ಈ.ಡಿ. ವಿಚಾರಣೆ ಒಂದು ಹಂತಕ್ಕೆ ಮುಕ್ತಾಯವಾಗಿದೆ: ಡಿ.ಕೆ.ಶಿವಕುಮಾರ್

Update: 2022-10-07 17:24 GMT

ಬೆಂಗಳೂರು, ಅ.7: ಈ.ಡಿ. ವಿಚಾರಣೆ ಒಂದು ಹಂತಕ್ಕೆ ಮುಕ್ತಾಯವಾಗಿದೆ. ಎರಡು ಮೂರು ದಿನಗಳಲ್ಲಿ ಕೆಲವು ದಾಖಲೆ ನೀಡುವಂತೆ ಕೇಳಿದ್ದು, ನಾನು ಸಮಯಾವಕಾಶ ಕೋರಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  

ಶುಕ್ರವಾರ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಂಗ್ ಇಂಡಿಯಾ ಸಂಸ್ಥೆಗೆ ಹಣ ನೀಡಿರುವ ಬಗ್ಗೆ ಅವರು ಮಾಹಿತಿ ಕೇಳಿದರು. ಜವಾಹರಲಾಲ್ ನೆಹರು ಹಾಗೂ ಗಾಂಧಿ ಅವರ ಕಾಲದಲ್ಲಿ ನಮ್ಮ ಮುಖಂಡರು ಮಾಡಿರುವ ಸಂಸ್ಥೆಗಳಿಗೆ ನಾವು ಹಣ ನೀಡಿದ್ದೇವೆ ಎಂದು ಹೇಳಿದ್ದೇವೆ. ಅವರು ನೀವು ಹಣ ಯಾಕೆ ಕೊಟ್ಟಿರಿ? ಹೇಗೆ ಕೊಟ್ಟಿರಿ? ಅದರ ಮೂಲ ಏನು ಎಂದು ಕೇಳಿದ್ದಾರೆ ಎಂದರು.

ರಾಜಕಾರಣವನ್ನು ಫೀಲ್ಡ್ ನಲ್ಲಿ ಮಾಡಬೇಕೇ ಹೊರತು ತನಿಖಾ ಸಂಸ್ಥೆಯ ಕಚೇರಿಯಲ್ಲಿ ಅಲ್ಲ. ಭಾರತ ಜೋಡೋ ಪಾದಯಾತ್ರೆ ನಿಮಿತ್ತ ರಾಹುಲ್ ಗಾಂಧಿ ಅವರು ನಮ್ಮ ಭಾಗದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ನಾನು ಇವತ್ತು ಯಾತ್ರೆಯಲ್ಲಿ ಭಾಗವಹಿಸಲು ಆಗಿಲ್ಲ. ಇವತ್ತೇ ಈ ವಿಚಾರಣೆ ಮಾಡುವ ಅಗತ್ಯ ಏನಿತ್ತು? ನಾನು ಅ. 23 ರ ನಂತರ ಯಾವುದೇ ದಿನ ವಿಚಾರಣೆಗೆ ಕರೆದರೂ ಬರುತ್ತೇನೆ ಎಂದು ಸಮಯ ಕೇಳಿದ್ದರೂ ಅವಕಾಶ ನೀಡಲಿಲ್ಲ. ಇವತ್ತೇ ಹಾಜರಾಗುವಂತೆ ಸೂಚಿಸಿದ್ದರು ಎಂದು ಡಿಕೆಶಿ ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News