ದೇಶದ ಜನಹಿತಕ್ಕಾಗಿ ಪ್ರವಾದಿಯ ತತ್ವಾದರ್ಶ ಅತ್ಯಗತ್ಯ: ವೈ.ಎಸ್.ವಿ. ದತ್ತ

Update: 2022-10-07 16:52 GMT

ಮಂಗಳೂರು, ಅ.7: ಪ್ರವಾದಿ ಪೈಗಂಬರ್‌ರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಕಲ್ಲುಮುಳ್ಳುಗಳ ಪಯಣ ಅವರದ್ದಾಗಿತ್ತು. ತನ್ನ ಶತ್ರುಗಳು ಯಾರು, ಮಿತ್ರರು ಯಾರು ಎಂಬುದನ್ನು ತಿಳಿಯಲಾಗದ ಗೊಂದಲಗಳಿಂದ ಕೂಡಿದ ಸಮಾಜದ ಮಧ್ಯೆ ಅವರ ಬದುಕು ಸಾಗುತ್ತಿತ್ತು. ಅಂದಿನ ಕಾಲಘಟ್ಟದ ಸಾಮಾಜಿಕ, ರಾಜಕೀಯ ಸ್ಥಿತಿಗತಿಯ ಮಧ್ಯೆಯೂ ಅವರು ನೂರಾರು ಸಮಸ್ಯೆಗಳನ್ನು ಎದುರಿಸಿದರೂ ಪ್ರೀತಿ, ವಿಶ್ವಾಸ, ನಂಬಿಕೆ, ಮನುಷ್ಯತ್ವದ ಮೇಲೆ ಜಗತ್ತನ್ನೂ ಗೆದ್ದರು. ದೇಶದ ಇಂದಿನ ವಿಷಮ ಪರಿಸ್ಥಿತಿಯನ್ನು ಎದುರಿಸಲು, ಜನರ ಹಿತವನ್ನು ಕಾಪಾಡಲು ಪ್ರವಾದಿಯ ತತ್ವಾದರ್ಶವು ಅತ್ಯಗತ್ಯವಾಗಿದೆ ಎಂದು ಮಾಜಿ ಶಾಸಕ, ಚಿಂತಕ ವೈ.ಎಸ್.ವಿ ದತ್ತ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ‘ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯೋಣ’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ಹಮ್ಮಿಕೊಂಡ ಸೀರತ್ ಅಭಿಯಾನದ ಪ್ರಯುಕ್ತ ‘ದೇಶದ ಹಿತಚಿಂತನೆ: ಪ್ರವಾದಿ ಮುಹಮ್ಮದ್ (ಸ) ಚಿಂತನೆಗಳ ಬೆಳಕಿನಲ್ಲಿ’ ಎಂಬ ವಿಷಯದಲ್ಲಿ ನಗರದ ಪುರಭವನದಲ್ಲಿ ಶುಕ್ರವಾರ ಏರ್ಪಡಿಸಿದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರವಾದಿ ಪೈಗಂಬರ್ ಮತ್ತು ಬಸವಣ್ಣನ ಸಂದೇಶ, ಬದುಕಿನ ಮಧ್ಯೆ ತುಂಬಾ ಸಾಮ್ಯತೆ ಇದೆ. ಬಹುರೂಪಿ ವ್ಯಕ್ತಿತ್ವದ ಪ್ರವಾದಿಯು ಸಮಾನತೆಯ ಸಾಮ್ರಾಜ್ಯವನ್ನೇ ಕಟ್ಟಿದ್ದರು. ಅಂತಹ ಪ್ರವಾದಿಯ ಜೀವನ ಮೌಲ್ಯವನ್ನು ಸರ್ವರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಜನಸಾಮಾನ್ಯರ ಆತಂಕ, ಅನುಮಾನ ದೂರವಾಗುವಂತಹ ಸುಂದರ ದಿನಗಳು ನಮ್ಮೆಲ್ಲರದ್ದಾಗಲಿ ಎಂದು ವೈ.ಎಸ್.ವಿ ದತ್ತ  ಆಶಿಸಿದರು.
 
