ಲೆಸ್ಟರ್ ನಲ್ಲಿ ಹಿಂದು-ಮುಸ್ಲಿಂ ಉದ್ವಿಗ್ನತೆಯನ್ನು ಭಾರತದ ಸುದ್ದಿಗಳು ಪ್ರಚೋದಿಸಿದ್ದು ಹೇಗೆ?

Update: 2022-10-07 12:58 GMT

ಹೊಸದಿಲ್ಲಿ,ಅ.6: ಬ್ರಿಟನ್‌ನ ಲೆಸ್ಟರ್ ನಗರವು ಇತ್ತೀಚಿಗೆ ಹಿಂದು ಮತ್ತು ಮುಸ್ಲಿಂ ಗುಂಪುಗಳ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಮುಸ್ಲಿಂ ಯುವತಿಯೋರ್ವಳನ್ನು ಅಪಹರಿಸಲಾಗಿದೆ ಮತ್ತು ಹಿಂದು ದೇವಸ್ಥಾನವೊಂದು ಮುಸ್ಲಿಮರೊಂದಿಗೆ ಕಾದಾಡಲು ಮುಸುಕುಧಾರಿ ಪುಂಡರನ್ನು ಕಳಹಿಸಿದೆ ಎಂಬ ವದಂತಿಯೊಂದು ಹಬ್ಬಿದ್ದು,ಇದು ನಗರದಲ್ಲಿ ಹಿಂದು-ಮುಸ್ಲಿಮರ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಆ.28ರಂದು ನಗರದಲ್ಲಿ ನಡೆದಿದ್ದ ಏಷ್ಯಾ ಕಪ್ ಟಿ-20 ಟೂರ್ನಮೆಂಟ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಗೆದ್ದಿದ್ದು ಈ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಹಿಂದು ಮತ್ತು ಮುಸ್ಲಿಂ ಗುಂಪುಗಳು ಬೀದಿಗಿಳಿದು ಪರಸ್ಪರ ಘರ್ಷಣೆಗಳಲ್ಲಿ ತೊಡಗಿದ್ದವು. ಹಿಂದು-ಮುಸ್ಲಿಂ ಸಹಬಾಳ್ವೆಗೆ ಹೆಸರಾದ ಲೀಸೆಸ್ಟರ್‌ನಲ್ಲಿ ಕೋಮು ಬೆಂಕಿ ಭುಗಿಲೇಳುವಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದ್ದವು ಮತ್ತು ಭಾರತದಿಂದ ಹರಡಿದ್ದ ಸುಳ್ಳು ಸುದ್ದಿಗಳು ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದ್ದವು ಎನ್ನುವುದನ್ನು ವಿಶ್ಲೇಷಣೆಯು ಬೆಟ್ಟು ಮಾಡಿದೆ.

ಗಲಭೆಗಳಿಗೆ ಸಂಬಂಧಿಸಿದಂತೆ ಲೀಸೆಸ್ಟರ್ ಪೊಲೀಸರು ಸುಮಾರು 50 ಜನರನ್ನು ಬಂಧಿಸಿದ್ದಾರೆ ಮತ್ತು ಗಲಭೆಗಳಿಂದಾಗಿ ಒಂದು ಸಮುದಾಯವು ತತ್ತರಿಸಿದೆ.

ಟ್ವಿಟರ್‌ನಲ್ಲಿ ಹ್ಯಾಷ್‌ಟ್ಯಾಗ್ ಕ್ರಿಯಾಶೀಲತೆಯು ಉದ್ವಿಗ್ನತೆಯನ್ನು ಹೆಚ್ಚಿಸಲು ಶಂಕಾಸ್ಪದ ಪ್ರಚೋದನಕಾರಿ ಹೇಳಿಕೆಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದಕ್ಕೆ ಇದು ಪ್ರಬಲ ನಿದರ್ಶನವಾಗಿದೆ ಎಂದು ಟ್ವಿಟರ್ ಪೋಸ್ಟ್‌ಗಳ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿರುವ ಸತ್ಯಶೋಧಕ ಜಾಲತಾಣ ‘ಲಾಜಿಕಲಿ’ಯ ವಕ್ತಾರರೋರ್ವರು ಹೇಳಿದರು.

