×
Ad

ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ವಿರುದ್ಧ ತೀವ್ರ ಪ್ರತಿಭಟನೆ: ಸುಭಾಷ್ ಶೆಟ್ಟಿ

Update: 2022-10-08 12:20 IST

ಮಂಗಳೂರು, ಅ.8: ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಲಾಗಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯನ್ನು ಹಿಂಪಡೆಯದಿದ್ದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತೀವ್ರ ಹೋರಾಟವನ್ನು ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಮಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಕೊಲ್ನಾಡ್ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ರಾಜ್ ಇಲಾಖೆಗೆ ಸಚಿವರೇ ಇಲ್ಲವಾಗಿದೆ ಎಂದು ಆಕ್ಷೇಪಿಸಿದರು.

ಆಡಳಿತ ವ್ಯವಸ್ಥೆಯಲ್ಲಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ತ್ರಿಸ್ತರದ ಆಡಳಿತ ಜಾರಿಯಲ್ಲಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕಲ್ಪನೆಯಡಿ ಪಂಚಾಯತ್‌ರಾಜ್‌ಗೆ ತಿದ್ದುಪಡಿ ತಂದು ಈ ತ್ರಿಸ್ತರದ ಅಧಿಕಾರ ನೀಡಲಾಗಿತ್ತು. ಬಳಿಕ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರವರು ಗ್ರಾಪಂಗಳನ್ನು ಹೆಚ್ಚಿನ ಅಧಿಕಾರ ವ್ಯಾಪ್ತಿಗೆ ಒಳಪಡಿಸಿದ್ದರೆ, ಸಿದ್ದರಾಮಯ್ಯನವರು ಪಂಚಾಯತ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದ್ದರು. ಆದರೆ ಪ್ರಸಕ್ತ ಬಿಜೆಪಿ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಯೇಟು ನೀಡಿದೆ ಎಂದು ಅವರು ಆರೋಪಿಸಿದರು.

ಗ್ರಾಪಂಗಳಲ್ಲಿ ವ್ಯವಹಾರಗಳ ಹಣಕಾಸಿನ ಚೆಕ್‌ಗೆ ಸಹಿ ಮಾಡುವ ಅಧಿಕಾರವನ್ನು ಈ ಹೊಸ ತಿದ್ದುಪಡಿಯಡಿ ಗ್ರಾಪಂ ಪಿಡಿಒಗೆ ನೀಡಲಾಗಿದೆ. ವ್ಯಾಪಾರ ಸೇರಿದಂತೆ ಪರವಾನಿಗೆ ನೀಡುವ ಅಧಿಕಾರವನ್ನು ಪಿಡಿಒಗೆ ನೀಡಲಾಗಿದೆ. ಈ ಮೂಲಕ ಪಂಚಾಯತ್ ಅಧ್ಯಕ್ಷರ ಅಧಿಕಾರವನ್ನು ಕಸಿಯಲಾಗಿದೆ. 15ನೇ ಹಣಕಾಸು ಯೋಜನೆಯಡಿ ಕೇಂದ್ರ ಪ್ರತಿ ವರ್ಷ ಶೇ.10ರಷ್ಟು ಹಣಕಾಸು ಹೆಚ್ಚಳ ಮಾಡಬೇಕು. ಆದರೆ, ಪ್ರಧಾನಿ ಮೋದಿ ಸರಕಾರ ಶೇ.10ರಷ್ಟು ಅನುದಾನ ಹೆಚ್ಚಿಸುವ ಬದಲು ಶೇ.20ರಷ್ಟು ಅನುದಾನ ಕಡಿತ ಮಾಡಿದೆ. ಗ್ರಾಪಂ ಸಭೆಯಲ್ಲಿ ನಿರ್ಣಯವಾಗಬೇಕಾದ ಕ್ರಿಯಾ ಯೋಜನೆ ಜಿಪಂ, ತಾಪಂ ಅಧಿಕಾರ ವ್ಯಾಪ್ತಿಗೊಳಪಟ್ಟಿದೆ. ಕಳೆದ ಎರಡು ವರ್ಷಗಳಿಂದ ಗ್ರಾಪಂನ ಶಿಫಾರಸು, ಬೇಡಿಕೆ ಇಲ್ಲದೆ ಜಿಪಂ ಹಾಗೂ ತಾಪಂ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಿ ಯೋಜನೆ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಸೋಲಾರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ಐದು ವರ್ಷದ ಅವಧಿಗೆ ಟೆಂಡರ್ ಕರೆಯುವ ಅಧಿಕಾರ ಪಂಚಾಯತ್‌ಗೆ ಇತ್ತು. ಆದರೆ ಅದನ್ನು ಈಗ ರಾಜ್ಯ ಮಟ್ಟದಲ್ಲಿಯೇ ಕಂಪೆನಿಗೆ ವಹಿಸಲಾಗುತ್ತಿದೆ. ಟೆಂಡರ್ ಮೊತ್ತದಿಂದ ಕನಿಷ್ಠ ಒಂದು ಲಕ್ಷ ರೂ.ಗಳಿಗೆ ಕಡಿಮೆಯಲ್ಲಿ ಆಗಬಹುದಾದ ಕಾಮಗಾರಿಯನ್ನು ಈ ರೀತಿ ಸ್ಥಳೀಯರಿಂದ ಕಿತ್ತುಕೊಂಡು ರಾಜ್ಯ ಮಟ್ಟದಲ್ಲಿ ಕಂಪೆನಿಗೆ ನೀಡಿರುವುದು ರಾಜ್ಯ ಸರಕಾರದ ಶೇ.40 ಭ್ರಷ್ಟಾಚಾರವು ಇದೀಗ ಗ್ರಾಮ ಪಂಚಾಯತ್‌ವರೆಗೂ ವ್ಯಾಪಿಸಿರುವ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಸಂತೋಷ್ ಶೆಟ್ಟಿ ಕೊಲ್ನಾಡ್ ಹೇಳಿದರು.

