ಬೆಂಗಳೂರು: ವೃದ್ಧೆಯ ಕೊಂದು ಪರಾರಿಯಾಗಿದ್ದ ತಾಯಿ-ಮಗ 5 ವರ್ಷಗಳ ನಂತರ ಬಂಧನ

Update: 2022-10-07 13:24 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.7: ಗೋಬಿ ಮಂಚೂರಿ ವಿಷಯದಲ್ಲಿ ಐದು ವರ್ಷಗಳ ಹಿಂದೆ ಸಿನಿಮೀಯ ರೀತಿಯಲ್ಲಿ ನಡೆದಿದ್ದ ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣವನ್ನು ಕೆಂಗೇರಿ ಪೊಲೀಸರು ಕೊನೆಗೂ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ತಾಯಿ ಶಾಂತಕುಮಾರಿ ಕೊಲೆಗೈದ ಆರೋಪದಡಿ ಶಶಿಕಲಾ(46), ಆಕೆಯ ಮಗ ಸಂಜಯ್ (26) ಎಂಬುವರನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.  

ಕೆಂಗೇರಿ ಉಪನಗರ ಬಡಾವಣೆಯ ಮನೆಯೊಂದರಲ್ಲಿ 2016ರಲ್ಲಿ ಹತ್ಯೆಯಾದ 69 ವರ್ಷದ ಶಾಂತಕುಮಾರಿ ಜೊತೆಗೆ ಮಗಳು ಶಶಿಕಲಾ ಹಾಗೂ ಮೊಮ್ಮಗ ಸಂಜಯ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. 

ಸಂಜಯ್ ಮನೆಗೆ ಬಂದು ಗೋಬಿಮಂಜೂರಿ ತಂದುಕೊಟ್ಟಿದ್ದ. ಇದನ್ನು ಯಾವುದೇ ಕಾರಣಕ್ಕೂ ಮನೆಯವರೂ ಸೇವಿಸಬಾರದು ಎಂದು ಅಜ್ಜಿ ಶಾಂತಕುಮಾರಿ ಅವರು ನಿರಾಕರಿಸಿ ಬೈದು ಮೊಮ್ಮಗನ ಮೇಲೆ ಬಿಸಾಕಿದ್ದರು. ಇದರಿಂದ ಆಕ್ರೋಶಗೊಂಡ ಸಂಜಯ್ ಅಡುಗೆ ಮನೆಯಲ್ಲಿದ್ದ ಲಟ್ಟಣಿಗೆ ತಂದು ಅಜ್ಜಿಯತ್ತ ಎಸೆದಿದ್ದು ಅದು ಬಲವಾಗಿ ತಲೆಗೆ ತಗುಲಿ ತೀವ್ರ ರಕ್ತಸ್ರಾವವಾಗಿ ಮನೆಯಲ್ಲಿ ಶಾಂತಕುಮಾರಿ ಮೃತಪಟ್ಟಿದ್ದರು. 

ಆರೋಪಿ ಸಂಜಯ್ ಸ್ನೇಹಿತ ಕುಂಬಳಗೋಡಿನ ನಿವಾಸಿ ನಂದೀಶ್‍ಗೆ ವಿಷಯ ತಿಳಿಸಿ ಮನೆಗೆ ಕರೆಯಿಸಿಕೊಂಡಿದ್ದ. ಮೂವರು ಒಟ್ಟುಗೂಡಿ ಮನೆಯ ಕಬೋರ್ಡ್‍ನಲ್ಲಿ ಶವ ಬಚ್ಚಿಟ್ಟಿದ್ದರು. ಬಳಿಕ ಮನೆಯೊಳಗೆ ಗೋಡೆ ಕೊರೆದು ಶವವಿಟ್ಟು ಸಿಮೆಂಟ್‍ನಿಂದ ಪ್ಲಾಸ್ಟರಿಂಗ್ ಮಾಡಿ ಬಣ್ಣ ಬಳಿದಿದ್ದರು. ಕೆಲ ತಿಂಗಳ ಬಳಿಕ ಊರಿಗೆ ಹೋಗಿಬರುವುದಾಗಿ ಹೇಳಿ ಮನೆ ಮಾಲಕರಿಗೆ ತಿಳಿಸಿ ಪರಾರಿಯಾಗಿದ್ದರು. 

ಆರು ತಿಂಗಳಾದರೂ ಊರಿಗೆ ಹೋಗಿದ್ದ ಅಮ್ಮ-ಮಗ ಮನೆಗೆ ಬಾರದೆ ಅನುಮಾನಗೊಂಡ ಮನೆ ಮಾಲಕರು, ಮನೆ ರಿಪೇರಿ ಮಾಡಿಸಲು 2017ರ ಮೇ 7 ರಂದು ಮನೆಯೊಳಗೆ ಪ್ರವೇಶಿಸಿದ್ದರು. ಈ ವೇಳೆ ಕೊಲೆ ಮಾಡಿರುವ ವಿಚಾರ ಗಮನಕ್ಕೆ ಬಂದಿತ್ತು. ನಂತರ ಕೆಂಗೇರಿ ಠಾಣೆ ಪೊಲೀಸರು, ತನಿಖೆ ನಡೆಸಿ ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News