ಹೆಚ್ಚಿನ ಪ್ರಚೋದನಕಾರಿ ಟ್ವೀಟ್‌ಗಳು,ವದಂತಿಗಳು ಮತ್ತು ಸುಳ್ಳುಗಳು ಭಾರತದಿಂದ ಬಂದಿದ್ದವು. ಇದು ದೂರದ ಖಂಡವೊಂದರಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವಲ್ಲಿ,ಅಶಾಂತಿಯನ್ನು ಮೂಡಿಸುವಲ್ಲಿ ಪರಿಶೀಲಿಸಲ್ಪಡದ ಸಾಮಾಜಿಕ ಮಾಧ್ಯಮಗಳ ಶಕ್ತಿಯನ್ನು ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಸಾಮಾಜಿಕ ಮಾಧ್ಯಮಗಳಲ್ಲಿಯ,ವಿಷಯಗಳನ್ನು ತಿರುಚುವ ಆಯ್ದ ಕೆಲವು ಪೋಸ್ಟ್‌ಗಳನ್ನು ನಾನು ನೋಡಿದ್ದೇನೆ. ಅವುಗಳ ಪೈಕಿ ಕೆಲವು ಉಭಯ ಸಮುದಾಯಗಳ ನಡುವೆ ಏನು ಸಂಭವಿಸುತ್ತಿದೆ ಎನ್ನುವುದರ ಕುರಿತು ಸಂಪೂರ್ಣ ಸುಳ್ಳುಗಳಾಗಿವೆ ’ಎಂದು ಲೀಸೆಸ್ಟರ್‌ನ ಮೇಯರ್ ಪೀಟರ್ ಸೋಲ್ಸ್‌ಬಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿಯ ಸುಳ್ಳು ಮಾಹಿತಿಗಳು ನಗರದಲ್ಲಿ ಕಳೆದ ತಿಂಗಳು ಉಂಟಾಗಿದ್ದ ಅಶಾಂತಿಯಲ್ಲಿ ಬೃಹತ್ ಪಾತ್ರವನ್ನು ಹೊಂದಿದ್ದವು ಎಂದು ಲೀಸೆಸ್ಟರ್‌ನ ಪೊಲೀಸ್ ಮುಖ್ಯಸ್ಥ ರಾಬ್ ನಿಕ್ಸನ್ ಅವರೂ ಒಪ್ಪಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿಯ ಪೋಸ್ಟ್‌ಗಳನ್ನು ಸ್ವತಃ ಪರಿಶೀಲಿಸಿರುವ ಪೊಲೀಸರು,ಮೂವರು ವ್ಯಕ್ತಿಗಳು ಹದಿಹರೆಯದ ಯುವತಿಯನ್ನು ಅಪಹರಿಸಲು ಪ್ರಯತ್ನಿಸಿದ್ದರು ಎಂಬ ವರದಿಗಳ ಕುರಿತು ತಾವು ಸಂಪೂರ್ಣ ತನಿಖೆ ನಡೆಸಿದ್ದು,ಆನ್‌ಲೈನ್ ಕಥನದಲ್ಲಿ ಯಾವುದೇ ಸತ್ಯಾಂಶಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಜವಾದ ಮಾಹಿತಿಗಳನ್ನು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುವಂತೆ ಅವರು ಜನರನ್ನು ಆಗ್ರಹಿಸಿದ್ದಾರೆ.

ಮುಸುಕುಧಾರಿ ಪುಂಡರ ತಂಡಗಳನ್ನು ಲೀಸೆಸ್ಟರ್‌ಗೆ ರವಾನಿಸಲಾಗಿತ್ತು ಎಂಬ ಹೇಳಿಕೆಗಳಲ್ಲಿ ತಥ್ಯವಿರಲಿಲ್ಲ ಎಂದು ಹಲವಾರು ಸತ್ಯಶೋಧಕರೂ ಕಂಡುಕೊಂಡಿದ್ದಾರೆ.

ತಾನು ತನಿಖೆ ನಡೆಸಿದ್ದ ಎರಡು ಲಕ್ಷ ಟ್ವೀಟ್‌ಗಳ ಪೈಕಿ ಅರ್ಧಕ್ಕೂ ಹೆಚ್ಚು #Leicester,#HindusUnderAttack ಮತ್ತು #HindusUnderAttackinUK ಹ್ಯಾಷ್‌ಟ್ಯಾಗ್‌ಗಳೊಂದಿಗೆ ಭಾರತಕ್ಕೆ ಜಿಯೊ-ಟ್ಯಾಗ್ ಮಾಡಲಾದ ಖಾತೆಗಳಿಂದ ಬಂದಿದ್ದವು ಎಂದು ಬಿಬಿಸಿ ಮಾನಿಟರಿಂಗ್ ಹೇಳಿದೆ.

ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ತಪ್ಪು ಮಾಹಿತಿಗಳು ಮತ್ತು ನಿಂದನೆಗಳು ಭಾರತದಲ್ಲಿನ ಬಳಕೆದಾರರಿಂದ ಹೆಚ್ಚುತ್ತಿವೆ ಮತ್ತು ಇದನ್ನು ತಡೆಯಲು ಪ್ಲಾಟ್‌ಫಾರ್ಮ್‌ಗಳು ಏನನ್ನೂ ಮಾಡುತ್ತಿಲ್ಲ ಎಂಬ ಅನೇಕ ಲೀಸೆಸ್ಟರ್ ನಿವಾಸಿಗಳು ವರ್ಷಗಳಿಂದಲೂ ಶಂಕಿಸಿರುವುದನ್ನು ಸತ್ಯಶೋಧಕ ಪರೀಕ್ಷೆಗಳು ದೃಢಪಡಿಸಿವೆ.

ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮ ಯುದ್ಧದಲ್ಲಿ ಭಾರತದ ಆಡಳಿತಾರೂಢ ಹಿಂದು ರಾಷ್ಟ್ರವಾದಿ ಬಿಜೆಪಿಯ ಕೈವಾಡವಿದೆ ಎಂದು ಕೆಲವು ಟೀಕಾಕಾರರು ಮತ್ತು ಮಾನವ ಹಕ್ಕುಗಳ ಗುಂಪುಗಳು ಹೇಳಿವೆ.

Writer - ರೀನಾ ಚಂದ್ರನ್‌ (Scroll.in)

contributor

Editor - ರೀನಾ ಚಂದ್ರನ್‌ (Scroll.in)

contributor

Similar News