ, ಚರ್ಚಾಗೋಷ್ಠಿ, ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ, ಜ.ಇ.ಹಿಂದ್ ಮಂಗಳೂರು ಸ್ಥಾನೀಯ ಅಧ್ಯಕ್ಷ ಕೆ.ಎಂ. ಅಶ್ರಫ್, ಜಿಲ್ಲಾ ಹೊಣೆಗಾರ ಸಈದ್ ಇಸ್ಮಾಯೀಲ್, ಜಿಲ್ಲಾ ಸಂಚಾಲಕಿ ಸಮೀನಾ ಯು., ಸಹ ಸಂಚಾಲಕಿ ಶಹೀದಾ ಉಮರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News