ಭ್ರಷ್ಟಾಚಾರದ ಹಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಜಾಹೀರಾತು: ಮಧು ಬಂಗಾರಪ್ಪ ಆಕ್ರೋಶ

Update: 2022-10-08 14:29 GMT

ಬೆಂಗಳೂರು, ಅ.8: ಬಿಜೆಪಿಯವರು ಭ್ರಷ್ಟಾಚಾರ, ಪಾಪದ ಹಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅತ್ಯಂತ ಕೀಳು ಮಟ್ಟದ, ನೀಚ ಜಾಹೀರಾತುಗಳನ್ನು ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ವೀರೇಂದ್ರ ಪಾಟೀಲ್ ಹಾಗೂ ಬಂಗಾರಪ್ಪ ಅವರ ಭಾವಚಿತ್ರಗಳನ್ನು ಹಾಕಿ, ಸಾಂಧರ್ಬಿಕವಾಗಿ ಆ ನಾಯಕರು ಕೈಗೊಂಡ ಕೆಲವು ನಿರ್ಣಯಗಳನ್ನು ವಿಶ್ಲೇಷಿಸಿ ಜಾಹೀರಾತುಗಳನ್ನು ನೀಡಿದ್ದಾರೆ ಎಂದರು.

ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ 15 ಲಕ್ಷ ರೂ., ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ, ನಿರುದ್ಯೋಗದ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಇದಕ್ಕೆ ಉತ್ತರ ಕೊಡಲು ಸಾಧ್ಯವಾಗದೆ, ಪತ್ರಿಕೆಗಳಲ್ಲಿ ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂದು ಜಾಹೀರಾತು ನೀಡಿದ್ದಾರೆ. ಕರಾವಳಿ ಭಾಗದಲ್ಲಿ ‘ಭೂತದ ಬಾಯಲ್ಲೆ ಭಗವದ್ಗೀತೆ’ ಬರುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮಟ್ಟಿಗೆ ಬೆಳೆಸಿದಂತಹ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಗೋವಿಂದ ಆಚಾರ್ಯ ಈಗ ಎಲ್ಲಿದ್ದಾರೆ? ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಬಿ.ಬಿ.ಶಿವಪ್ಪ, ಎ.ಕೆ.ಸುಬ್ಬಯ್ಯರನ್ನು ಹೇಗೆ ನಡೆಸಿಕೊಂಡಿದ್ದಾರೆ. ಮೋದಿ ಪ್ರಧಾನಿಯಾದ ನಂತರ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಸಂಜಯ್ ಸಿಂಗ್ ಎಲ್ಲಿದ್ದಾರೆ ಅನ್ನೋದರ ಬಗ್ಗೆ ಜಾಹೀರಾತು ನೀಡಿ ತಿಳಿಸಲಿ ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿಯವರಿಗೆ ಶಕ್ತಿ ಬಂದಿದ್ದರೆ ಅದು ಬಂಗಾರಪ್ಪ ಬಿಜೆಪಿಗೆ ಹೋಗಿದ್ದರಿಂದ. ಕೇವಲ 9 ತಿಂಗಳು ಮಾತ್ರ ಅವರು ಬಿಜೆಪಿಯಲ್ಲಿದ್ದರು. ಬಿಜೆಪಿಯವರಿಗೆ ಮಾನ ಮರ್ಯಾದೆ ಇದಿದ್ದರೆ, ಈ ಮೂವರು ನಾಯಕರು ಕೊಟ್ಟಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಿತ್ತು ಎಂದು ಮಧು ಬಂಗಾರಪ್ಪ ಹೇಳಿದರು.

