ಒಳಚರಂಡಿಗೆ ಇಳಿದ ಇಬ್ಬರು ಮೃತಪಟ್ಟ ಪ್ರಕರಣ: ಕುಟುಂಬಗಳಿಗೆ ತಲಾ 10 ಲ.ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ

Update: 2022-10-07 02:37 GMT

ಹೊಸದಿಲ್ಲಿ: ದಿಲ್ಲಿಯ ಮುಂಡ್ಕಾದಲ್ಲಿ ಕಳೆದ ತಿಂಗಳು ಒಳಚರಂಡಿ ಒಳಗಡೆ ವಿಷಾನಿಲ ಸೇವಿಸಿ ಮೃತಪಟ್ಟ ಇಬ್ಬರು ವ್ಯಕ್ತಿಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ)ಕ್ಕೆ  ನಿರ್ದೇಶಿಸಿದೆ. 

ಸ್ವಾತಂತ್ರ್ಯ ದೊರಕಿ 75 ವರ್ಷಗಳು ಕಳೆದರೂ ಬಡವರನ್ನು ಮಲ ಹೊರುವ (ಮ್ಯಾನುವೆಲ್ ಸ್ಕಾವೆಂಜಿಂಗ್) ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಶರ್ಮಾ ನೇತೃತ್ವದ ಪೀಠ ಹೇಳಿದೆ.
ಯಾರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆಯೋ ಅವರು ಕಾನೂನಿನ ಅಡಿಯಲ್ಲಿ ಕಡ್ಡಾಯಗೊಳಿಸಿದಂತೆ ತತ್‌ಕ್ಷಣ ಪರಿಹಾರ ನೀಡುವಂತೆ ಪೀಠ ಡಿಡಿಎಗೆ ನಿರ್ದೇಶಿಸಿದೆ.

ನ್ಯಾಯಮೂರ್ತಿ ಸುಬ್ರಹ್ಮಣೀಯಂ ಪ್ರಸಾದ್ ಅವರನ್ನು ಕೂಡ ಒಳಗೊಂಡ ಪೀಠ, ಮೃತಪಟ್ಟ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅನುಕಂಪೆಯ ನೇಮಕಾತಿ ಬಗ್ಗೆ ಕೂಡ ಪರಿಶೀಲಿಸುವಂತೆ ಡಿಡಿಎಗೆ ತಿಳಿಸಿದೆ. ಅಲ್ಲದೆ, ಮುಂದಿನ ವಿಚಾರಣೆ ದಿನಾಂಕದ ವರೆಗೆ ಆದೇಶವನ್ನು ಅನುಸರಿಸದೇ ಇದ್ದರೆ ಪ್ರಾಧಿಕಾರದ ಉಪಾಧ್ಯಕ್ಷ ಉಪಸ್ಥಿತರಿರುವಂತೆ ಸೂಚಿಸಿದೆ.

ಘಟನೆಯ ಕುರಿತ ಸುದ್ದಿ ವರದಿಯ ಆಧಾರದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಮೇಲೆ ಪೀಠ ಈ ಆದೇಶ ಜಾರಿ ಮಾಡಿದೆ.  

ಔಟರ್ ದಿಲ್ಲಿಯ ಮುಂಡ್ಕಾ ಪ್ರದೇಶದಲ್ಲಿ ಒಳಚರಂಡಿಗೆ ಇಳಿದಿದ್ದ ಸ್ವಚ್ಛತಾ ಕಾರ್ಮಿಕರಾದ ರೋಹಿತ್ ಚಾಂಡಿಲಿಯಾ (32) ಹಾಗೂ ಭದ್ರತಾ ಸಿಬ್ಬಂದಿ ಅಶೋಕ್ (30) ವಿಷಾನಿಲ ಸೇವಿಸಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News