ಸಮಾಜ ಬದಲಾಯಿಸುವಲ್ಲಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಾಗಿದೆ: ನ್ಯಾ.ಸಂತೋಷ್ ಹೆಗಡೆ

Update: 2022-10-07 17:49 GMT

ಬೆಂಗಳೂರು, ಅ. 7: ‘ಇಂದು ತಪ್ಪು ಮಾಡಿದವರು ಶ್ರೀಮಂತರಾಗಿದ್ದರೆ, ಯಾರು ಪ್ರಶ್ನೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಮತ್ತು ಶ್ರೀಮಂತಿಕೆಗೆ ಹೆದರುವಂತಹ ವಾತಾವರಣ ಇಂದು ನಿರ್ಮಾಣವಾಗುತ್ತಿದೆ. ಇಂತಹ ಸಮಾಜವನ್ನು ಬದಲಾಯಿಸಲು ಮಾಧ್ಯಮಗಳ ಜವಾಬ್ದಾರಿ ಹೆಚ್ಚಾಗಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಮತ್ತು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಆಶ್ರಯದಲ್ಲಿ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ‘ಮಾಧ್ಯಮದ ಸ್ವಾತಂತ್ರ: ಸ್ವರೂಪ, ವ್ಯಾಪ್ತಿ ಮತ್ತು ಅದರ ಇತಿಮಿತಿಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಿಂದಿನ ಕಾಲದಲ್ಲಿ ಕಾನೂನುಬದ್ಧವಾಗಿ ಸಂಪಾದಿಸಿದವರನ್ನು ಶ್ರೀಮಂತರು ಎಂದು ಕರೆಯುತ್ತಿದ್ದರು. ಆದರೆ ಈಗ ಕಾನೂನುಬಾಹಿರವಾಗಿ ಅನೈತಿಕ ಮಾರ್ಗಗಳಲ್ಲಿ ದುಡ್ಡು ಸಂಪಾದಿಸಿದವರನ್ನು ಶ್ರೀಮಂತರು ಎಂದು ಕರೆಯುತ್ತಿದ್ದೇವೆ. ಈ ಭಾವನೆಯನ್ನು ಹೋಗಲಾಡಿಸಬೇಕಾದರೆ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು’ ಎಂದರು.

‘ಅಭಿಪ್ರಾಯಗಳನ್ನು ಬದಲಾಯಿಸಲು, ಸಮಾಜಕ್ಕೆ ನೈತಿಕ ಮಾರ್ಗವನ್ನು ತೋರಿಸಲು, ಸುಳ್ಳು ಮಾಹಿತಿಗಳನ್ನು ಕೊಡದೆ ಮಾಧ್ಯಮ ಪ್ರಾಮಾಣಿಕ ಕೆಲಸ ಮಾಡಬೇಕು. ಯಾವುದನ್ನು ಪ್ರಚಾರ ಮಾಡಬೇಕು, ಯಾವುದನ್ನು ಪ್ರಚಾರ ಮಾಡಬಾರದು ಎಂಬ ವಿಷಯಗಳನ್ನು ಮೊದಲು ಮಾಧ್ಯಮಗಳು ಅರಿತುಕೊಳ್ಳಬೇಕು. ದೇಶದ ಐಕ್ಯತೆಗೆ ಧಕ್ಕೆಯಾಗುವ ಯಾವುದೇ ವಿಷಯಗಳನ್ನು ಪ್ರಸಾರ ಮಾಡಬಾರದು’ ಎಂದು ಅವರು ತಿಳಿಸಿದರು. 

‘ಪ್ರತಿಯೊಬ್ಬರಲ್ಲೂ ತೃಪ್ತಿ, ಮಾನವೀಯತೆ ಇದ್ದಾಗ ಮಾತ್ರ ಸಮಾಜ ಶಾಂತಿಯುತವಾಗಿರುತ್ತದೆ. ಇವತ್ತಿನ ಶಿಕ್ಷಣದಲ್ಲಿ ಮಾನವೀಯತೆ ಮತ್ತು ಮೌಲ್ಯಯು ಶಿಕ್ಷಣದ ಕೊರತೆ ಇದ್ದು, ಪೋಷಕರು ಇದರ ಬಗ್ಗೆ ಹೆಚ್ಚು ಗಮನಹರಿಸದೆ ಇರುವುದರಿಂದ ಇಂದಿನ ಯುವ ಪೀಳಿಗೆ ವಾಮ ಮಾರ್ಗಗಳಲ್ಲಿ ಯೋಚಿಸಲು ಕಾರಣವಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ವಿವಿಯ ಕಾನೂನು ವಿಭಾಗದ ಪ್ರಾಧ್ಯಾಪಕ ಸತೀಶ್ ಗೌಡ ಮಾತನಾಡಿ, ‘ನಿರಂಕುಶ ಪ್ರಭುತ್ವದಲ್ಲಿದ್ದಾಗ ನಮ್ಮ ಭಾರತ ಸಂವಿಧಾನದ ಮೌಲ್ಯ ಅರ್ಥವಾಗುತ್ತದೆ. ಏಕೆಂದರೆ ಸಂವಿಧಾನವನ್ನು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ರೂಪಿಸಲಾಗಿದೆ. ಪತ್ರಿಕಾ ಸ್ವತಂತ್ರವನ್ನು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತ ಹಕ್ಕಿನಲ್ಲಿ ಅಳವಡಿಸಿದ್ದು, ಅದನ್ನು ನ್ಯಾಯಾಂಗವು ಎತ್ತಿಹಿಡಿದಿದೆ’ ಎಂದರು. 

‘ಮಾಧ್ಯಮದವರಿಗೆ ಮಾಹಿತಿ ಹಕ್ಕು ಕಾಯ್ದೆಯು ಎರಡನೆ ಸಂವಿಧಾನದಂತೆ ಕೆಲಸ ಮಾಡುತ್ತಿದೆ. ಪತ್ರಕರ್ತರು ಮಾಹಿತಿಯನ್ನು ಪಡೆದು ಸರಕಾರವನ್ನು ಪ್ರಶ್ನಿಸಬಹುದು. ಒಂದು ವೇಳೆ ಮಾಹಿತಿ ಇಲ್ಲದಿದ್ದರೆ, ಸುದ್ದಿಗಳನ್ನು ಜನರಿಗೆ ಹೇಗೆ ತಲುಪಿಸಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು. 

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ದ್ವಾರಕನಾಥ ಬಾಬು, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ತೊಗರ್ಸಿ, ಪತ್ರಕರ್ತರಾದ ಅಂಬರೀಶ್, ಶಾಂತಲಾ ಧರ್ಮರಾಜ್, ಸುಚೇತನಾ ನಾಯ್ಕ್, ಶ್ರೀಕಾಂತ್ ಹುಣಸವಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News