ಉದಾರವಾದಿ ರಾಜಕೀಯ ಬಿಕ್ಕಟ್ಟು ಮತ್ತು ಭಾರತ ಐಕ್ಯತಾ ಪ್ರಯೋಗ

Update: 2022-10-06 06:17 GMT

ನವ-ಬಂಡವಾಳಶಾಹಿ ಮತ್ತು ಕೋಮುವಾದಿ ರಾಜಕಾರಣ ಸೃಷ್ಟಿಸುವ, ಆಂತರಿಕವಾಗಿ ವೈರುಧ್ಯಗಳಿಂದಲೇ ಕೂಡಿದ ಪ್ರಪಗಾಂಡಗಳಿಗೆ ಪ್ರತಿಕ್ರಿಯಿಸುವ ಸ್ಥಿತಿಗೆ ತಲುಪಿದ್ದ ಭಾರತದ ಉದಾರವಾದಿ ರಾಜಕೀಯ ಸಂಕಥನಕ್ಕೆ ಭಾರತ ಐಕ್ಯತಾ ಪ್ರಯೋಗ ಹೊಸ ಹುರುಪೊಂದನ್ನು ತಂದಂತಿದೆ. ಹೋರಾಟದ ಹಾದಿಯಲ್ಲಿ ಪದಗಳೇನೋ ಸುಂದರವಾಗಿರುತ್ತವೆ, ಆದರೆ ಕ್ರಿಯೆಗೆ ಅತ್ಯುನ್ನತ ಸ್ಥಾನ ಇದೆ ಎಂಬ ಚೆಗುವಾರನ ಮಾತನ್ನು ಭಾರತೀಯ ಉದಾರವಾದಿ ಹೋರಾಟಗಾರರು ಗಂಭೀರವಾಗಿ ಪರಿಗಣಿಸಿದಂತಿದೆ.

ಕನ್ಯಾಕುಮಾರಿಯಿಂದ ಮೌನವಾಗಿ ಆರಂಭಗೊಂಡ ಭಾರತ ಐಕ್ಯತಾ ಪ್ರಯೋಗ ಬಹಳ ಕಾಲಗಳ ನಂತರ ಜನ-ಸಮುದಾಯಗಳನ್ನು ಜಾತಿ/ವರ್ಗ/ಧರ್ಮಗಳ ಆಧಾರದಲ್ಲಿ ವಿಘಟಿಸುವ ಬಂಡವಾಳಶಾಹಿ, ಕೋಮುವಾದಿ ಮತ್ತು ಜಾತಿವಾದಿ ನಿರೂಪಣೆಗಳಿಗೆ ತಾವು ಸೃಜಿಸುವ ಪ್ರಪಗಾಂಡಗಳ ಆಚೆಗೆ ಜನ-ಸಮುದಾಯಗಳನ್ನು ಒಗ್ಗೂಡಿಸುವ ಸಂಕಥನ ಮತ್ತು ಕ್ರಿಯಾ-ಭಾಷೆಗೆ ಪ್ರತಿಕ್ರಿಯಿಸುವ ಹೊಸ ಸವಾಲನ್ನು ತಂದೊಡ್ಡಿದೆ.