*ಧರ್ಮದ ಸಂದೇಶಗಳು ಮಸೀದಿ, ಮಂದಿರ, ಚರ್ಚ್‌ಗೆ ಸೀಮಿತವಾಗಬಾರದು ಎಂಬ ಕಲ್ಪನೆಯಂತೆಯೇ ಪ್ರವಾದಿಯ ಜೀವನವು ಕೂಡ ಕೇವಲ ಮುಸಲ್ಮಾನರಿಗೆ ಮಾತ್ರ ಸೀಮಿತವಾಗಬಾರದು. ಅವರ ಬದುಕು ಪ್ರತಿಯೊಬ್ಬರದ್ದಾಗಬೇಕು. ಇಸ್ಲಾಂ ಧರ್ಮವನ್ನು ಅಲ್ಪಸ್ವಲ್ಪ ತಿಳಿದವರು ಈಗಲೂ ಪ್ರವಾದಿಯ ಬಗ್ಗೆ ತಪ್ಪುಕಲ್ಪನೆಗಳನ್ನು ಬಿತ್ತುತ್ತಿದ್ದಾರೆ. ಧರ್ಮವನ್ನು ಗುತ್ತಿಗೆ ಪಡೆದ ಕೆಲವರು ತನ್ನ ರಾಜಕೀಯ ಲಾಭಕ್ಕೋಸ್ಕರ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮವನ್ನು ಕೇವಲ ‘ಶಬ್ದ’ಗಳಾಗಿ ಮಾರ್ಪಡಿಸುತ್ತಿದ್ದಾರೆ. ಅವುಗಳನ್ನು ಮತಗಳಾಗಿಯೂ ಪರಿವರ್ತಿಸುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.

ಮನುಷ್ಯರ ಮಧ್ಯೆ ದ್ವೇಷ ಕಟ್ಟುವುದು ಧರ್ಮದ ಕೆಲಸವಲ್ಲ. ಸೇತುವೆ ನಿರ್ಮಿಸುವುದೇ ಧರ್ಮದ ಕೆಲಸವಾಗಿದೆ. ಜಾತಿ, ಧರ್ಮಗಳು  ಇಂದಿನ ಸಮಸ್ಯೆಗಳೇ ಅಲ್ಲ. ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಅಸಮಾನತೆ, ಹಸಿವು, ಬಡತನ ಇತ್ಯಾದಿಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪ್ರವಾದಿಯ, ಬಸವಣ್ಣನ, ಸ್ವಾಮಿ ವಿವೇಕಾನಂದರ, ನಾರಾಯಣಗುರುಗಳ ತತ್ವವನ್ನು ಅರ್ಥಮಾಡಿಕೊಂಡು ಬಲಿಷ್ಠ ಭಾರತವನ್ನು ಕಟ್ಟಬೇಕಿದೆ ಎಂದು ನಿಕೇತ್ ರಾಜ್ ಮೌರ್ಯ ಅಭಿಪ್ರಾಯಪಟ್ಟರು.

*ಪ್ರವಾದಿಯ ಬದುಕೇ ನಮಗೆ ದಾರಿದೀಪಗಳಾಗಿವೆ. ಅವರು ಹಚ್ಚಿದ ಬೆಳಕಿನಲ್ಲೇ ನಾವು ನಡೆಯೋಣ. ಪ್ರವಾದಿಯ ಮಾತನ್ನು ಆಲಿಸಿದರೆ ಸಾಲದು. ಅದನ್ನು ಪಾಲಿಸಬೇಕಿದೆ ಎಂದು ಕುಲಶೇಖರ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡೀಸ್ ಹೇಳಿದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ವಿಷಯ ಮಂಡಿಸಿದರು. ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ. ಬೆಳ್ಗಾಮೀ ಮುಹಮ್ಮದ್ ಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರವಾದಿ ಮುಹಮ್ಮದ್ (ಸ) ಸಮಗ್ರ ವ್ಯಕ್ತಿತ್ವ’ ಕೃತಿಯನ್ನು ವೈಎಸ್‌ವಿ ದತ್ತ ಹಾಗೂ ‘ಪ್ರವಾದಿ ಮುಹಮ್ಮದ್ (ಸ) ವಿವಾಹಗಳು ಮತ್ತು ವಿಮರ್ಶೆಗಳು’ ಕೃತಿಯನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಬಿಡುಗಡೆಗೊಳಿಸಿದರು.

ಅಬ್ದುಲ್ಲತೀಫ್ ಆಲಿಯಾ ಕಿರಾಅತ್ ಪಠಿಸಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ದ.ಕ.ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ ವಂದಿಸಿದರು. ಡಾ. ಜಮಾಲುದ್ದೀನ್ ಹಿಂದಿ ಮತ್ತು ಲುಬ್ನಾ ಝಕಿಯ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News