ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಎರಡು ನಿರ್ಣಯ ಅಂಗೀಕಾರ

Update: 2022-10-07 17:55 GMT

ಬೆಂಗಳೂರು, ಅ.7: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸಿದ ಕೇಂದ್ರ ಸರಕಾರದ ನಿರ್ಧಾರಕ್ಕೆ ಸ್ವಾಗತ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಖಂಡಿಸಿ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.

ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಈ ಎರಡು ರಾಜಕೀಯ ನಿರ್ಣಯಗಳನ್ನು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಿಎಫ್‍ಐ ನಿಷೇಧಿಸಿದ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಿಸುವ ನಿರ್ಣಯವನ್ನು ಸಚಿವ ವಿ.ಸುನೀಲ್ ಕುಮಾರ್ ಮಂಡನೆ ಮಾಡಿದರು. ಶಾಸಕರಾದ ರಾಜ್‍ಕುಮಾರ್ ತೇಲ್ಕರ್ ಹಾಗೂ ಪ್ರಾಣೇಶ್ ಅನುಮೋದಿಸಿದರು. ಇದೇ ವೇಳೆ, ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರಕಾರವು ದೇಶದ ಜನರ ಬದುಕು ಹಸನು ಮಾಡಲು ಕೈಗೊಂಡ ಕ್ರಮಗಳಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು ಎಂದು ಮಹೇಶ್ ತಿಳಿಸಿದರು.

ಭಾರತ್ ಜೋಡೋ ಯಾತ್ರೆಯನ್ನು ಖಂಡಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ ನಿರ್ಣಯವನ್ನು ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಎನ್.ಮಹೇಶ್ ಅನುಮೋದಿಸಿದರು. ಅಲ್ಲದೆ, ಈ ನಿರ್ಣಯವನ್ನು ಸರ್ವಾನುಮತದಿಂದ ಸಭೆಯು ಅಂಗೀಕರಿಸಿತು ಎಂದು ಅವರು ಹೇಳಿದರು.

ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ. ಮತ ಬ್ಯಾಂಕ್‍ಗಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮೂಲಕ ದೇಶವನ್ನು ವಿಭಜಿಸಿದವರು, ಈಗ ಭಾರತ್ ಜೋಡೋ ಎಂಬ ರಾಜಕೀಯ ಅಪಹಾಸ್ಯದ ನಾಟಕವಾಡುತ್ತಿದ್ದಾರೆ. ಈ ಯಾತ್ರೆ ಬಗ್ಗೆ ರಾಜ್ಯದ ಜನರಿಗೆ ಮನವರಿಕೆಯಾಗಿದೆ ಎಂದು ಮಹೇಶ್ ಟೀಕಿಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಡಿನೋಟಿಫಿಕೇಷನ್‍ಗೆ ‘ರೀಡೂ’ ಎಂದು ಮರುನಾಮಕರಣ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಲೋಕಾಯುಕ್ತವನ್ನು ದುರ್ಬಲಗೊಳಿಸಿ ತಮ್ಮ ಮೇಲಿದ್ದ 108 ಪ್ರಕರಣಗಳಲ್ಲಿ 58 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿಕೊಂಡಿದ್ದರು ಎಂದು ಆರೋಪಿಸಿದ ಅವರು, ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಆರೋಪ ಮಾಡುವ ಬದಲು ದಾಖಲೆಗಳಿದ್ದರೆ ಯಾವುದಾದರೂ ತನಿಖಾ ಸಂಸ್ಥೆಗೆ ನೀಡಲಿ ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News