ಈ ಮಾದರಿಯ ಒಗ್ಗೂಡಿಸುವ ಚರ್ಚೆಯನ್ನು ಎದುರಿಸುವಲ್ಲಿ ನಿಪುಣರಲ್ಲದ ಈ ವರ್ಗ ರಾಹುಲ್ ಟೀ ಶರ್ಟ್ ಬೆಲೆ, ಆತನ ಕುಟುಂಬ ರಾಜಕಾರಣ, ಯಾತ್ರೆಯ ಖರ್ಚು ಇತ್ಯಾದಿ ಇತ್ಯಾದಿ ಪೇಲವ ವಾದಗಳನ್ನು ಮುಂದಿಟ್ಟು ಯಾತ್ರೆಯನ್ನು ಟೀಕಿಸುವ ಪ್ರಯತ್ನ ನಡೆಸಿದೆ. ಇಷ್ಟೇ ಆಗಿದ್ದಿದ್ದರೆ ಈ ಕುರಿತು ಪ್ರತಿಕ್ರಿಯಿಸುವ ಜರೂರು ಇರುತ್ತಿರಲಿಲ್ಲ, ಆದರೆ ರಾಜಕೀಯ ಶಾಸ್ತ್ರವನ್ನು ಅಭ್ಯಸಿಸುತ್ತಿರುವ ನನಗೆ ಭಾರತದಲ್ಲಿ ನಡೆಯುತ್ತಿರುವ ಈ ಜನರನ್ನು-ಒಗ್ಗೂಡಿಸುವ ಪ್ರಯೋಗ ಕೇವಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚುನಾವಣಾ ಪೂರ್ವ ನಡಿಗೆ ಅನ್ನಿಸುತ್ತಿಲ್ಲ, ಕೆಲವರು ಹಾಗೆ ವಾದಿಸಿದರೂ, ಮೇಲ್ನೋಟಕ್ಕೆ ಆ ವಾದ ತುಸು ಸತ್ಯ ಅನ್ನಿಸಿದರೂ ಭಾರತ ಒಗ್ಗೂಡಿಸುವ ಪ್ರಯೋಗಕ್ಕೆ ಚುನಾವಣಾ ರಾಜಕೀಯದ ಏಕಮಾತ್ರ ಉದ್ದೇಶ ಇದೆ ಅನ್ನಿಸುತ್ತಿಲ್ಲ.

ಜಗತ್ತಿನ ತತ್ವಗಳ ಇತಿಹಾಸವನ್ನು ಗಮನಿಸಿದಾಗ 20ನೇ ಶತಮಾನ ಫ್ಯಾಶಿಸಂ, ಕಮ್ಯುನಿಸಂ ಮತ್ತು ಲಿಬರಲಿಸಂ ಐಡಿಯಾಲಜಿಗಳ ನಡುವಿನ ವಾಗ್ವಾದಗಳ ಯುದ್ಧಭೂಮಿಯಾಗಿದ್ದನ್ನು ನಾವು ಗುರುತಿಸಬಹುದು, ಈ ವಾಗ್ವಾದದಲ್ಲಿ ಅಂತಿಮವಾಗಿ ಉದಾರವಾದಿ ರಾಜಕೀಯ ಸಿದ್ಧಾಂತ ಗೆಲುವನ್ನು ಸಾಧಿಸುವ ಮೂಲಕ ಜಗತ್ತಿನ ಎಲ್ಲೆಡೆ ಬಹುಪಾಲು ಒಪ್ಪಿತ ರಾಜಕೀಯ ಸಿದ್ಧಾಂತವಾಗಿ ಗುರುತಿಸಲ್ಪಟ್ಟಿತ್ತು. ಅಂದರೆ ಫ್ಯಾಶಿಸಂ ಸಂಕಥನದ ವಿರುದ್ಧ ಜನಸಮುದಾಯಗಳನ್ನು ಒಗ್ಗೂಡಿಸುವ ಭಾಷೆಯೊಂದನ್ನು, ನುಡಿಗಟ್ಟೊಂದನ್ನು ಉದಾರವಾದಿ ರಾಜಕೀಯ ಸಂಕಥನ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅದು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಯನ್ನು ಒಪ್ಪುವ ಸಂವಿಧಾನಾತ್ಮಕವಾದದ ರೂಪದಲ್ಲಿ ಜಗತ್ತಿನ ಬಹತೇಕ ರಾಷ್ಟ್ರಗಳನ್ನು ಅಲ್ಲಿನ ಜನಬದುಕನ್ನು ಪ್ರಭಾವಿಸುವಲ್ಲಿ ಯಶಸ್ವಿಯೂ ಆಯಿತು.