ರಾಜ್ಯ ಸರಕಾರ ಸಕಾರಣ ನೀಡದೆ ಕಳೆದ ಎರಡು ವರ್ಷಗಳಿಂದ ಜಿಪಂ, ತಾಪಂ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಇದು ಪ್ರಜ್ರಾಭುತ್ವ ವ್ಯವಸ್ಥೆಯ ಕಗ್ಗೊಲೆ ಎಂದು ಜಿಪಂ ಮಾಜಿ ಸದಸ್ಯ ಎಂ.ಎಸ್.ಮುಹಮ್ಮದ್ ಆರೋಪಿಸಿದರು.

ಪಂಚಾಯತ್ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಕಿತ್ತುಕೊಂಡು ಶಾಸಕರ ಮೂಲಕ ಅನುದಾನವನ್ನು ಹಂಚಿಕೆ ಮಾಡುವ, ಕಾಮಗಾರಿ ನಡೆಸುವ ಈ ಆಡಳಿತ ವಿಕೇಂದ್ರೀಕರಣದ ವಿರುದ್ಧದ ನಡೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ತಾವು ತಯಾರಿ ನಡೆಸಿರುವುದಾಗಿ ಅವರು ಹೇಳಿದರು.

ಅ.11ರಂದು ಪ್ರತಿಭಟನೆ

ಪಂಚಾಯತ್‌ರಾಜ್ ಕಾನೂನಿಗೆ ತಿದ್ದುಪಡಿ ತರುವ ಆದೇಶದಿಂದ ಆಗುವ ತೊಂದರೆಗಳ ಬಗ್ಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರದಲ್ಲಿ ಅ.11ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮುಹಮ್ಮದ್ ಮೋನು, ನೀರಜ್ ಪಾಲ್, ಅಚ್ಯುತ ಗಟ್ಟಿ, ಹೈದರ್ ಕೈರಂಗಳ, ವೃಂದಾ ಪೂಜಾರಿ, ಜೋಕಿಂ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News