ಯಾರು ತಮ್ಮನ್ನು ಬೆಳೆಸುತ್ತಾರೋ ಅವರನ್ನು ತುಳಿಯುವುದೇ ಬಿಜೆಪಿಯವರ ನೀಚ ಬುದ್ದಿ. ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಯಾರು? ಅವರು ಕೆಜೆಪಿ ಕಟ್ಟಿದ್ದು ಯಾಕೆ? ನರೇಂದ್ರ ಮೋದಿ ವಿಶೇಷ ಸಂದರ್ಭದಲ್ಲಿ ತಮ್ಮ ತಾಯಿಗೆ ತುತ್ತು ತಿನ್ನಿಸಿದರೆ ವಿಜೃಂಭಿಸುವ ಬಿಜೆಪಿಯವರು, ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್ ಕಟ್ಟಿದರೆ ಎಂತಹ ಕೀಳುಮಟ್ಟದ ಟೀಕೆಗಳನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಭಾರತ್ ಜೋಡೋ ಯಾತ್ರೆಯಿಂದ ದೇಶದ ಜನ ರಾಹುಲ್ ಗಾಂಧಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ನಾವು ಭ್ರಷ್ಟಾಚಾರದಿಂದ ಬಂದಿದ್ದೇವೆ. ಸರಕಾರಗಳು ಪ್ರಜಾಪ್ರಭುತ್ವದ ಮಾದರಿಯಲ್ಲಿ ಬರುತ್ತಿಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿಯೆ ಒಪ್ಪಿಕೊಂಡಿದ್ದಾರೆ. ಕನ್ನಡಿಗರಿಗೆ ಮೋಸ ಮಾಡುತ್ತಿರುವುದು ಬಿಜೆಪಿಯವರೇ ಹೊರತು, ನಾವಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಶಾಸಕ ಎನ್.ಎ.ಹಾರೀಸ್ ಮಾತನಾಡಿ, ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗುತ್ತಿದ್ದು, ಜನ ಬೆಂಬಲ ವ್ಯಕ್ತವಾಗುತ್ತಿದೆ ಅನ್ನೋದಕ್ಕೆ ಬಿಜೆಪಿಯವರು ಹತಾಶರಾಗಿ ನೀಡುತ್ತಿರುವ ಜಾಹೀರಾತುಗಳೆ ಸಾಕ್ಷಿ. ದೇವರಾಜ ಅರಸು, ಬಂಗಾರಪ್ಪ, ವೀರೇಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷದಿಂದಲೆ ಮುಖ್ಯಮಂತ್ರಿಯಾದವರು, ಬಡವರ ಪರವಾಗಿ ಕೆಲಸ ಮಾಡಿದವರು ಎಂದರು.

ಪಕ್ಷಾಂತರ ಅನ್ನೋದು ಪ್ರಜಾಪ್ರಭುತ್ವದ ಒಂದು ಭಾಗ. ನಮ್ಮಲ್ಲಿದ್ದ 17 ಜನ ಶಾಸಕರು ನಮ್ಮನ್ನು ಬಿಟ್ಟು ನಿಮ್ಮ ಪಕ್ಷಕ್ಕೆ ಬರಲಿಲ್ಲವೇ? ನಾಳೆ ಅವರು ನಿಮ್ಮ ಪಕ್ಷ ಬಿಟ್ಟು ಹೋದರೆ ಏನು ಹೇಳುತ್ತೀರಾ? ಈ ಮೂವರು ನಾಯಕರಿಗೂ ನಿಮಗೂ ಏನು ಸಂಬಂಧ? ಎಂದು ಹಾರೀಸ್ ಪ್ರಶ್ನಿಸಿದರು.

2019ರಲ್ಲಿ ಗಡಿಯಲ್ಲಿ ನಡೆದ ಘಟನೆ ಬಗ್ಗೆ ತನಿಖೆಯಾಗಿಲ್ಲ, ನೋಟು ರದ್ಧತಿ, ಕಪ್ಪು ಹಣದ ಬಗ್ಗೆ ಬಿಜೆಪಿಯವರು ಜಾಹೀರಾತು ನೀಡಲಿ. ಇವರಿಗೆ ತಾಕತ್ತು ಇದ್ದರೆ ಎಷ್ಟು ಜನರಿಗೆ ಉದ್ಯೋಗ ಕೊಡಿಸಿದ್ದಾರೆ, ಎಷ್ಟು ಜನರಿಗೆ ಕೊಡಿಸುತ್ತಾರೆ ಅನ್ನೋದನ್ನು ಜಾಹೀರಾತು ನೀಡಲಿ. 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆಗಿದೀಯಾ? ಎಂದು ಹಾರೀಸ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News