ಭಾರತದ್ದೇ ಉದಾಹರಣೆ ನೋಡುವುದಾದರೆ 18, 19ನೇ ಶತಮಾನದಲ್ಲಿ ಬಂಡವಾಳಶಾಹಿ, ವಸಾಹತುಶಾಹಿ ವ್ಯವಸ್ಥೆಯ ಮೂಲಕ ಜಗತ್ತನ್ನು ಆಳುತ್ತಿದ್ದಾಗ ಅವರನ್ನು ಎದುರಿಸಲು ಸೋತ ಉದಾರವಾದಿ ರಾಜಕೀಯ ಚಿಂತನೆಗೆ ವಸಾಹತು ದೊರೆಗಳನ್ನು ಎದುರಿಸಲು ಭಾರತೀಯ ನೆಲದಲ್ಲಿ ಗಾಂಧಿ ನಡೆಸಿದ ಅಹಿಂಸೆ, ಸತ್ಯಾಗ್ರಹ, ಅಸಹಕಾರ ಚಳವಳಿಯ ತಂತ್ರಗಳ ಪ್ರಯೋಗ ಯಶಸ್ವಿ ಮಾದರಿಯಾಗಿತ್ತು, ಜಗತ್ತಿನ ಬಹತೇಕ ರಾಷ್ಟ್ರಗಳು ತಮ್ಮ ವಿಮೋಚನೆಗಾಗಿ ಈ ತಂತ್ರಗಳನ್ನು ಪ್ರಭಾವಿಯಾಗಿ ಬಳಸಿಕೊಂಡಿದ್ದವು. ಆದರೆ ನಮ್ಮ ನಡುವೆ ಚರ್ಚೆಯಲ್ಲಿರುವ ಪ್ರಮುಖ ಇತಿಹಾಸಕಾರ ಯೋವಲ್ ನೋವಾ ಹರಾರೆ ಅವರು ವರ್ತಮಾನದ ಜಗತ್ತಿನಲ್ಲಿ ಘಟಿಸಿರುವ ಎರಡು ಮುಖ್ಯ ಅನ್ವೇಷಣೆಗಳಾದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಂದು ಮತ್ತೆ ಬಂಡವಾಳಶಾಹಿಗಳಿಗೆ ತಮ್ಮ ವಾದಗಳನ್ನು ಹೊಸ ನುಡಿಗಟ್ಟುಗಳ ಮೂಲಕ ಮುಂಚೂಣಿಗೆ ತರುವ ಬಹಳ ದೊಡ್ಡ ಸಾಧನಗಳಾಗಿ ಮಾರ್ಪಟ್ಟಿವೆ, ಕೆಲವೇ ವರ್ಷಗಳಲ್ಲಿ ಈ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಒಗ್ಗೂಡುವಿಕೆಯ ಕಾರಣಕ್ಕೆ ಕೋಟ್ಯಂತರ ಜನರು ಔದ್ಯೋಗಿಕ ಮಾರುಕಟ್ಟೆಗಳಿಂದ ಆಚೆ ಉಳಿಯಲಿದ್ದಾರೆ, ಆ ದೊಡ್ಡ ಸಂಖ್ಯೆಯ ಜನರ ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರಶ್ನೆಗಳೇ ಅಪ್ರಸಕ್ತಗೊಳ್ಳಲಿವೆ.

