ಅ.10ರಿಂದ ಆಲೂರಿನಲ್ಲಿ ಕೊರಗ ಮಕ್ಕಳ ರಂಗ ತರಬೇತಿ ಶಿಬಿರ

Update: 2022-10-07 13:37 GMT

ಕುಂದಾಪುರ, ಅ.7: ಕಾಡ್ತ್ ಕಿಜ್ರ್ ಬಣ್ತ್ ಹೆಜ್ (ಕಾಡಿನ ಮಕ್ಕಳ ಬಣ್ಣದ ಹೆಜ್ಜೆ) ಎಂಬ ಕೊರಗ ಮಕ್ಕಳ ರಂಗ ತರಬೇತಿ ಶಿಬಿರವೊಂದನ್ನು ಅ.10ರಿಂದ 16ರವರೆಗೆ ಒಟ್ಟು ಏಳು ದಿನಗಳ ಕಾಲ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಹಾಡಿಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮುದಾಯ ಕುಂದಾಪುರ ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ವಾರದ ಈ ಶಿಬಿರ ನಡೆಯಲಿದೆ.

ರಂಗ ನಿರ್ದೇಶಕರಾದ ವಾಸುದೇವ ಗಂಗೇರ ಇವರು ಶಿಬಿರದ ನಿರ್ದೇಶಕ ರಾಗಿರುತ್ತಾರೆ. ಈ ರಜಾ ಶಿಬಿರವನ್ನು ಮುಖ್ಯವಾಗಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ ಅವರ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಶ್ರೀಧರ ನಾಡ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಳಿವಿನಂಚಿನಲ್ಲಿರುವ ಪಿವಿಟಿಜಿ ಕೊರಗ ಸಮುದಾಯ ದ ಸಮಗ್ರ ಅಭಿವೃದ್ಧಿಗಾಗಿ ಸರಕಾರ ಹಲವಾರು ಕಾರ್ಯಕ್ರಮ, ಯೋಜನೆ ಜಾರಿಗೆ ತರುತ್ತಿದೆ. ಅದರ ಭಾಗವಾಗಿ ಕೊರಗ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಬಹುಮುಖ್ಯವಾದುದು. ಇಂದು ಸರಕಾರ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಕೊರಗ ಸಮುದಾಯದ ಸಾಕ್ಷರತಾ ಪ್ರಮಾಣ ಹೆಚ್ಚುತ್ತಿದೆ. ಇದಕೆ ಕಾರಣ ಕೊರಗ ಮಕ್ಕಳಿಗೆ ನೀಡಿದ ತರಬೇತಿ, ಪ್ರೋತ್ಸಾಹಧನ, ರಜಾಶಿಬಿರ, ಜಾಗೃತಿ ಕಾರ್ಯಕ್ರಮಗಳಾಗಿವೆ ಎಂದವರು ಹೇಳಿದ್ದಾರೆ.

ಕೊರಗ ಸಮುದಾಯದ ಮಕ್ಕಳಿಗೆ ಇಂದೂ ಮನೆಯಲ್ಲಿ ಕಲಿಯುವ ವಾತಾವರಣ ನಿರ್ಮಾಣವಾಗಿಲ್ಲ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 82 ವಿದ್ಯಾರ್ಥಿ ಗಳು ನಿರಂತರವಾಗಿ ಗೈರು ಹಾಜರಾಗುತಿದ್ದು, ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಕಿರಿಯ ವಯಸ್ಸಿನಲ್ಲಿ ಮದುವೆ, ಹದಿಹರೆಯದ ಸಮಸ್ಯೆ, ಎಲ್ಲಾ ಸಮುದಾಯಗಳಲ್ಲಿ ಇರುವಂತೆ ದುಶ್ಚಟಗಳಿಗೆ  ಮಕ್ಕಳು ಒಳಗಾಗುತ್ತಿದ್ದಾರೆ. ಆದರಿಂದ ಪ್ರಸ್ತುತ ಶಾಲೆಗೆ ಹೋಗುವ ಮತ್ತು ಶಾಲೆ ಬಿಟ್ಟಿರುವ ಮಕ್ಕಳನ್ನು ಒಳಗೊಂಡು ರಜಾ ಶಿಬಿರ ಏರ್ಪಡಿಸುದರ ಮೂಲಕ ಅವರ ಪ್ರತಿಭೆ ಗುರುತಿಸಿ ಹೊರತರಲು ಮತ್ತು ಅವರಲ್ಲಿರುವ ಕೀಳರಿಮೆ ದೂರಗೊಳಿಸಿ ರಜೆಯನ್ನು ಮಕ್ಕಳು ಅರ್ಥಪೂರ್ಣವಾಗಿ ಕಳೆಯಲು ಈ ಶಿಬಿರವನ್ನು ಆಯೋಜಿಸಲಾಗಿದೆ.

