ಆ.10: ಬಾಲವನದಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವ; ಪ್ರಶಸ್ತಿ ಪ್ರದಾನ ಸಮಾರಂಭ

Update: 2022-10-06 13:16 GMT

ಪುತ್ತೂರು: ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ, ಪುತ್ತೂರು, ಡಾ. ಶಿವರಾಮ ಕಾರಂತರ ಬಾಲವನ ಸಮಿತಿ ಪ್ರತ್ತೂರು ಇದರ ವತಿಯಿಂದ ಡಾ. ಶಿವರಾಮ ಕಾರಂತರ 121ನೇ ಜನ್ಮದಿನಾಚರಣೆ ಮತ್ತು ಬಾಲವನ ಪ್ರಶಸ್ತಿ- 2022 ಪ್ರದಾನ ಸಮಾರಂಭವು ಅ. 10ರಂದು ಪುತ್ತೂರಿನ ಬಾಲವನದಲ್ಲಿ ನಡೆಯಲಿದೆ ಎಂದು ಪ್ರತ್ತೂರು ಸಹಾಯಕ ಆಯುಕ್ತರಾದ ಬಾಲವನ ಸಮಿತಿಯ ಅಧ್ಯಕ್ಷ ಗಿರೀಶ್, ನಂದನ್ ತಿಳಿಸಿದ್ದಾರೆ.

ಅವರು ಗುರುವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮವನ್ನು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಕಾರಂತ ಸ್ಮರಣೆಯನ್ನು ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ನಗರಸಭಾ ಅಧ್ಯಕ್ಷ  ಕೆ. ಜೀವಂಧರ್ ಜೈನ್, ಪುಡಾ ಅಧ್ಯಕ್ಷ ಬಾಮಿ ಅಶೋಕ್ ಶೆಣೈ, ಜಿಲ್ಲೆಯ ವಿಧಾನಸಭೆ, ವಿಧಾನ ಪರಿಷತ್ ಶಾಸಕರು ಮತ್ತು  ಕೇಂದ್ರ ರಾಜ್ಯಸಭೆಯ ಸಂಸದರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಪರಾಹ್ನ `ಕಾರಂತರು ಮತ್ತು ರಂಗಭೂಮಿ' ಎಂಬ ವಿಷಯದ ಬಗ್ಗೆ ಪ್ರತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಶ್ರೀಧರ್, ರವರ ಅಧ್ಯಕ್ಷತೆಯಲ್ಲಿ ವಿಚಾರ ನಡೆಯಲಿದೆ. ಮಂಗಳೂರು ಸ.ಪ್ರ.ದರ್ಜೆ ಕಾಲೇಜು ಸಹಪ್ರಾಧ್ಯಾಪಕ ಸುಟ್ಟಪ್ಪ ಕೈಕಂಬ ವಿಚಾರ ಮಂಡನೆ ಮಾಡಲಿದ್ದಾರೆ.

ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ

ಅಪರಾಹ್ನ 3ಕ್ಕೆ  ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದ್ದು, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.  ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ.ವಿ ಅವರು ಬಾಲವನ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ. ಪುತ್ತೂರು ಸಂಜೀವ ಮಠಂದೂರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. 

ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಡಾ. ಶಿವರಾಮ ಕಾರಂತ ಅವರ ಪುತ್ರಿ ಪ್ರಖ್ಯಾತ ಒಡಿಸಿ ಕಲಾವಿದೆ ಕ್ಷಮಾ ರಾವ್, ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಭಗವಾನ್ ಸೊನಾವಣೆ,  ದ.ಕ.ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಸುಳ್ಯ ಅಕಾಡಮಿ ಆಫ್ ಲಿಬರಲ್' ಎಜುಕೇಶನ್ ಅಧ್ಯಕ್ಷ ಡಾ. ಚಿದಾನಂದ ಕೆ.ವಿ, ವಿವಿಧ ಅಕಾಡಮಿಗಳ ಅಧ್ಯಕ್ಷರು, ಕಸಾಪ ಅಧ್ಯಕ್ಷರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಗಳಲ್ಲಿ ಪೂರ್ವಾಹ್ನ ವಿದುಷಿ ನಯನಾ ವಿ ರೈ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ಅಪರಾಹ್ನ ಚಂದ್ರಶೇಖರ್ ಸುಳ್ಯಪದವು ಸಂಯೋಜನೆಯಲ್ಲಿ ಪಾಂಚಜನ್ಯ ಯಕ್ಷಗಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಪುಸ್ತಕ ಮೇಳ, ಕರಕುಶಲ ಮೇಳ ಹಾಗೂ ಕಲಾವಿದ ಕೀರವ ಮೊಳೆತದ್ದ ಅವರ ಚಿತಕಲಾ ಪದರ್ಶನ ಸೇರಿದಂತೆ 35ಕ್ಕೂ ಹೆಚ್ಚು ಪ್ರದರ್ಶನಗಳು ಹಾಗೂ ಕಾರಂತರ ಪುಸ್ತಕಗಳ ಪ್ರದರ್ಶನ ಮತ್ತು ಕಾರಂತರ ಜ್ಞಾನಪೀಠ ಪ್ರಶಸ್ತಿಯ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ, ಬಾಲವನ ಕಾರ್ಯಕ್ರಮ ಸಂಯೋಜಕರಾದ ಜಗನ್ನಾಥ್ ಆರಿಯಡ್ಕ, ಕಾರ್ಯಕ್ರಮ ಸಂಯೋಜಕ ರಮೇಶ್ ಉಳಯ ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News