ಜಗತ್ತು ಸದ್ಯದಲ್ಲಿಯೇ ಡಿಜಿಟಲ್ ಸರ್ವಾಧಿಕಾರದ ಕಡೆಗೆ ಚಲಿಸಲಿದೆ ಎಂಬ ಆತಂಕಭರಿತ ವಾದವನ್ನು ಮುಂದಿಟ್ಟಿದ್ದಾರೆ. ಇದರ ಅರ್ಥ 20ನೇ ಶತಮಾನದ ಆರಂಭದ ಕಾಲದಲ್ಲಿ ಫ್ಯಾಶಿಸಂ ಎದುರಾಗಿ ತುಸು ವಿಜಯವನ್ನು ಸಾಧಿಸಿದ್ದ ಉದಾರವಾದಿ ರಾಜಕೀಯ ಚಿಂತನೆ ಇಂದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಬಹಳ ಮುಖ್ಯವಾಗಿ ಜಾಗತೀಕರಣದ ಕಾರಣಕ್ಕೆ ಸೃಷ್ಟಿಯಾಗಿರುವ ನವ-ಮಧ್ಯಮವರ್ಗವನ್ನು ಸೆಳೆಯುವಲ್ಲಿ ಉದಾರವಾದಿ ರಾಜಕೀಯ ಸಂಕಥನದ ಭಾಷೆ ಸೋಲುತ್ತಿದೆ. ರಾಜ್ಯದ ಮೂಲಭೂತ ಕಾರ್ಯ ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಎಂಬ ಉದಾರವಾದಿ ರಾಜಕೀಯ ತಿಳಿವನ್ನು ಜಾತಿ, ಧರ್ಮಗಳ ಗುಂಪಿನ ಭಾಗವಾಗಿ ಸ್ವತಃ ವ್ಯಕ್ತಿಯೇ ಅಪಹಾಸ್ಯಕ್ಕೆ ಈಡುಮಾಡುತ್ತಿದ್ದಾನೆ. ಡಿಜಿಟಲ್ ರಾಜಕೀಯದ ಉಪಉತ್ಪನ್ನಗಳಾದ ದೃಶ್ಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಈ ಮನಸ್ಥಿತಿಗೆ ಬೇಕಾದ ಎಲ್ಲಾ ನಿರೂಪಣೆಗಳನ್ನು ವ್ಯವಸ್ಥಿತವಾಗಿ ಉತ್ಪಾದಿಸುತ್ತಿವೆ.

ಸರಳವಾಗಿ ಹೇಳುವುದಾದರೆ ಇಂದು ಆಧುನಿಕ ರಾಜ್ಯಗಳು ಸಾಂವಿಧಾನಿಕವಾಗಿ ಉದಾರವಾದಿ ರಾಜ್ಯಗಳಾಗಿವೆ. ಆದರೆ ನೀತಿ ಮತ್ತು ನಡವಳಿಕೆಗಳಲ್ಲಿ ಅವು ಮಾರುಕಟ್ಟೆ ಕೇಂದ್ರಿತ ಬಂಡವಾಳಶಾಹಿ ವ್ಯವಸ್ಥೆಯ ಲಕ್ಷಣಗಳನ್ನು ಹೊಂದಿವೆ. ಇಂತಹ ಸಂದಿಗ್ಧ ರಾಜಕೀಯ ಬಿಕ್ಕಟ್ಟು ಜಗತ್ತಿನ ಉದಾರವಾದಿ ರಾಜಕೀಯ ಸಿದ್ಧಾಂತ ಎದುರಿಸುತ್ತಿದೆ. ಜೊತೆಗೆ ಜಗತ್ತಿನ ಉದಾರವಾದಿ ರಾಜಕೀಯ ಸಿದ್ಧಾಂತ ಈ ಸವಾಲನ್ನು ಎದುರಿಸುವ ಹೊಸ ರಾಜಕೀಯ ತಂತ್ರಗಳ ಅನ್ವೇಷಣೆಯಲ್ಲಿ ತೊಡಗಿದೆ. ಜಾತಿ/ಧರ್ಮ ಇತ್ಯಾದಿ ಸಾಂಪ್ರದಾಯಿಕ ಸಂಕಥನಗಳ ಆಚೆಗೆ ಜನರನ್ನು ವ್ಯಕ್ತಿ ಸ್ವಾತಂತ್ರ್ಯದ ಆಧಾರದಲ್ಲಿ ಒಗ್ಗೂಡಿಸುವ ಹೊಸ ನುಡಿಗಟ್ಟೊಂದರ ಹುಡುಕಾಟದ ಹಾದಿಯಲ್ಲಿ ಉದಾರವಾದಿ ರಾಜಕೀಯ ಚಿಂತನೆ ನಿಂತಿದೆ. ಅದಕ್ಕಾಗಿ ಹೊಸ ಪ್ರಯೋಗಗಳನ್ನು ನಡೆಸುತ್ತಿದೆ, ಕೇವಲ ಭಾಷಣಗಳ ಆಚೆಗೆ ಕ್ರಿಯೆಯನ್ನು ಆಧರಿಸಿದ ಪರ್ಯಾಯಗಳ ಕುರಿತು ಅದು ಹೆಚ್ಚು ಆಸಕ್ತಿಯನ್ನು ವಹಿಸುತ್ತಿದೆ.