ಶಾಲೆಯ ಶಿಕ್ಷಣ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳು, ಸಂಗೀತ, ನಾಟಕ ಕ್ಷೇತ್ರದ ಪರಿಚಯದ ಜೊತೆಗೆ ಕೊರಗ ಸಮುದಾಯದ ಪಾರಂಪರಿಕ ಕಲೆಯ ಜ್ಞಾನ ಪರಂಪರೆಯನ್ನು  ಉಳಿಸುವ ಪ್ರಯತ್ನ ಈ ಶಿಬಿರದಿಂದ ನಡೆಯಲಿದೆ. ಕೊರಗೇತರ ಮಕ್ಕಳಿಗೆ ಸಿಗುವ ಅವಕಾಶ ಕೊರಗ ಮಕ್ಕಳಿಗೆ ಸಿಗುವ ಮತ್ತು ಅವರು ಹೊಸ ಸ್ಫೂರ್ತಿಯಿಂದ ಪುನಃ ಶಾಲೆಗೆ ಹೋಗಲು ಸಾಧ್ಯವಾಗಬೇಕು ಎನ್ನುವುದು ಶಿಬಿರದ ಉದ್ದೇಶವಾಗಿದೆ ಎಂದು ಶ್ರೀಧರ ನಾಡ ಹೇಳುತ್ತಾರೆ.

ಕೊರಗ ಮಕ್ಕಳ ರಜಾ ಶಿಬಿರದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅವರನ್ನು ಸಂಪೂರ್ಣವಾಗಿ ತರಬೇತಿ ಗೊಳಿಸಲಾಗುತ್ತದೆ. ರಂಗ ಅಭಿನಯದ ಪರಿಚಯ, ಹಾಡುಗಳು, ಮಕ್ಕಳಿಗೆ ಖುಷಿ ನೀಡುವ ನೃತ್ಯಗಳು, ಯಕ್ಷಗಾನದ ಕುಣಿತ, ಚಿತ್ರಕಲೆ, ಕ್ರಾಪ್ಟ್ ರಚಿಸಿ ಆ ಮೂಲಕ ಹಾಡು ಕಥೆಗಳನ್ನು ಹೇಳುತ್ತಾ ಮಕ್ಕಳಿಗೆ ಮನೋರಂಜನೆ ನೀಡಲಾಗುವುದು. ಕೊರಗರ ಕುಲಕಸುಬಿನ ಪ್ರಾತ್ಯಕ್ಷಿಕೆ,  ಡೆಕೋರೇಷನ್, ವ್ಯಾಯಾಮ ನಡೆಸಲಾಗುತ್ತದೆ.

ಶಿಬಿರದಲ್ಲಿ ಮಕ್ಕಳು ಸ್ವರಚಿತ ಕವನ, ಕಥೆಗಳನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ. ಹಾಗೆಯೇ ವಿಜ್ಞಾನದ ಕೌತುಕಗಳ, ವಿಸ್ಮಯಗಳ ಕುರಿತು ಮಕ್ಕಳಿಗೆ ತಿಳಿಸುತ್ತಾ ಅವರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿಸಲಾಗುತ್ತದೆ. ಅಲ್ಲದೆ ವಿಶೇಷವಾಗಿ ರಂಗ ಕಲಾವಿದರ ಮೂಲಕ ಕೊರಗ ಸಮುದಾಯದ ಭಾಷೆ, ಕುಲಕಸುಬಿನ ಪರಿಕರಗಳು, ಡೋಲು, ಚಂಡೆ, ಇತರೆ ಪರಿಕರಗಳನ್ನು ಬಳಸಿ ವಿಭಿನ್ನವಾದ ನಾಟಕವನ್ನು ಮಕ್ಕಳಿಂದ ಮಾಡಿಸಲಾಗುತ್ತದೆ. ಆ ನಾಟಕವನ್ನು ಶಿಬಿರದ ಕೊನೆಯಲ್ಲಿ ಸಾರ್ವಜನಿಕವಾಗಿ ಮಕ್ಕಳು ಪ್ರಸ್ತುತಪ ಡಿಸುತ್ತಾರೆ. ಶಿಬಿರದಲ್ಲಿ 50 ಕೊರಗ ಮಕ್ಕಳು ಭಾಗವಹಿಸುತ್ತಾರೆ. ಈ ಶಿಬಿರವು ಸಾರ್ವಜನಿಕರ, ಸಹೃದಯಿ ದಾನಿಗಳ ನೆರವಿನಿಂದ ನಡೆಯುತ್ತಿದೆ ಎಂದವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News