PFI ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ

Update: 2022-10-07 13:44 GMT

ಬೆಂಗಳೂರು, ಅ.7: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಪಿಎಫ್‍ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮೇಲಿನ ಒಂದೇ ಒಂದು ಪ್ರಕರಣವನ್ನು ಹಿಂಪಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ ಸೇರಿದಂತೆ ಹಲವು ಸಚಿವರು, ಬಿಜೆಪಿ ಮುಖಂಡ ಸಿ.ಟಿ.ರವಿ ಅವರು, ಸಿದ್ದರಾಮಯ್ಯ ನೇತೃತ್ವದ ಸರಕಾರವು ಆಡಳಿತದಲ್ಲಿದ್ದಾಗ ಪಿಎಫ್‍ಐ ಮೇಲಿನ ಕೇಸ್‍ಗಳನ್ನು ರದ್ದುಗೊಳಿಸಿದ್ದಾರೆಂದು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಇವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿರುಗೇಟು ನೀಡಿದರು. 

2013-14 ರಿಂದ 2022ರ ತನಕ ರಾಜ್ಯದಲ್ಲಿ ವಿವಿಧ ಪ್ರಕರಣಗಳಡಿ ಸರಕಾರಗಳು ಹಿಂಪಡೆದ ಪ್ರಕರಣಗಳ ಕುರಿತು ಮಾಹಿತಿ ಹಕ್ಕು ಅಧಿನಿಯಮದ ಅಡಿ ಸರಕಾರವೇ ಉತ್ತರ ನೀಡಿದ್ದು ಅದರಲ್ಲಿ ಒಟ್ಟಾರೆ 367 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದರಲ್ಲಿ ಒಂದೇ ಒಂದು ಪ್ರಕರಣವು ಪಿಎಫ್‍ಐಗೆ ಸಂಬಂಧಿಸಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

367 ಒಟ್ಟು ಹಿಂಪಡೆದ ಪ್ರಕರಣಗಳ ಪೈಕಿ ಸಂಘ ಪರಿವಾರಕ್ಕೆ ಸೇರಿದ 44 ಪ್ರಕರಣಗಳು, ಕೋಮು ಗಲಭೆ ಸೇರಿದ ಎಂಟು ಪ್ರಕರಣಗಳು ಸೇರಿವೆ. ಬಿಜೆಪಿ ನಾಯಕರು ತಮಗೆ ಅನುಕೂಲವಾಗುವ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಅಲ್ಲದೆ, ಜವಾಬ್ದಾರಿ ಸ್ಥಾನದಲ್ಲಿದ್ದು ಆರೋಪ ಮಾಡುವಾಗ ಮುಖ್ಯಮಂತ್ರಿ ಸೇರಿ ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕು ಇಲ್ಲದಿದ್ದರೆ ತಿರುಗುಬಾಣವಾಗಲಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News