ಈ ಹಿನ್ನೆಲೆಯಲ್ಲಿ ನಾನು ಈ ಲೇಖನದ ಆರಂಭದಿಂದಲೂ ‘ಭಾರತ ಐಕ್ಯತಾ ಯಾತ್ರೆ’ಯನ್ನು ಪ್ರಯೋಗ ಎಂದು ಗುರುತಿಸುತ್ತಿದ್ದೇನೆ, ಇದು ತಕ್ಷಣಕ್ಕೆ ಭಾರತದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ಗೆ, ರಾಹುಲ್ ವ್ಯಕ್ತಿತ್ವಕ್ಕೆ, ಆ ಪಕ್ಷದ ಚುನಾವಣಾ ಫಲಿತಕ್ಕೆ ಎಷ್ಟು ನೆರವಾಗುತ್ತದೆ ಎಂಬ ಸಂಗತಿಗಳ ಆಚೆಗೆ ಜಾಗತಿಕ ಉದಾರವಾದಿ ಚಿಂತನೆಗಳ ಪ್ರಯೋಗದ ದೃಷ್ಟಿಯಿಂದ ಮಹತ್ವದ್ದು ಅನ್ನಿಸುತ್ತಿದೆ. ಏಕೆಂದರೆ ಇದು ಸ್ವರೂಪದಲ್ಲಿ ಕ್ರಿಯಾತ್ಮಕವಾಗಿದೆ. ಹಲವು ವರ್ಷಗಳ ನಂತರ ಮತ್ತೊಮ್ಮೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ಕ್ರಿಯಾತ್ಮಕ ಪ್ರಯೋಗಕ್ಕೆ ಮುಂದಾಗಿದೆ. ಪರಿಣಾಮ ಕ್ರಿಯಾತ್ಮಕವಾಗಿಯೇ ಕೆಲಸ ಮಾಡುತ್ತಿದ್ದ ಬಲಪಂಥ ಪ್ರತಿಕ್ರಿಯಾತ್ಮಕವಾಗಿ ಬದಲಾಗಿದೆ. ಯಾವಾಗಲೂ ಪ್ರತಿಕ್ರಿಯಾತ್ಮಕವಾಗಿರುತ್ತಿದ್ದ ಉದಾರವಾದಿಗಳು ಕ್ರಿಯಾತ್ಮಕವಾಗಿದ್ದಾರೆ. ಈ ಅರ್ಥದಲ್ಲಿ ಜಾಗತಿಕ ರಾಜಕೀಯ ಚರಿತ್ರೆಯಲ್ಲಿ ಈ ಯಾತ್ರೆ ಚಾರಿತ್ರಿಕವೂ, ಐತಿಹಾಸಿಕವೂ ಆಗಿ ಉಳಿಯಲಿದೆ ಅನ್ನಿಸುತ್ತಿದೆ.

ಧರ್ಮಾಧಾರಿತ ರಥಯಾತ್ರೆಯನ್ನು ನೋಡಿದ ಭಾರತೀಯ ಮನಸ್ಸು ಇಂದು ಸಾಮರಸ್ಯದ ಹೆಸರಿನ ಪಾದಯಾತ್ರೆಗೂ ಸಾಕ್ಷಿಯಾಗುತ್ತಿರುವುದು ಕಾಲದ ವಿಪರ್ಯಾಸ ಮತ್ತು ಕಾಲಚಕ್ರದ ನಿಯಮವೂ ಹೌದು ಎನ್ನುವ ತತ್ವವನ್ನು ಸಾರುತ್ತಿರುವಂತಿದೆ.

Writer - ಡಾ. ಕಿರಣ್ ಎಂ. ಗಾಜನೂರು

contributor

Editor - ಡಾ. ಕಿರಣ್ ಎಂ. ಗಾಜನೂರು

contributor

Similar News