ಬಿಜೆಪಿ ಮುಖಂಡರ ರಾಜ್ಯ ಪ್ರವಾಸಕ್ಕೆ ಜನರಿಂದ ಮೆಚ್ಚುಗೆ: ನಳಿನ್‍ಕುಮಾರ್ ಕಟೀಲ್

Update: 2022-10-07 15:17 GMT

ಬೆಂಗಳೂರು, ಅ. 7: ‘ಬಿಜೆಪಿ ಮುಖಂಡರ ಪ್ರವಾಸಕ್ಕೆ ಜನರಿಂದ ಅತ್ಯುತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫಲಾನುಭವಿಗಳು ಆನಂದದಿಂದಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಆರಂಭವಾದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು,‘ದೇಶ ಮಾತ್ರವಲ್ಲದೆ, ವೀರಶೈವ ಸಮಾಜವನ್ನೂ ಒಡೆಯಲು ಮುಂದಾದ ಪಕ್ಷ ಕಾಂಗ್ರೆಸ್. ಭಾರತದಿಂದ ಓಡಲು ಇಟಲಿಯ ಅಕ್ಕ ದಾರಿ ಹುಡುಕುತ್ತಿದ್ದಾರೆ. ಇದು ಭಾರತ್ ಜೋಡೊ ಅಲ್ಲ. ಇದು ಯಶಸ್ವಿ ಆಗುವುದಿಲ್ಲ' ಎಂದು ವಿಶ್ವಾಸದಿಂದ ನುಡಿದರು.

‘ಭಯೋತ್ಪಾದನೆ, ಭ್ರಷ್ಟಾಚಾರವೇ ಕಾಂಗ್ರೆಸ್‍ನ ಕೊಡುಗೆ. ಆರು ದಶಕಗಳ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಸದಾ ಕಾಲ ಹಗರಣಗಳನ್ನೇ ಮಾಡಿತು. ಶಾಸ್ತ್ರೀಜಿ ಹೊರತುಪಡಿಸಿ ಉಳಿದೆಲ್ಲ ಪ್ರಧಾನಿಗಳು ಭ್ರಷ್ಟರಾಗಿದ್ದರು. ಕಾಂಗ್ರೆಸ್ ಮುಖಂಡರೆಲ್ಲರೂ ಭ್ರಷ್ಟಾಚಾರ ಮಾಡಿದವರು. ಹಾಸಿಗೆ, ಸೋಲಾರ್, ಮೊಟ್ಟೆ, ನೇಮಕಾತಿಯಲ್ಲೂ ಹಗರಣಗಳನ್ನು ಮಾಡಿದ್ದ, ಜಾತಿ-ಜಾತಿಗಳ ನಡುವೆ ಸಂಘರ್ಷ ತಂದಿಟ್ಟ ಸಿದ್ದರಾಮಣ್ಣನ ಕೊಡುಗೆಯನ್ನು ಜನರು ಮರೆತಿಲ್ಲ' ಎಂದು ಟೀಕಿಸಿದರು.

‘ಚುನಾವಣಾ ಪೂರ್ವತಯಾರಿ ನಡೆಯುತ್ತಿದೆ. ಅದ್ಭುತ ಪ್ರತಿಕ್ರಿಯೆ ಖಚಿತ. ಜನರು ಬಿಜೆಪಿ ಕಡೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೋವಿಡ್ ಉಚಿತ ಲಸಿಕೆ ಮೂಲಕ ಮಾಸ್ಕ್ ತೆಗೆದು ಕುಳಿತುಕೊಳ್ಳಲು ಜನಪರ ಕಾಳಜಿ ಉಳ್ಳ ಪ್ರಧಾನಿ ಮೋದಿಜಿ ಅವರು ಕಾರಣರಾಗಿದ್ದಾರೆ ಎಂದು ಅವರು ತಿಳಿಸಿದರು.

‘ಇತರ ಪಕ್ಷಗಳ ಹತ್ತಾರು ಶಾಸಕರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಪಕ್ಷದ ಮುಖಂಡರ ಪ್ರವಾಸ ನಡೆಸಲಾಗುತ್ತಿದೆ. ಚುನಾವಣೆಗೆ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಶ್ರಮಿಸಬೇಕು'

-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News