2 ಅನಾಥಾಲಯಗಳಿಗೆ ಉತ್ತಮ ಬರ್ಗರ್‌ ಪೂರೈಸಬೇಕೆಂಬ ಷರತ್ತಿನೊಂದಿಗೆ ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ದಿಲ್ಲಿ ಹೈಕೋರ್ಟ್‌

Update: 2022-10-05 14:51 GMT

ಹೊಸದಿಲ್ಲಿ: ಎರಡು ಅನಾಥಾಲಯಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಬರ್ಗರ್‌ಗಳನ್ನು ಒದಗಿಸಬೇಕು ಎಂಬ ಷರತ್ತಿನೊಂದಿಗೆ ದಿಲ್ಲಿ ಹೈಕೋರ್ಟ್‌ ಒಬ್ಬ ವ್ಯಕ್ತಿಯ ವಿರುದ್ಧದ ಅತ್ಯಾಚಾರ ಕುರಿತಾದ ಎಫ್‌ಐಆರ್‌ ಅನ್ನು ರದ್ದುಗೊಳಿಸಲು ಒಪ್ಪಿದೆ. ತನ್ನ ಮಾಜಿ ಪತ್ನಿಯ ಮೇಲೆ ಅತ್ಯಾಚಾರವೆಸಗಿದ, ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಹಾಗೂ ಬೆದರಿಕೆಯೊಡ್ಡಿದ ಆರೋಪವನ್ನು ಈ ವ್ಯಕ್ತಿ ಎದುರಿಸುತ್ತಿದ್ದ.

ಈತ ಅನಾಥಾಲಯಗಳಿಗೆ  ಒದಗಿಸುವ ಬರ್ಗರ್‌ಗಳನ್ನು ಆರೋಗ್ಯಕರ ರೀತಿಯಲ್ಲಿ ತಯಾರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ತನ್ನ ಮಾಜಿ ಪತ್ನಿಗೆ ರೂ 4. 5 ಲಕ್ಷ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆತನಿಗೆ ಸೂಚಿಸಿದೆ.

ಆರೋಪಿಯು ಸಂತ್ರಸ್ತೆಯ ಮಾಜಿ ಪತಿಯಾಗಿರುವುದರಿಂದ ಹಾಗೂ ಕೆಲವೊಂದು ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರು ಪ್ರತ್ಯೇಕಗೊಂಡಿದ್ದರೆಂಬ ಅಂಶವನ್ನು ಈ ಪ್ರಕರಣ ಇತ್ಯರ್ಥಗೊಳಿಸುವ ವೇಳೆ ಜಸ್ಟಿಸ್‌ ಜಸ್ಮೀತ್‌ ಸಿಂಗ್‌ ಅವರ ಏಕಸದಸ್ಯ ಪೀಠ ಗಣನೆಗೆ ತೆಗೆದುಕೊಂಡಿತ್ತು. ಇದೊಂದು ವೈವಾಹಿಕ ಮನಸ್ತಾಪದ ಪ್ರಕರಣವೆಂದೂ ನ್ಯಾಯಾಧೀಶರು ಹೇಳಿದರು.

ಎಫ್‌ಐಆರ್‌ ರದ್ದುಗೊಂಡರೆ ತನಗೇನೂ ಅಭ್ಯಂತರವಿಲ್ಲ ಎಂದೂ ಆರೋಪಿಯ ಮಾಜಿ ಪತ್ನಿ ಹೇಳಿದ್ದಳು.

ʻʻಈ ಪ್ರಕರಣದ ವಿಚಾರಣೆ 2020 ರಿಂದ ನಡೆಯುತ್ತಿದೆ, ಪೊಲೀಸರ ಮತ್ತು ನ್ಯಾಯಾಂಗದ ಬಹಳಷ್ಟು ಸಮಯವನ್ನು ವ್ಯರ್ಥಗೊಳಿಸಿದೆ, ಆದುದರಿಂದ ಅರ್ಜಿದಾರರು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು,ʼʼ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News